ಭುವನೇಶ್ವರ: ಒಡಿಯಾ ಚಿತ್ರರಂಗ ಹಾಗೂ ಕಿರುತೆರೆಯ ಜನಪ್ರಿಯ ನಟ ಮಿಹಿರ್ ದಾಸ್ ಅವರು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಟಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು. ಅವರು ಪತ್ನಿ ಹಾಗೂ ಗಾಯಕಿ ಸಂಗೀತಾ ದಾಸ್ ಹಾಗೂ ಮಗನನ್ನು ಅಗಲಿದ್ದಾರೆ.
ಫೆಬ್ರವರಿ 11, 1959 ರಂದು ಮಯೂರ್‌ಭಂಜ್ ಜಿಲ್ಲೆಯ ಬರಿಪದ್ ಎಂಬಲ್ಲಿ ಜನಿಸಿದ್ದ ಅವರು ಸ್ಕೂಲ್ ಮಾಸ್ಟರ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿದ್ದರು. 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರಿಗೆ ‘ಪು ಮೊರಾ ಭೋಲಾ ಶಂಕರ್’ ಸಿನಿಮಾ ಬಹು ದೊಡ್ಡ ಹೆಸರು ತಂದು ಕೊಟ್ಟಿತ್ತು.
ಒಡಿಯಾ ಸಿನಿಮಾಗಳಲ್ಲಿ ಒಡಿಶಾದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿದ್ದ ಅವರ ನಿಧನಕ್ಕೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಿಕ್ ಅವರು ಮರಳು ಕಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕಟಕ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಿಹಿರ್ ದಾಸ್ ಅವರ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.