ಅಬುದಾಭಿಯಲ್ಲಿ ನಡೆದ ‘ಐಐಎಫ್‌ಎ–2023‘ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ ಬಾಲಿವುಡ್ ನಟ ವಿಕ್ಕಿ ಕೌಶಾಲ್ ಅವರನ್ನು ತಳ್ಳಿ ಹಾಕುವ ಮೂಲಕ ಅವಮಾನ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಚಾರವಾಗಿ ವಿಕ್ಕಿ ಕೌಶಾಲ್ ಸ್ಪಷ್ಟನೆ ನೀಡಿದ್ದಾರೆ. ‘ಕೆಲವೊಮ್ಮೆ ವಿಡಿಯೋದಲ್ಲಿ ನೋಡಿದ ವಿಷಯಗಳು ವಾಸ್ತವದಲ್ಲಿ ಭಿನ್ನವಾಗಿರುತ್ತದೆ‘ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದು, ವಿಡಿಯೊದಲ್ಲಿ ವಿಕ್ಕಿ ಕೌಶಾಲ್ ಅವರು ಅಭಿಮಾನಿಯೊಬ್ಬರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ವೇಳೆ ಸಲ್ಮಾನ್ ಖಾನ್ ಆ ಮಾರ್ಗವಾಗಿಯೇ ಬಂದಿದ್ದರು. ಈ ವೇಳೆ ಸ್ಥಳದಲ್ಲಿ ಗದ್ದಲ ಉಂಟಾಗಿತ್ತು. ಗದ್ದಲದ ನಡುವೆ ಭದ್ರತಾ ಸಿಬ್ಬಂದಿ ವಿಕ್ಕಿ ಕೌಶಾಲ್ ಅವರನ್ನು ಬದಿಗೆ ತಳ್ಳಿದ ಹಾಗೆ ವಿಡಿಯೊದಲ್ಲಿ ಬಿಂಬಿತವಾಗಿತ್ತು. ವಿಡಿಯೊ ನೋಡಿದ ನೆಟ್ಟಿಗರು ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ ವಿಕ್ಕಿ ಕೌಶಾಲ್ ಅವರನ್ನು ತಳ್ಳುವ ಮೂಲಕ ನಟನಿಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ವಿಕ್ಕಿ ಕೌಶಾಲ್ ಸುದ್ದಿ ಸಂಸ್ಥೆ ಪಿಟಿಐಗೆ ಸ್ಪಷ್ಟನೆ ನೀಡಿದ್ದಾರೆ. ‘ಕೆಲವೊಮ್ಮೆ ವಿಷಯಗಳು ಎಲ್ಲೆಯನ್ನು ಮೀರಿ ಹೋಗುತ್ತವೆ. ಇಂತಹ ವಿಷಯಗಳ ಬಗ್ಗೆ ಮಾತನಾಡುವುದು ವ್ಯರ್ಥ ಕಾಲಹರಣ. ಕೆಲವೊಮ್ಮೆ ವಿಡಿಯೋದಲ್ಲಿ ನೋಡಿದ ವಿಷಯಗಳು ವಾಸ್ತವದಲ್ಲಿ ಭಿನ್ನವಾಗಿರುತ್ತದೆ‘ ಎಂದು ಹೇಳಿದರು.
ಕಾರ್ಯಕ್ರಮದ ನಂತರ ಸಲ್ಮಾನ್ ಖಾನ್ ವಿಕ್ಕಿ ಕೌಶಾಲ್ ಅವರನ್ನು ತಬ್ಬಿಕೊಳ್ಳುವ ಮೂಲಕ ಇದೊಂದು ಆಕಸ್ಮಿಕ ಎಂಬ ಸಂದೇಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.