ಕೆಲಸವಿಲ್ಲವೆಂದು ನನ್ನ ತಂದೆ ಶಾಮ್ ಕೌಶಲ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದರು ಎಂದು ಬಾಲಿವುಡ್ ನಟ ವಿಕ್ಕಿ ಕೌಶಲ್ ಪಾಡ್‌ಕಾಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ತಮ್ಮ ಮುಂದಿನ ಸಿನಿಮಾ ‘ಬ್ಯಾಡ್ ನ್ಯೂಸ್’ ಪ್ರಚಾರದಲ್ಲಿದ್ದಾರೆ. ರಾಜ್ ಶರ್ಮಾನಿ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ತಮ್ಮ ವೃತ್ತಿ ಜೀವನದ ಆರಂಭ ಹಾಗೂ ತಂದೆಯ ಕಷ್ಟಗಳ ಬಗ್ಗೆ ಮಾತನಾಡಿರುವ ನಟ ‘ಕೆಲಸವಿಲ್ಲವೆಂದು ನನ್ನ ತಂದೆ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದರು. ಪರಿಸ್ಥಿತಿ ಆರ್ಥಮಾಡಿಕೊಂಡ ನನ್ನ ಅಜ್ಜ, ಅವರನ್ನು ಮುಂಬೈಗೆ ಕಳಿಸಿಕೊಟ್ಟರು. ನಂತರ ಅವರು ಮುಂಬೈನಲ್ಲಿ ಸಾಹಸ ನಿರ್ದೇಶಕರಾಗಿ ವೃತ್ತಿ ಕಟ್ಟಿಕೊಂಡರು. ನಾನು ಕೂಡ ಎಲ್ಲರಂತೆ 9ರಿಂದ 5ಗಂಟೆಯ ಕೆಲಸ ಮಾಡಬೇಕಾಗಿತ್ತು. ಪೋಷಕರೆದುರು ನಟನಾಗುವ ಆಸೆ ವ್ಯಕ್ತಪಡಿಸಿದಾಗ, ಸಿನಿಮಾ ರಂಗದಲ್ಲಿ ತನಗೆ ಅಷ್ಟೇನೂ ಹಿಡಿತವಿಲ್ಲದ ಕಾರಣ ನಿನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ತಂದೆ ಹೇಳಿದ್ದರು’ ಎಂದು ಹೇಳಿಕೊಂಡಿದ್ದಾರೆ.
ನನ್ನ ತಂದೆ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮಾಡಿದ್ದರೂ ಕೆಲಸ ಸಿಕ್ಕಿರಲಿಲ್ಲ. ಒಂದು ದಿನ ಸ್ನೇಹಿತರ ಜೊತೆ ಕುಡಿದು, ಸಾಯಲು ಹೊರಟಿದ್ದರು. ನನ್ನ ಅಜ್ಜ, ಅವರ ಪರಿಸ್ಥಿತಿ ಆರ್ಥಮಾಡಿಕೊಂಡು ಅವರನ್ನು ಕೆಲಸ ಹುಡುಕುವಂತೆ 1978ರಲ್ಲಿ ಮುಂಬೈಗೆ ಕಳಿಸಿದರು. ಪಂಜಾಬ್‌ನ ಹಳ್ಳಿಯಲ್ಲಿ ಅಜ್ಜ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದರು, ಅಲ್ಲಿ ನಮಗೆ ಯಾವುದೇ ಜಮೀನು ಇಲ್ಲ. ಹಾಗಾಗಿ ನಾನೂ ಕೂಡ ಬೇರೆ ಕೆಲಸ ಮಾಡಬೇಕು ಎನ್ನುವುದು ನನ್ನ ಪೋಷಕರ ಯೋಚನೆಯಾಗಿತ್ತು ಎಂದಿದ್ದಾರೆ.
‘ಮುಂಬೈಗೆ ಬಂದ ಆರಂಭಿಕ ದಿನಗಳಲ್ಲಿ ನನ್ನ ತಂದೆ ಹಲವು ರೀತಿಯ ಕಷ್ಟಪಟ್ಟಿದ್ದಾರೆ. ಊರಿನಲ್ಲಿ ಯಾರಿಗೂ ತಿಳಿಯುವುದಿಲ್ಲ ಎಂದು ನನ್ನ ತಂದೆ ಸ್ಪಚ್ಚತಾ ಸಿಬ್ಬಂದಿಯಾಗಿ ಕೆಲಸ ಮಾಡಲು ಬಯಸಿದ್ದರು. ಏಕೆಂದರೆ ಸಿನಿಮಾ ರಂಗದಲ್ಲಿ ಉದ್ಯೋಗ ಸುರಕ್ಷತೆಯಿಲ್ಲ. ಈಗ ಒಂದು ಪ್ರಾಜೆಕ್ಟ್‌ನಲ್ಲಿ ಕೆಲಸವಿರಬಹುದು, ಆದರೆ ಇನ್ನೊಂದರಲ್ಲಿ ಕೆಲಸ ಸಿಗುವ ಭರವಸೆಯಿಲ್ಲ‘ ಎಂದರು.
ಶಾಮ್ ಕೌಶಲ್ ಅವರು ಬಾಲಿವುಡ್‌ನ ಪ್ರಸಿದ್ಧ ಸಾಹಸ ನಿರ್ದೇಶಕರಾಗಿದ್ದು, ದಂಗಲ್, ಡಾನ್, ಬಾಜಿರಾವ್ ಮಸ್ತಾನಿ, ಪದ್ಮಾವತ್, ಕ್ರಿಶ್ 3, ಭಜರಂಗಿ ಬಾಯಿಜಾನ್, ಮುಂತಾದ ಸಿನಿಮಾಗಳ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ನನ್ನ ಪ್ರಯತ್ನಕ್ಕೆ ಕುಟುಂಬದವರು ಸಹಾಯ ಮಾಡಿದ್ದು, ಇದೀಗ ಅದು ಫಲಕೊಡುತ್ತಿದೆ. ನನ್ನ ಯಶಸ್ಸಿಗೆ ಕುಟುಂಬದವರು ಸಂತೋಷ ಪಡುತ್ತಿದ್ದಾರೆ ಎಂದು ಪಾಡ್‌ಕಾಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.