ADVERTISEMENT

ಬಿ ಟೌನ್‌ನ ‘ಟಾರ್ಜಾನ್‌’ ಜಮ್‌ವಾಲ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 20:00 IST
Last Updated 4 ಮಾರ್ಚ್ 2019, 20:00 IST
‘ಜಂಗ್ಲಿ’ಯಲ್ಲಿ ವಿದ್ಯುತ್‌ ಜಮ್‌ವಾಲ್‌
‘ಜಂಗ್ಲಿ’ಯಲ್ಲಿ ವಿದ್ಯುತ್‌ ಜಮ್‌ವಾಲ್‌   

ಬಹುಭಾಷಾ ನಟ ವಿದ್ಯುತ್‌ ಜಮ್‌ವಾಲ್ ಮುಡಿಗೆ ಈಗಾಗಲೇ ಕೆಲವು ಹೆಗ್ಗಳಿಕೆಯ ಗರಿಗಳು ಏರಿವೆ. ‘ಜಂಗ್ಲಿ’ ಚಿತ್ರೀಕರಣ ಶುರುವಾದಾಗಿನಿಂದ ಅವರನ್ನು ‘ಬಾಲಿವುಡ್‌ನ ಟಾರ್ಜಾನ್‌’ ಎಂದೇ ಎಲ್ಲರೂ ಕರೆಯುತ್ತಿದ್ದಾರೆ.ಕೆಲದಿನಗಳ ಹಿಂದೆ ಬಿಡುಗಡೆಯಾದ ‘ಜಂಗ್ಲಿ’ ಟೀಸರ್‌ ನೋಡಿದವರಿಗೆ ವಿದ್ಯುತ್‌, ಟಾರ್ಜಾನ್‌ನಂತೆ ಕಂಡಿದ್ದರಲ್ಲಿ ಅಚ್ಚರಿಯಿಲ್ಲ.

ದಟ್ಟವಾದ ಅರಣ್ಯದಲ್ಲಿ ‘ಟಾರ್ಜಾನ್‌’ ನಡೆಸುವಂತಹ ಕಸರತ್ತುಗಳು ‘ಜಂಗ್ಲಿ’ಯಲ್ಲಿವೆ. ಹೇಳಿಕೇಳಿ, ‘ಮಸಲ್‌ಮ್ಯಾನ್‌’ ವಿದ್ಯುತ್‌,’ಬಾಲಿವುಡ್‌ನ ಹೊಸ ತಲೆಮಾರಿನ ಆ್ಯಕ್ಷನ್ ಹೀರೊ’. ಕೇರಳದಲ್ಲಿಯೇ ಬೀಡುಬಿಟ್ಟು ಅಲ್ಲಿನ ಸಾಂಪ್ರದಾಯಿಕ ಮಾರ್ಷಲ್‌ ಆರ್ಟ್‌ ಕಳರಿಪಯಟ್ಟುವಿನಲ್ಲಿ ಮಾಸ್ಟರ್‌ ಎನಿಸಿಕೊಂಡಿರುವ ಈ ಸಾಹಸಿ, ‘ಜಂಗ್ಲಿ’ಯಲ್ಲಿನ ಸಾಹಸದೃಶ್ಯಗಳನ್ನು ಸ್ವತಃ ವಿನ್ಯಾಸ ಮಾಡಿದವರು.

ಆನೆಯ ಮೇಲೆ ಕುಳಿತು ಕಾಡಿನ ಸಂರಕ್ಷಕನಾಗಿ, ಕಾಡುಗಳ್ಳರ ಪಾಲಿನ ದುಃಸ್ವಪ್ನವಾಗಿ ಕಾಡುವ ಸಮರವೀರನ ಪಾತ್ರ ಜಂಗ್ಲಿಯದು. ವಿದ್ಯುತ್‌ಗೆ ಅವೆಲ್ಲ ಸಾಹಸಗಳು ಲೀಲಾಜಾಲ.

ADVERTISEMENT

ಕಾಯದ ಕಟ್ಟುಮಸ್ತು ನಿತ್ಯ ಕಾಯಕ
ವಿದ್ಯುತ್‌ ಜಮ್‌ವಾಲ್‌ ಅವರ ದೇಹವನ್ನು ನೋಡಿದರೆ ಕಬ್ಬಿಣದ ದಿಮ್ಮಿಯಂತೆ ಭಾಸವಾಗುತ್ತದೆ. ಮಾಂಸಖಂಡಗಳ ಬಿಗಿತನ, ಒರಟು ಮುಖದಲ್ಲಿ ಸೆಳೆಯುವ ಬಾಣದಂತಹ ಕಣ್ಣೋಟ, ಕಲಿತ ಸಾಹಸ ಕಲೆಯನ್ನು ಇನ್ನಷ್ಟು ಪಳಗಿಸಲು ಅವಕಾಶವಿರುವ ಪಾತ್ರಗಳ ಆಯ್ಕೆ... ವಿದ್ಯುತ್‌ ವೃತ್ತಿಪರತೆಗೆ ಅವರು ಕೆಲಸ ಮಾಡಿದ ನಿರ್ದೇಶಕರೆಲ್ಲರೂ ಹುಜೂರ್‌ ಅಂದವರೇ.

ಯಾವುದೋ ಚಿತ್ರಕ್ಕಾಗಿಯೋ, ಒಂದು ಪಾತ್ರಕ್ಕಾಗಿಯೋ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡು ಮಾಧ್ಯಮಗಳಲ್ಲಿ ಸುದ್ದಿಯಾಗುವ ನಟರಿಗೇನೂ ಕಮ್ಮಿಯಿಲ್ಲ. ವಿದ್ಯುತ್‌ ಆ ಸಾಲಿಗೆ ಸೇರುವ ನಟರಲ್ಲ. ಕಾರಣ, ಅನವಶ್ಯಕ ಕೊಬ್ಬು ಬೆಳೆಯಲು ಅವಕಾಶವೇ ಇಲ್ಲದಂತಹ ದಿನಚರಿ ಮತ್ತು ಆಹಾರ ಕ್ರಮ ಅವರದು. ದೇಹದ ಕ್ಷಮತೆ, ಮಾಂಸಖಂಡಗಳ ಬಿಗಿತನ ಕಾಪಾಡಿಕೊಳ್ಳಲು ದಿನಾ ಜಿಮ್‌ಗೇ ಹೋಗುವುದಿಲ್ಲ. ಜಿಮ್‌ಗೆ ಹೋಗಲು ಅವಕಾಶ ಸಿಗದಷ್ಟು ಬ್ಯುಸಿ ಇದ್ದರೂ ಚಿಂತೆ ಮಾಡುವುದಿಲ್ಲ. ಕಾರಾವನ್‌ನಲ್ಲಿ ಜಿಮ್‌ ಕೂಡಾ ಇರುತ್ತದೆ ಎಂದುಕೊಂಡಿರಾ?

ವಿದ್ಯುತ್‌, ಜಿಮ್‌ನಲ್ಲೇ ಬೆವರು ಸುರಿಸಿ ದೇಹಕ್ಷಮತೆ ಕಾಪಾಡಿಕೊಳ್ಳುವ ಜಾಯಮಾನದವರಲ್ಲ. ‘ಜಿಮ್‌ನಲ್ಲಿ ಎಷ್ಟೇ ಕಸರತ್ತು ಮಾಡಿದರೂ ಒಂದು ವ್ಯಾಯಾಮದಲ್ಲಿ ಏಕಕಾಲಕ್ಕೆ ಎರಡು ಮಸಲ್‌ಗಳ ಮೇಲೆ ಪರಿಣಾಮ ಬೀರಬಹುದು. ಮಾರ್ಷಲ್‌ ಆರ್ಟ್‌ ಅಭ್ಯಾಸ ಮತ್ತು ಅದನ್ನು ಪ್ರಾಣಿಗಳ ಚಲನೆಗೆ ಅಳವಡಿಸಿ ಅಭ್ಯಾಸ ಮಾಡಿಕೊಂಡರೆ ಏಕಕಾಲಕ್ಕೆ ಹಲವು ಬಗೆಯಲ್ಲಿ ಫಲಿತಾಂಶ ಪಡೆಯಬಹುದು’ ಎಂಬುದು ವಿದ್ಯುತ್‌ ಅನುಭವದ ಮಾತು.

ಮಾರ್ಷಲ್‌ ಆರ್ಟ್‌ಗಳಲ್ಲಿ ಕೇರಳದಲ್ಲಿ ಪಳಗಿದರೂ ವಿದೇಶಗಳಲ್ಲಿ ಇನ್ನಷ್ಟು ತರಬೇತಿ ಪಡೆದು ಬಂದಿದ್ದಾರೆ ವಿದ್ಯುತ್‌. ‘ಜಂಗ್ಲಿ’ಗಾಗಿ ಮಾರ್ಷಲ್‌ ಆರ್ಟ್‌ ಕಸರತ್ತುಗಳಿಗೆ ಸಾಂಪ್ರದಾಯಿಕವಲ್ಲದ ಮಟ್ಟುಗಳನ್ನು ಬೆರೆಸಿ ಯಶಸ್ವಿಯಾಗಿದ್ದಾರೆ. ಕಾಡುಪ್ರಾಣಿಗಳ ಚಲನೆ, ಓಟ, ಹೋರಾಟದ ಸಂದರ್ಭಗಳಲ್ಲಿ ಅವು ಬಳಸುವ ತಂತ್ರಗಾರಿಕೆಗಳನ್ನು ವಿದ್ಯುತ್‌ ಇಲ್ಲಿ ಅಳವಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ, ಚಿತ್ರೀಕರಣದ ಸೆಟ್‌ನಲ್ಲಿ, ಉಳಿದುಕೊಂಡ ಟೆಂಟ್‌ನಲ್ಲಿಯೇ ಭಾರ ಎತ್ತುವ, ಹಾವುಗಳೊಂದಿಗೆ ಸರಸವಾಡುವ ತರಬೇತಿಗಳನ್ನೂ ಅವರು ಪಡೆದಿದ್ದಾರೆ. ದೈಹಿಕ ಕ್ಷಮತೆಯೆಂದರೆ ಬರಿಯ ಮಾಂಸಖಂಡಗಳನ್ನು ಹುರಿಗೊಳಿಸುವುದಲ್ಲ, ಮಾನಸಿಕ ಶಕ್ತಿ ಮತ್ತು ಏಕಾಗ್ರತೆಯ ಸಾಮರ್ಥ್ಯವೂ ದೈಹಿಕ ಕ್ಷಮತೆಯೇ ಎಂಬುದು ವಿದ್ಯುತ್‌ ನಂಬಿಕೆ.

’ಜಂಗ್ಲಿ’ಯಲ್ಲಿ ವಿದ್ಯುತ್‌ ಜಮ್‌ವಾಲ್‌

‘ಜಂಗ್ಲಿ’ ಏಪ್ರಿಲ್‌ 5ರಂದು ಬಿಡುಗಡೆಯಾಗಲಿದೆ. ಆದರೆ ಮಾರ್ಚ್‌ ಆರರಂದು ಬಿಡುಗಡೆಯಾಗುವ ಟ್ರೇಲರ್‌ ಚಿತ್ರದ ಬಗ್ಗೆ ಇನ್ನಷ್ಟು ಹೊಸ ಹೊಳಹುಗಳನ್ನು ಮುಂದಿಡಲಿದೆ.

ಮೋಟಾರ್‌ಬೈಕ್‌ನಲ್ಲಿ ಕಾಡು ರಸ್ತೆಯಲ್ಲಿ ಮುನ್ನುಗ್ಗುವ ವಿದ್ಯುತ್‌, ಯಾವ ಸಾಹಸ ಮಾಡುತ್ತಾನೆ ಎಂಬುದನ್ನೂ ತಿಳಿಸುತ್ತದೋ ಕಾದುನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.