ಸುಶಾಂತ್ ಸಿಂಗ್ ರಜಪೂತ್ ಅಥವಾ ಶೋಕಸಾಗರದಲ್ಲಿ ಮುಳುಗಿರುವ ಆತನ ಕುಟುಂಬ ಈ ಟ್ವೀಟ್‌ಗಳನ್ನು ಓದುವುದಿಲ್ಲ. ಸುಶಾಂತ್‌ನೇ ಹೋದ ಮೇಲೆಈ ಬಾಲಿವುಡ್ ಜನರ ಈ ಟ್ವೀಟ್‌ಗಳು ಯಾರಿಗಾಗಿ ಮತ್ತು ಯಾವ ಪುರುಷಾರ್ಥಕ್ಕಾಗಿ?
ಇಂಥದೊಂದು ಮಾರ್ಮಿಕ ಪ್ರಶ್ನೆ ಎತ್ತಿದವರು ಸುಶಾಂತ್ ಸಮಕಾಲೀನ ನಟ ವಿದ್ಯುತ್ ಜಾಮ್‌ವಾಲಾ. ಇವರು, ಸುಶಾಂತ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನಿಕರ ವ್ಯಕ್ತಪಡಿಸುತ್ತಿರುವ ಬಾಲಿವುಡ್ ಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಒಬ್ಬ ಪ್ರತಿಭಾವಂತ ನಟನನ್ನು ನಮ್ಮಿಂದ ಉಳಿಸಿಕೊಳ್ಳಲಾಗಲಿಲ್ಲ. ಜೀವಂತವಿದ್ದಾಗ ಆತನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಹೆಜ್ಜೆ, ಹೆಜ್ಜೆಗೂ ಅವಮಾನ ಮಾಡಿದೆವು. ಈಗ ಹೇಳುವ ಒಂದೆರೆಡು ಸಾಂತ್ವನದ ಮಾತುಗಳನ್ನು ಆಗಲೇ ಹೇಳಿದ್ದರೆ ಆತ ಇಂದು ನಮ್ಮೊಂದಿಗೆ ಬದುಕಿ ಉಳಿಯುತ್ತಿದ್ದನೇನೋ! ಆತ ಹೋದ ಮೇಲೆ ಟ್ವಿಟರ್‌ನಲ್ಲಿ ಕಣ್ಣೀರು ಸುರಿಸುವುದರಲ್ಲಿ ಅರ್ಥವಿಲ್ಲ’ ಎಂದು ವಿದ್ಯುತ್ ತಣ್ಣನೆಯ ಶಾಕ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇದೂವರೆಗೂ ಸುಶಾಂತ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಒಂದು ಟ್ವೀಟ್ ಕೂಡ ಮಾಡಿಲ್ಲ. ಬಾಲಿವುಡ್‌ನ ಎಲ್ಲರೂ ಟ್ವೀಟ್ ಮಾಡಿ ದುಃಖ ತೋಡಿಕೊಳ್ಳುವಾಗ ಜಾಮ್‌ವಾಲಾಗೆ ಏನಾಗಿದೆ ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದರು.
ಅದಕ್ಕೆ ವಿದ್ಯುತ್ ಹೀಗೆ ಟ್ವೀಟ್‌ನಲ್ಲಿ ಹೇಳಿದ್ದಾರೆ ; ‘ಸುಶಾಂತ್‌ಗಾಗಿ ಮನಸ್ಸು ಮೌನವಾಗಿ ರೋದಿಸುತ್ತಿದೆ. ಆತನನ್ನು ನೆನಪಿಸಿಕೊಳ್ಳವುದೇ ನಾನು ಅವನಿಗೆ ಸಲ್ಲಿಸುವ ಶ್ರದ್ಧಾಂಜಲಿ. ಕೆಲವೊಮ್ಮೆ ನಿಶ್ಯಬ್ದಕ್ಕೆ ಇರುವಷ್ಟು ಶಕ್ತಿ ಶಬ್ದಗಳಿಗೆ ಇರುವುದಿಲ್ಲ. ಶಬ್ದಗಳ ಹಂಗಿಲ್ಲದ ಮೌನವೇ ಕೆಲವೊಮ್ಮೆ ಹೆಚ್ಚು ಮಾತನಾಡುತ್ತದೆ. ಮೌನವು ದುಃಖ ವ್ಯಕ್ತಪಡಿಸುವ ಒಂದು ಮಾರ್ಗ ಕೂಡ ಹೌದು. ನನಗೆ ಕಣ್ಣೀರು ಬರುವುದಿಲ್ಲ. ಆಕರ್ಷಕವಾಗಿ ಪದಪುಂಜಗಳನ್ನು ಪೋಣಿಸಿ ಕಾವ್ಯಾತ್ಮಕವಾಗಿ ಟ್ವೀಟ್ ಮಾಡಲು ಬರುವುದಿಲ್ಲ. ಸುಶಾಂತ್ ಆಗಲಿ, ಆತನ ಕುಟುಂಬವಾಗಲಿ ನಮ್ಮ ಟ್ವೀಟ್ ಓದುವುದಿಲ್ಲ. ಮತ್ತೆ ಯಾರಿಗಾಗಿ ನಾನು ಟ್ವೀಟ್ ಮಾಡಲಿ’ ಎಂದು ಪ್ರಶ್ನಿಸಿದ್ದಾರೆ.
ವಿದ್ಯುತ್ ಅವರಂತೆ ನಟ ಸೈಫ್ ಅಲಿ ಖಾನ್ ಕೂಡ ಸುಶಾಂತ್‌ಗಾಗಿ ಮರಗುತ್ತಿರುವ ಬಾಲಿವುಡ್ ಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ಸುಶಾಂತ್ ಸಿಂಗ್ ಬಗ್ಗೆ ಬಾಲಿವುಡ್ ಜನರಿಗೆ ಒಮ್ಮೆಲೇ ಎಲ್ಲಿಲ್ಲದ ಪ್ರೀತಿ, ಕನಿಕರ ಉಕ್ಕಿ ಹರಿಯುತ್ತಿದೆ. ಇದು ಬರೀ ಬೂಟಾಟಿಕೆ. ಪಾಪ, ಆ ಬಡಪಾಯಿ ಸಾವಿನಲ್ಲೂ ಈ ಜನರಿಗೆ ಹೆಸರು ಮಾಡುವ ಹಪಾಹಪಿ’ ಎಂದು ಅವರು ಟೀಕಿಸಿದ್ದರು.
‘ಸುಶಾಂತ್ ಸಾವಲ್ಲ, ಏನೇ ನಡೆದರೂ ಕೈಯಲ್ಲಿರುವ ಮೊಬೈಲ್‌ನಲ್ಲಿ ಪಟಪಟನೆ ಟೈಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿಬಿಡುವುದು ಕೆಲವರ ಗೀಳು. ಪೋಸ್ಟ್‌ಗಳಿಗೆ ಬರುವ ಬರುವ ಲೈಕ್, ಕಮೆಂಟ್ ನೋಡುವುದು ನಿತ್ಯದ ಕಾಯಕ. ಇದು ಪೋಸ್ಟ್, ಕಮೆಂಟ್ ಮಾಡುವ ಕಾಲವಲ್ಲ. ಮೌನ ಮತ್ತು ಆತ್ಮಾವಲೋಕನದ ಕಾಲ. ಬರೀ ಸುಶಾಂತ್ ಬಗ್ಗೆ ಮಾತ್ರವಲ್ಲ, ಯಾರ ಬಗ್ಗೆಯೂ ತಲೆ ಕೆಡಸಿಕೊಳ್ಳದ ಕೆಲವರು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಆತನ ಬಗ್ಗೆ ಪ್ರೀತಿಯ ಹೊಳೆಯನ್ನೇ ಹರಿಸುತ್ತಿದ್ದಾರೆ. ಅಪಾರ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಜೀವನಪ್ರೀತಿ, ಮಾನವೀಯತೆ ಬಗ್ಗೆ ಪುಂಖಾನುಪುಂಖವಾಗಿ ಬರೆಯುತ್ತಿದ್ದಾರೆ, ಮಾತನಾಡುತ್ತಿದ್ದಾರೆ’ ಎಂದು ಎಂದು ಸೈಫ್ ಸಂದರ್ಶನವೊಂದರಲ್ಲಿ ಹರಿಹಾಯ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.