ADVERTISEMENT

ನಂದೇನೂ ಇಲ್ಲ ಭಟ್ರದ್ದೇ ಎಲ್ಲಾ...

ವಿಜಯ್ ಜೋಷಿ
Published 21 ಮಾರ್ಚ್ 2019, 19:45 IST
Last Updated 21 ಮಾರ್ಚ್ 2019, 19:45 IST
ವಿಹಾನ್ ಗೌಡ
ವಿಹಾನ್ ಗೌಡ   

ವಿಹಾನ್ ಗೌಡ ಫುಲ್‌ ಖುಷಿಯಲ್ಲಿ ಇದ್ದಾರೆ. ಹೊಸ ಕಥೆಯೊಂದಕ್ಕೆ ಹಳೆಯ ಹೆಸರು ಹೊತ್ತುಕೊಂಡಿರುವ ಅವರ ಸಿನಿಮಾ ಮುಂದಿನ ವಾರ ತೆರೆಗೆ ಬರುತ್ತಿದೆ. ವಿಹಾನ್ ನಟಿಸಿರುವ ಚಿತ್ರದ ಹೆಸರು ‘ಪಂಚತಂತ್ರ’. ಅದರ ನಿರ್ದೇಶಕರು ಯೋಗರಾಜ ಭಟ್ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

‘ಸಿನಿಮಾ ರಂಗದಲ್ಲಿ ನನಗೆ ಪರಿಚಿತರು ಅಷ್ಟೇನೂ ಇಲ್ಲ. ಇಲ್ಲಿ ನನಗೆ ಭಟ್ಟರೇ ಎಲ್ಲ’ ಎನ್ನುವ ವಿಹಾನ್ ‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದರು. ವಿಹಾನ್ ಅವರು ಮಾತಿನುದ್ದಕ್ಕೂ ಉಲ್ಲೇಖಿಸಿದ್ದು ಭಟ್ಟರ ಜೊತೆಗಿನ ಒಡನಾಟವನ್ನು, ಅವ ರಿಂದ ಕಲಿತ ಕೆಲಸವನ್ನು. ವಿಹಾನ್ ಜೊತೆಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಎರಡನೆಯ ಸಿನಿಮಾದಲ್ಲಿ ಯೋಗರಾಜ ಭಟ್ಟರಂತಹ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅಷ್ಟಕ್ಕೂ, ಈ ಅವಕಾಶ ಸಿಕ್ಕಿದ್ದು ಹೇಗೆ?

ADVERTISEMENT

‘ಕಾಲ್ಕೇಜಿ ಪ್ರೀತಿ’ ಸಿನಿಮಾ ಮೂಲಕ ನನಗೆ ಭಟ್ಟರ ಪರಿಚಯ ಆಗಿತ್ತು. ಆ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸಿದ್ದು ಕೂಡ ಅವರೇ. ಅಂದಿನಿಂದಲೇ ನನಗೆ ಭಟ್ಟರ ಪರಿಚಯ ಇತ್ತು. ಅವರ ಸಿನಿಮಾದಲ್ಲಿ ನನಗೊಂದು ಅವಕಾಶ ಕೊಡುವುದಾಗಿ ಬಹಳ ಸಲ ಹೇಳಿದ್ದರು.

ನನಗೆ ಸಿನಿಮಾ ಉದ್ಯಮದಲ್ಲಿ ಹೆಚ್ಚಿನ ಸಂಪರ್ಕ ಇಲ್ಲ. ನಟ ಆಗಬೇಕು ಅಂದುಕೊಂಡು ಇದ್ದವನಲ್ಲ, ಸಿನಿಮಾ ರಂಗಕ್ಕೆ ಬರಲೇಬೇಕು ಎಂದು ಬಂದವನೂ ಅಲ್ಲ. ನಿರ್ದೇಶಕ ಕ್ರಿಸ್ ಜೋಷಿ ನನ್ನನ್ನು ಭಟ್ಟರಿಗೆ ಪರಿಚಯ ಮಾಡಿಸಿದ್ದು. ‘ಕಾಲ್ಕೇಜಿ ಪ್ರೀತಿ’ ಚಿತ್ರದಲ್ಲಿ ನಾನು ನಟಿಸಿದ್ದನ್ನು ನೋಡಿ ಭಟ್ಟರು ಮೆಚ್ಚಿಕೊಂಡಿದ್ದರು. ಮನೆ – ಕಾಲೇಜು ಹಾಗೂ ಯೋಗರಾಜ ಭಟ್ರು... ಇಷ್ಟರಲ್ಲೇ ಇದ್ದೆ ನಾನು.

ಇದು ಭಟ್ಟರು ನನಗಾಗಿ ಮಾಡಿದ ಸಿನಿಮಾ ಅಂತೇನೂ ಅಲ್ಲ. ಇದು ಅವರದ್ದೇ ಸಿನಿಮಾ. ಇಪ್ಪತ್ತು ವರ್ಷ ವಯಸ್ಸಿನವಂತೆ ಕಾಣಿಸುವ, ಚಿತ್ರ ಸಾಗಿದಂತೆ ಪ್ರಬುದ್ಧನಂತೆಯೂ ಕಾಣಿಸುವ ನಟ ಅವರಿಗೆ ಬೇಕಿತ್ತು. ಹಾಗೆಯೇ, ಅವರಿಗೆ ವೈರುಧ್ಯಗಳನ್ನು ಕೂಡ ಹೊತ್ತುಕೊಂಡ ಮುಖ ಬೇಕಿತ್ತು. ಭಟ್ಟರು ಈ ಚಿತ್ರಕ್ಕಾಗಿ ಆಡಿಷನ್ ನಡೆಸುತ್ತಿದ್ದರಂತೆ. ಆ ಹೊತ್ತಿನಲ್ಲಿ ಅವರಿಗೆ ನಾನು ನೆನಪಾದೆ. ಅವರು ನನ್ನನ್ನು ಕರೆಸಿದರು. ಆ ಮೂಲಕ ನಾನು ಈ ಸಿನಿಮಾಕ್ಕೆ ಆಯ್ಕೆಯಾದೆ.

ಹಿಂದೆ ಅಭಿನಯಿಸಿದ್ದ ಚಿತ್ರ ಹಾಗೂ ಈಗಿನ ಚಿತ್ರದ ನಡುವೆ ಯಾವ ರೀತಿಯ ವ್ಯತ್ಯಾಸ ಗುರುತಿಸಿದಿರಿ?

ಎರಡೂ ಚಿತ್ರಗಳ ನಿರ್ದೇಶನದಲ್ಲಿ ವ್ಯತ್ಯಾಸ ಇದೆ. ಭಟ್ಟರ ನಿರ್ದೇಶನದ ಸಿನಿಮಾಗಳಲ್ಲಿ ತಕ್ಷಣಕ್ಕೆ ಕೆಲಸ ಆಗಬೇಕಾಗುತ್ತದೆ. ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಸಮಯ ಇರುವುದಿಲ್ಲ. ನಟ ತಕ್ಷಣದಲ್ಲಿ ಯಾವ ರೀತಿಯ ಅಭಿನಯ ತೋರುತ್ತಾನೆ ಎಂಬುದನ್ನು ನೋಡುವುದು ಭಟ್ಟರಿಗೆ ಖುಷಿ ಕೊಡುತ್ತದೆ. ನೀನು ಹೇಗಿದ್ದೀಯೋ, ಅದೇ ರೀತಿಯಲ್ಲಿ ಅಭಿನಯಿಸು ಎಂದು ಅವರು ಹೇಳುತ್ತಾರೆ. ಮೊದಲ ಸಿನಿಮಾದಲ್ಲಿ ಅಭ್ಯಾಸ ಮಾಡಿಸಿ, ಅಭಿನಯಿಸಲು ಹೇಳುತ್ತಿದ್ದರು.

ಪಂಚತಂತ್ರ ಚಿತ್ರೀಕರಣದ ವೇಳೆ ನನ್ನ ಎದುರು ರಂಗಾಯಣ ರಘು ಇರುತ್ತಿದ್ದರು. ಅವರಂತಹ ಹಿರಿಯ ನಟನ ಎದುರು ಅಭಿನಯಿಸುವುದು ಕೂಡ ಸವಾಲಿನ ಕೆಲಸವೇ.

ಈ ಸಿನಿಮಾದಲ್ಲಿ ಪಾತ್ರಪ್ರವೇಶ ಹೇಗೆ ಸಾಧ್ಯವಾಯಿತು?

ನನ್ನ ಪಾತ್ರವನ್ನು ಒಂದು ಸಾಲಿನಲ್ಲಿ ಹೇಳಬೇಕು ಎಂದಾದರೆ, ‘ಇಪ್ಪತ್ತು ವರ್ಷದ ಹುಡುಗನಂತೆಯೂ ಕಾಣಿಸುತ್ತಾನೆ, ನಂತರ ತುಸು ಪ್ರಬುದ್ಧನಂತೆಯೂ ಕಾಣಿಸುತ್ತಾನೆ. ಆದರೆ ಆತ ಹೆಣ್ಣು ಹೆತ್ತ ಹಿರಿಯರ ಪಾಲಿಗೆ, ನನ್ನ ಮಗಳನ್ನು ಇವನಿಗಂತೂ ಕೊಡಲಾರೆ ಎಂಬಂತೆ ಇರಬೇಕು’. ಇದನ್ನೇ ನನಗೆ ಭಟ್ಟರು ನನ್ನ ಪಾತ್ರದ ಬಗ್ಗೆ ಹೇಳುವಾಗ ತಿಳಿಸಿದ್ದರು. ನಾನು ಈ ಸಿನಿಮಾ ಪೂರ್ತಿ ಒಂದು ಬನಿಯನ್, ಮೈಮೇಲೆ ಟ್ಯಾಟೂ ಹಾಕಿಸಿಕೊಂಡು, ಕೂದಲು ಕೆದರಿಕೊಂಡು ಕಾಣಿಸಿಕೊಂಡಿದ್ದೇನೆ. ಹಿರಿಯರಿಗೆ ಗೌರವ ಕೊಡದ ಹುಡುಗ ನಾನು ಇದರಲ್ಲಿ. ಭಟ್ಟರ ಜೊತೆ ಓಡಾಡ್ತಾ ಇದ್ದಾಗಲೆಲ್ಲ ನನಗೆ ನನ್ನ ಪಾತ್ರ ಎಷ್ಟು ತರಲೆಯಾಗಿ ಇರಬೇಕು ಎಂಬುದು ಗೊತ್ತಾಗ್ತಾ ಇತ್ತು. ಅಷ್ಟೇ ಅಲ್ಲದೆ, ಚಿತ್ರೀಕರಣದ ಸೆಟ್‌ ನನಗೆ ಇನ್ನಷ್ಟು ಸಹಾಯ ಮಾಡಿತು. ಆ ಸೆಟ್‌ಗೆ ಹೋಗಿ ನೋಡಿದಾಗ, ಪಾತ್ರ ಪ್ರವೇಶಕ್ಕೆ ಅನುಕೂಲ ಆಗುವಂತಹ ಭಾವ ಬಂತು. ಸೆಟ್‌ಗೆ ಬಂದಾಗಲೇ ನಮಗೆ ಪಾತ್ರ ಪ್ರವೇಶ ಆಗಿಬಿಡಬೇಕು, ಹಾಗಿತ್ತು ಆ ಸೆಟ್.

ಭಟ್ಟರ ಸಿನಿಮಾದಲ್ಲಿ ಎಲ್ಲ ಹೀರೊಗಳೂ ಹೆಚ್ಚಿನ ಪ್ರಯತ್ನ ಮಾಡಲೇಬೇಕಾಗುತ್ತದೆ. ಏಕೆಂದರೆ ಅವರು ಸೆಟ್‌ನಲ್ಲೇ ಡೈಲಾಗ್‌ಗಳನ್ನು ಬದಲಿಸಿಕೊಡುತ್ತಾರೆ. ಅದನ್ನು ಅಭಿನಯದ ಜೊತೆ ಸರಿಯಾಗಿ ಹೇಳಬೇಕಾಗುತ್ತದೆ. ಅವೆಲ್ಲ ಸವಾಲಿನ ಕೆಲಸವೇ. ಅವರು ಬರೆಯುವ ಹಾಡುಗಳು ಕೇಳಲು ಬಹಳ ಸರಳವಾಗಿರುತ್ತವೆ. ಆದರೆ ಅವುಗಳನ್ನು ಹೇಳುತ್ತ, ನೃತ್ಯ ಮಾಡುವುದು ಸುಲಭದ ಕೆಲಸವಲ್ಲ.

ಭಟ್ಟರ ಬಳಿ ಸೆಟ್‌ನಲ್ಲಿ ಬೈಸಿಕೊಂಡ ಸನ್ನಿವೇಶ ಇತ್ತೇ!?

ಅವರಿಂದ ಬೈಸಿಕೊಂಡ ಸಂದರ್ಭ ಯಾವುದೂಇಲ್ಲ. ಅವರಿಗೆ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗಬೇಕು. ಅವರಿಗೆ ಸಿಟ್ಟು ತರಿಸಲು ಸೆಟ್‌ನಲ್ಲಿ ಯಾರೂ ಇಷ್ಟಪಡುವುದಿಲ್ಲ. ಎಲ್ಲರೂ ಅವರ ಪಾಲಿನ ಕೆಲಸ ಸರಿಯಾಗಿ ಮಾಡುತ್ತಿದ್ದರು. ಇಷ್ಟುದೊಡ್ಡ ಬ್ಯಾನರ್‌ ಅಡಿ ಕೆಲಸ ಮಾಡುವ ಅವಕಾಶ ಮತ್ತೆ ಸಿಗುತ್ತದೆಯೋ ಇಲ್ಲವೋ ಎಂದು ಚೆನ್ನಾಗಿ ಕೆಲಸ ಮಾಡಿಬಿಟ್ಟೆ! ಆದರೆ, ಸಿನಿಮಾದಲ್ಲಿ ಇರುವ ರೇಸ್‌ ಭಾಗದ ಚಿತ್ರೀಕರಣ ಭಟ್ಟರಿಗೆ ತುಸು ತಲೆಬಿಸಿ ತರಿಸಿತ್ತು. ಅದರಲ್ಲಿ ಗ್ರಾಫಿಕ್ಸ್‌ಇಲ್ಲ, ರಿಯಲಿಸ್ಟಿಕ್‌ ಆಗಿ ಚಿತ್ರೀಕರಣ ಮಾಡಲಾಗಿದೆ. ಅದರಲ್ಲಿ ಸ್ಟಂಟ್‌ಗಳೂ ಸಾಕಷ್ಟಿವೆ.

ಅವರಿಂದ ಹೊಗಳಿಸಿಕೊಂಡಿದ್ದು? ಅಥವಾ ನಿಮಗೆ ಬಹಳ ಖುಷಿಕೊಟ್ಟ ಸನ್ನಿವೇಶ?

ಹಲವು ಸನ್ನಿವೇಶಗಳು ಅಂಥವಿವೆ. ಅವರಿಗೆ ಖುಷಿಯಾದಾಗ ‘ನಮ್ಮ ಹೀರೋಗೊಂದು ಚಪ್ಪಾಳೆ ಹೊಡೀರಪ್ಪ’ ಎನ್ನುತ್ತಿದ್ದರು. ಕ್ಲೈಮ್ಯಾಕ್ಸ್‌ನ ಕೆಲವು ದೃಶ್ಯಗಳು ಅವರಿಗೆ ಖುಷಿ ತಂದಿದ್ದವು. ರಂಗಾಯಣ ರಘು ಅವರು ನನ್ನನ್ನು ಪ್ರಶಂಸಿಸಿದ್ದ ಸಂದರ್ಭಗಳನ್ನು ಮರೆಯಲಾರೆ.

ಈ ಸಿನಿಮಾ ಅನುಭವ, ‘ನಂಗೆ ಮುಂದೆ ಇಂಥದ್ದೊಂದು ಪಾತ್ರ ಬೇಕು’ ಎಂಬ ಆಸೆ ಹುಟ್ಟಿಸಿದೆಯಾ?

ಹೌದು. ನಮ್ಮ ಒಳಗಡೆ ಇರುವ ರಾಕ್ಷಸನನ್ನು ಕಿತ್ತು ಬಿಸಾಕುವಂತಹ ಪಾತ್ರಗಳು ಸಿಗಬೇಕು ಎಂದು ಆಸೆ ಬಂದಿದೆ. ಬಹುಶಃ ಅಂತಹ ಪಾತ್ರ ಕೊಡಿಸುವುದು ಭಟ್ಟರಿಂದ ಮಾತ್ರವೇ ಸಾಧ್ಯವೇನೋ...

ಕೆಲವು ಬೋಲ್ಡ್‌ ಆಗಿರುವ ಸೀನ್‌ಗಳೂ ಈ ಚಿತ್ರದಲ್ಲಿ ಇವೆ. ಅಂತಹ ದೃಶ್ಯಗಳನ್ನು ಹೇಗೆ ನಿಭಾಯಿಸಿದಿರಿ?

ಅದು ಬಹಳ ಕಷ್ಟದ ಕೆಲಸ ಆಗಿತ್ತು. ಸೋನಾಲ್ ಮೊಂತೇರೊ ಅವರಿಗೂ ಅದು ಕಷ್ಟವಾಗಿತ್ತು. ಆದರೆ, ಸರ್ (ಯೋಗರಾಜ ಭಟ್) ಹೇಳಿದ್ದು ಒಂದೇ ಮಾತು. ಇಬ್ಬರೂ ಚಿಕ್ಕವರಿಂದಲೂ ಪ್ರೇಮಿಗಳು ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳಿ ಎಂಬುದು ಆ ಮಾತು. ಆ ಮಾತನ್ನು ಪಾಲಿಸಿದ್ದರಿಂದ ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದು ಸಾಧ್ಯವಾಯಿತು. ಹಾಗಂತ ಅದು ಅಷ್ಟೇನೂ ಬೋಲ್ಡ್‌ ಆಗಿಇಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.