ADVERTISEMENT

ಅಳುವ ಕಡಲೊಳು ನಗೆಯ ಹಾಯಿದೋಣಿ ಬಿಟ್ಟ ‘ಇಳಯದಳಪತಿ’ ವಿಜಯ್

ವಿಶಾಖ ಎನ್.
Published 17 ಅಕ್ಟೋಬರ್ 2019, 5:41 IST
Last Updated 17 ಅಕ್ಟೋಬರ್ 2019, 5:41 IST
   

‘ನಾಳೆಯ ತೀರ್ಪು’ ಎಂಬ ತಮಿಳು ಸಿನಿಮಾ ತೆರೆಕಂಡಿದ್ದು 1992ರಲ್ಲಿ. ಹಿರಿತೆರೆಯಲ್ಲಿ ಆ್ಯಕ್ಷನ್, ಕಟ್‌ ಹೇಳಿ ಸಾಕಷ್ಟು ಪಳಗಿದ್ದ ಎಸ್.ಎ ಚಂದ್ರಶೇಖರ್ ಅದರ ನಿರ್ದೇಶಕರು. ಅವರ ಮಗನೇ ನಾಯಕ. 1984ರಿಂದ ಐದಾರು ವರ್ಷ ಬಾಲಕಲಾವಿದನಾಗಿ ಅಭಿನಯಿಸಿದ್ದ ಮಗ ಬೆಳೆಯಲಿ ಎಂದು ಅವರು ಕನಸು ಕಂಡಿದ್ದರು. ಸಿನಿಮಾ ತೆರೆಕಂಡ ಒಂದೆರಡು ದಿನಗಳಲ್ಲೇ ಜನಪ್ರಿಯ ತಮಿಳು ನಿಯತಕಾಲಿಕೆಯೊಂದು ಸಾಕಷ್ಟು ವ್ಯಂಗ್ಯ, ಟೀಕೆಗಳನ್ನು ಒಳಗೊಂಡ ಲೇಖನ ಪ್ರಕಟಿಸಿತು. ಹದಿನೆಂಟನೇ ವಯಸ್ಸಿನಲ್ಲೇ ನಾಯಕನಾಗಿದ್ದ ನಟ ಅದನ್ನು ಓದಿದ್ದೇ ಮನಸ್ಸು ಗುಂಡಿಗಳಿದ್ದ ರಸ್ತೆಯಂತಾಯಿತು. ಕೋಣೆಯ ಕದವಿಕ್ಕಿಕೊಂಡು ರಾತ್ರಿ ಇಡೀ ಅತ್ತರು.

ಹಾಗೆ ಅತ್ತಿದ್ದ ನಟ ಈಗ ‘ಇಳಯದಳಪತಿ’ ಎಂಬ ಗುಣವಿಶೇಷಣದಿಂದ ಅಭಿಮಾನಿಗಳ ಪಾಲಿನ ಸೂಜಿಗಲ್ಲು. ಪೂರ್ತಿ ಹೆಸರು ಜೋಸೆಫ್ ವಿಜಯ್. ಇಪ್ಪತ್ತಾರು ವರ್ಷಗಳ ಅವಧಿಯಲ್ಲಿ ಸಿನಿಮಾ ನಾಯಕನಟನಾಗಿ ಅವರು ಅರವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಹೊಸ ಚಿತ್ರ ‘ಬಿಗಿಲ್’ (ಶೀಟಿ)ನ ಟ್ರೇಲರ್‌ ಈಗ ಸದ್ದು ಮಾಡುತ್ತಿದೆ.

ಯಾವ ನಿಯತಕಾಲಿಕೆಯು ಅವರ ಮೊದಲ ಚಿತ್ರ ಬಂದಾಗ ಉದ್ದದ ಲೇಖನ ಬರೆದು, ಕಾಲೆಳೆದಿತ್ತೋ ಅದರಲ್ಲೇ ಕೆಲವು ವರ್ಷಗಳ ನಂತರ ನಟನ ಯಶೋಗಾಥೆಯ ಮುಖಪುಟ ಬರಹ ಪ್ರಕಟವಾದದ್ದು ವಿಶೇಷ. ಆ ಪತ್ರಿಕೆಗೆ ಸಂದರ್ಶನ ಕೊಟ್ಟಾಗ ವಿಜಯ್‌ ಹಳೆಯ ಆ ಘಟನೆಯನ್ನೇನೂ ನೆನಪು ಮಾಡಲಿಲ್ಲ.

ADVERTISEMENT

ಲೊಯೊಲಾ ಕಾಲೇಜಿನಲ್ಲಿ ಪದವಿ ಪಡೆದರೂ ಸಿನಿಮಾದ ಗಂಧ–ಗಾಳಿ ಅದಾಗಲೇ ಮನಸ್ಸಿಗೆ ಮೆತ್ತಿಕೊಂಡಿತ್ತು. ಹತ್ತನೇ ವಯಸ್ಸಿನಲ್ಲೇ ಬಾಲನಟನಾದುದೂ ಇದಕ್ಕೆ ಕಾರಣವಿರಬಹುದು. ಅಪ್ಪ ನಿರ್ದೇಶಕರಾಗಿ ಹೆಸರು ಮಾಡಿದ್ದರೂ ಅದೊಂದೇ ಮಗನಿಗೆ ಚಿಮ್ಮುಹಲಗೆ ಹಾಕಲು ಸಾಕಾಗಲಿಲ್ಲ. ತಮಿಳುನಾಡಿನಲ್ಲಿ ಕಪ್ಪು ಬಣ್ಣದ ನಟರನ್ನು ಸ್ವೀಕರಿಸುವ ಪ್ರೇಕ್ಷಕರೇನೋ ಇದ್ದಾರೆ. ರಜನೀಕಾಂತ್‌ ಯಶಸ್ಸನ್ನು ನೋಡಿಯೇ ಚಂದ್ರಶೇಖರ್ ಅವರಿಗೆ ಇದು ಸ್ಪಷ್ಟವಿತ್ತು. ತಮ್ಮ ಮಗ ರಜನಿ ಅಭಿಮಾನಿಯಾಗಿದ್ದರಿಂದ ಬಹುತೇಕ ಕಮರ್ಷಿಯಲ್ ಚಿತ್ರಗಳ ನಿರ್ದೇಶಕರಂತೆ ಅವರಿಗೂ ಮಗ ಬೆಳೆಯುವುದರಲ್ಲಿ ಅನುಮಾನವಿಲ್ಲ ಎಂದು ಆತ್ಮಸಾಕ್ಷಿ ಹೇಳಿತ್ತು. ಅದನ್ನು ನೆಚ್ಚಿಕೊಂಡೇ ಮಗನನ್ನು ಸಿನಿಮಾ ಪ್ರಯೋಗಶಾಲೆಗೆ ಅವರು ಪರಿಚಯಿಸಿದ್ದು.

ಮೊದಲ ಕೆಲವು ಸಿನಿಮಾಗಳು ಮಕಾಡೆಯಾದವು. ಅದು ಟೀಕಾಪರ್ವ. ನಿರ್ಮಾಪಕರಿಗೆ ಬಂಡವಾಳ ತರದೇ ಹೋಗುವ ನಟನಿಗೆ ಉಳಿಗಾಲವಿಲ್ಲ ಎನ್ನುವ ಕಾಲವದು. ಆದರೆ, ಟೀಕೆಗಳನ್ನೇ ಸವಾಲಾಗಿ ಪರಿಗಣಿಸಿದ ನಟ ನೋಡನೋಡುತ್ತಲೇ ಛಾಪು ಮೂಡಿಸತೊಡಗಿದರು.

1996ರಲ್ಲಿ ತೆರೆಕಂಡ ‘ಪೂವೆ ಒನಕ್ಕಾಗ’ ಮೊದಲು ಬ್ರೇಕ್‌ ಕೊಟ್ಟ ಚಿತ್ರ. ನಟನಾಗಿ ಅಷ್ಟೇ ಉಳಿಯದೆ ವಿ.ವಿ. ಎಂಬ ನಿರ್ಮಾಣ ಸಂಸ್ಥೆಯನ್ನೂ ಅವರು ಪ್ರಾರಂಭಿಸಿದರು. ಅದರಲ್ಲಿ ಒಂದು ‘ವಿ’ ಅಂದರೆ ವಿಜಯ್. ಇನ್ನೊಂದರ ಅರ್ಥ ‘ವಿದ್ಯಾ’. ವಿದ್ಯಾ ಅವರ ತಂಗಿ. ಮಗುವಾಗಿದ್ದಾಗಲೇ ತೀರಿಹೋದಳು. ವಾಚಾಳಿಯಾಗಿದ್ದ ವಿಜಯ್ ತಂಗಿಯ ಸಾವಿನ ನಂತರ ಮೌನಿಯಾಗಿಬಿಟ್ಟಿದ್ದರು. ಈಗಲೂ ಅವರ ಸ್ಮೃತಿಪಟಲದಲ್ಲಿ ಪುಟ್ಟ ತಂಗಿ ಉಳಿಸಿಟ್ಟ ನೆನಪು ಜತನವಾಗಿದೆ.

ದೊಡ್ಡ ಅಭಿಮಾನಿ ಬಳಗ ಹೊಂದಿರುವಂತೆಯೇ ‘ಟ್ರೋಲ್’ ಮಾಡುವ ಪ್ರೇಕ್ಷಕರೂ ವಿಜಯ್ ಅವರಿಗೆ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಜಾಸತ್ತಾತ್ಮಕ ನಟ ಎನ್ನಲು ಅಡ್ಡಿಯಿಲ್ಲ.

ಹೀಗಿದೆ ಬಿಗಿಲ್ ಟ್ರೇಲರ್

ತಮಿಳಿನ ಸೂಪರ್‌ಸ್ಟಾರ್ ನಡ ವಿಜಯ್ ಅಭಿನಯದ ‘ಬಿಗಿಲ್’ ಚಿತ್ರದ ಟ್ರೇಲರ್‌ ಯೂಟ್ಯೂಬ್‌ಗೆ ಬಂದು ನಾಲ್ಕು ದಿನಗಳಾಗಿವೆ. ಟ್ರೆಂಡಿಂಗ್‌ನಲ್ಲಿ ಸ್ಥಾನ ಕಾಯ್ದುಕೊಂಡಿರುವ 2.41 ನಿಮಿಷಗಳ ಈ ಟ್ರೇಲರ್‌ ನೋಡಿದವರಿಗೆ ವಿಜಯ್‌ ಪಾತ್ರಕ್ಕೆ ಈ ಚಿತ್ರದಲ್ಲಿ ಎರಡು ಶೇಡ್‌ಗಳಿರುವುದು ಅರಿವಾಗುತ್ತೆ. ಚಿತ್ರದ ಫಸ್ಟ್‌ ಲುಕ್, ಹಾಡುಗಳು ಮತ್ತು ಪೋಸ್ಟರ್‌ಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದವು.

‘ಮೈಕೆಲ್’ ಹೆಸರು ಬರೆದುಕೊಂಡ ಜೆರ್ಸಿ ಧರಿಸಿದ ವಿಜಯ್‌ ಪಾತ್ರ ಫುಟ್‌ಬಾಲ್ ಆಡುತ್ತೆ, ಮುಂದೆ ಮಹಿಳಾ ತಂಡಕ್ಕೆ ಕೋಚ್ ಆಗುತ್ತೆ. ರಾಯಪ್ಪನ್ ಹೆಸರಿನ ಪಾತ್ರ ರೌಡಿಯಂತಿದೆ. ಯುವತಿಯರ ತಂಡಕ್ಕೆ ಫುಟ್‌ಬಾಲ್ ತರಬೇತಿ ಕೊಡುವ ಮೈಕೆಲ್ ಮತ್ತು ರೌಡಿಗಳನ್ನು ಬಡಿದಟ್ಟುವ ರಾಯಪ್ಪನ್ ಪಾತ್ರಗಳಿಗೆ ಟ್ರೇಲರ್‌ನಲ್ಲಿ ಸಮಸಮ ಸಮಯ ದಕ್ಕಿದೆ. ಎರಡು ದೃಶ್ಯಗಳಲ್ಲಿ ನಯನತಾರಾ ಬಂದು ಮಾಯವಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.