ADVERTISEMENT

ಚಿತ್ರರಂಗದ ‘ಗಲ್ಲಿ’ಯಲ್ಲಿ ವಿಜಯ ಪತಾಕೆ

ಅನಿಲಾ ಕುರಿಯನ್‌
Published 25 ಫೆಬ್ರುವರಿ 2019, 19:46 IST
Last Updated 25 ಫೆಬ್ರುವರಿ 2019, 19:46 IST
‘ಗಲ್ಲಿ ಬಾಯ್‌’ನಲ್ಲಿ ಮೆಕ್ಯಾನಿಕ್‌ ಮತ್ತು ಕಳ್ಳನ ಪಾತ್ರದಲ್ಲಿ ರಣವೀರ್‌ ಸಿಂಗ್‌ ಜೊತೆ
‘ಗಲ್ಲಿ ಬಾಯ್‌’ನಲ್ಲಿ ಮೆಕ್ಯಾನಿಕ್‌ ಮತ್ತು ಕಳ್ಳನ ಪಾತ್ರದಲ್ಲಿ ರಣವೀರ್‌ ಸಿಂಗ್‌ ಜೊತೆ   

‘ಗಲ್ಲಿ ಬಾಯ್‌’ ಸಿನಿಮಾ ನೋಡಿದವರು ವಿಜಯ್‌ ವರ್ಮಾ ನಟನೆಯನ್ನು ಬಾಯ್ತುಂಬ ಹೊಗಳುತ್ತಿದ್ದಾರೆ. ಮೆಕ್ಯಾನಿಕ್‌ ಮತ್ತು ಕಳ್ಳ ಮೊಯೀನ್‌ ಪಾತ್ರದಲ್ಲಿ ವಿಜಯ್‌ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅದೇ ಖುಷಿಯಲ್ಲಿ ಅವರು ಇಲ್ಲಿ ಮಾತನಾಡಿದ್ದಾರೆ...

*ಪಾತ್ರಗಳ ಆಯ್ಕೆಯಲ್ಲಿ ಜೋಯಾ ಪಳಗಿದವರು. ನಿಮ್ಮ ಪಾತ್ರಕ್ಕೆ ನ್ಯಾಯ ಸಿಕ್ಕಿದೆ ಎಂದು ಅನಿಸುತ್ತಿದೆಯೇ?
ಮೊಯೀನ್‌ ಪಾತ್ರಕ್ಕೆ ಒಂದು ಸ್ಪಷ್ಟತೆ ಇದೆ. ನನ್ನ ಪಾತ್ರಕ್ಕೆ ನ್ಯಾಯ ಸಿಕ್ಕಿದೆ ಎಂದೇ ನಾನು ಭಾವಿಸುತ್ತೇನೆ. ಯಾಕೆಂದರೆ, ಚಿತ್ರ ನಿರ್ದೇಶಕಿಯಾಗಿ ಜೋಯಾ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ದೊಡ್ಡ ಪಾತ್ರಗಣವನ್ನು ಆರಿಸುವುದು ಅವರ ಪರಿಪಾಠ. ಆದರೆ ಪ್ರತಿ ಪಾತ್ರಕ್ಕೂ ಅದರದ್ಧೇ ಆದ ಮಹತ್ವ ನೀಡುವುದು ಅವರಿಗೆ ಗೊತ್ತು. ಆ ಕಾಳಜಿ ಅವರಿಗಿದೆ.

ನನ್ನ ಪಾತ್ರಕ್ಕೆ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಬೆಳಗಲುಚಿತ್ರಕತೆ ಅವಕಾಶ ಕಲ್ಪಿಸಿತ್ತು. ಅದ್ಭುತ ನಟರಾದ ರಣವೀರ್ ಸಿಂಗ್‌ ಈ ಅವಕಾಶಗಳಿಗೆ ಇನ್ನಷ್ಟು ಬೆಳಗಲು ಉತ್ತೇಜನ ನೀಡಿದರು.

ADVERTISEMENT

* ನಿಮ್ಮ ಪಾತ್ರದ ಬಗ್ಗೆ ಜೋಯಾ ನಿಮಗೆ ಏನು ಹೇಳಿದ್ದರು?
ಮೊಯೀನ್‌, ಎಲ್ಲರಿಗಿಂತ ಹೆಚ್ಚು ಕಷ್ಟಪಟ್ಟವನು. ಜೊತೆಗೆ ಎಲ್ಲರಿಗಿಂತ ಹೆಚ್ಚು ಗಟ್ಟಿಯಾದವನೂ ಕೂಡಾ. ಸಮಸ್ಯೆ ಮತ್ತು ಸವಾಲುಗಳನ್ನು ಗೆದ್ದು ಬರುವ ತನ್ನ ಶಕ್ತಿಯ ಬಗ್ಗೆ ಅವನಿಗೆ ಅರಿವೂ ಇರುತ್ತದೆ. ತನ್ನ ಸ್ಥಳದಲ್ಲಿ ತಾನೇ ರಾಜ ಎಂದು ನಂಬಿದವನು. ಚಿತ್ರೀಕರಣ ನಡೆಯುತ್ತಿದ್ದಂತೆ ನಾನೇ ಯೋಚಿಸತೊಡಗಿದೆ, ಜೋಯಾ ಅವರು ಯಾಕೆ ಮೊಯೀನ್‌ನನ್ನು ಹಾಗೆ ಚಿತ್ರಿಸಿದರು ಎಂದು.

ಮೊಯೀನ್‌ನನ್ನು ಕೆಟ್ಟವನಾಗಿ ಚಿತ್ರಿಸಲಾಗಿದೆ. ಆದರೆ ಅವನೂ ಸ್ನೇಹಿತರು ಮತ್ತು ನಿರ್ಗತಿಕರ ಬಗ್ಗೆ ಕಾಳಜಿ ತೋರುತ್ತಾನೆ. ಆ ಪಾತ್ರದಲ್ಲಿನ ಇಂತಹ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಯಿತೇ?

ಖಂಡಿತಾ ಕಷ್ಟವಾಯಿತು. ಮೊಯೀನ್‌ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿತು. ಆದರೆ ಅದನ್ನು ಕಾರ್ಯಗತಗೊಳಿಸಿ ಚಿತ್ರೀಕರಣಕ್ಕೂ ಮೊದಲು ನಾನು ಮೊಯೀನ್ ಆಗಲು ನನ್ನಿಂದ ಸಾಧ್ಯವಾಯಿತು. ಅಲ್ಲೂ ಒಂದು ಸವಾಲು ಎದುರಾಯಿತು. ಅವನು ಹಲವು ಆಯಾಮಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಪ್ರತಿ ಆಯಾಮಕ್ಕೂ ಒಂದೊಂದು ಬಾಡಿ ಲ್ಯಾಂಗ್ವೇಜ್‌ನ್ನು ರೂಢಿಸಿಕೊಂಡಿದ್ದ!

* ಈ ಚಿತ್ರಕ್ಕಾಗಿ ನೀವು ವಾಹನ ಚಾಲನೆ ಕಲಿಯಬೇಕಾಯ್ತಂತೆ. ಹೌದೇ?
ಹ್ಹಹ್ಹ... ಹೌದು. ನನ್ನಲ್ಲಿ ಸ್ವಂತದ ಕಾರು ಇಲ್ಲ. ಯಾವತ್ತೂ ಹೆಚ್ಚು ಕಾರು ಚಾಲನೆ ಮಾಡಿದವನಲ್ಲ. ‘ಮಾನ್ಸೂನ್‌ ಶೂಟೌಟ್‌’ ಚಿತ್ರದ ಒಂದು ದೃಶ್ಯಕ್ಕಾಗಿ ಕಾರು ಚಲಾಯಿಸಿದ್ದೆ. ಆದರೆ ಪಾತ್ರಕ್ಕಾಗಿ ಹೊಸ ಕೌಶಲಗಳನ್ನು ಕಲಿಯಲೇಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಸೂಪರ್‌ ಸ್ಟಾರ್‌ವೊಬ್ಬರ ಜೊತೆ ನಾನು ಕೆಲಸ ಮಾಡಬೇಕಿತ್ತು. ಅವರ ಸುರಕ್ಷೆ ನನ್ನ ಹೊಣೆಯಾಗಿತ್ತು... ಹ್ಹಹ್ಹ...

* ಹಿಂದಿನ ನಿಮ್ಮ ಸಿನಿಮಾಗಳು ಬಿಡುಗಡೆಯಾಗಲು ವಿಳಂಬವಾದಾಗ ಏನನ್ನಿಸಿತ್ತು?
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ‘ನಮಗೂ ಒಂದು ಕಾಲ ಬಂದೇ ಬರುತ್ತದೆ’ ಎಂಬ ಮಾತಿನಲ್ಲಿ ನಂಬಿಕೆ ಇಟ್ಟವನು ನಾನು. ಹಾಗಾಗಿ, ವಯಸ್ಸು 50 ದಾಟಿದರೂ ಪರವಾಗಿಲ್ಲ, ಎಲ್ಲರ ಮೆಚ್ಚುಗೆ ಗಳಿಸುವಂತಹ ಪಾತ್ರ ಸಿಕ್ಕಿಯೇ ಸಿಗುತ್ತದೆ ಎಂದು, ತಾಳ್ಮೆಯಿಂದ ಕಾಯುತ್ತಿದ್ದೆ. ಅದಕ್ಕಿಂತ ಹೆಚ್ಚು ಏನು ಮಾಡಲೂ ನನ್ನಿಂದ ಸಾಧ್ಯವೂ ಇಲ್ವಲ್ಲ?

* ಮುಂದೆ?
ಅನುರಾಗ್‌ ಕಶ್ಯಪ್‌ ಅವರ ಚಿತ್ರವೊಂದರ ಚಿತ್ರೀಕರಣವನ್ನು ಮುಗಿಸಿದ್ದೇನೆ. ಇಮ್ತಿಯಾಜ್‌ ಅಲಿ ನಿರ್ಮಿಸುತ್ತಿರುವ ವೆಬ್‌ ಸೀರಿಸ್‌ವೊಂದರಲ್ಲಿ ನಟಿಸುತ್ತಿದ್ದೇನೆ. ಅಪರಾಧ ಕ್ಷೇತ್ರದ ಕತೆಯಿರುವ ಸರಣಿ ಅದು. ಮುಂದೆ... ಗೊತ್ತಿಲ್ಲ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.