ಗಾಯಕ ವಿಜಯಪ್ರಕಾಶ್ ಅವರು ರಾಜ್ಯದ ಕೊರೊನಾ ಸೋಂಕಿತರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 10 ಲಕ್ಷ ಪರಿಹಾರ ನೀಡಿದ್ದಾರೆ.
‘ಪುರಂದರದಾಸರು ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ...’ ಎಂದಿದ್ದಾರೆ. ನನ್ನ ವೃತ್ತಿಬದುಕಿನಲ್ಲಿ ಕನ್ನಡಿಗರು ಪ್ರೀತಿಯ ಬೊಗಸೆಯನ್ನೇ ತುಂಬಿಸಿ ಕೊಟ್ಟಿದ್ದಾರೆ. ಆ ಬೊಗಸೆಯಿಂದ ಒಂದು ಚಿಕ್ಕ ಕಾಣಿಕೆಯನ್ನು ಜನರಿಗೆ ನೀಡುವುದು ನನ್ನ ಕರ್ತವ್ಯ’ ಎಂದು ಹೇಳಿದ್ದಾರೆ.
‘ಕೊರೊನಾ ಮಹಾಮಾರಿಯನ್ನು ಮನೆಯೊಳಗಿದ್ದುಕೊಂಡು ನಾವೆಲ್ಲರೂ ಎದುರಿಸುತ್ತಿದ್ದೇವೆ. ರಾಜ್ಯ ಸರ್ಕಾರ, ಅಧಿಕಾರಿಗಳು, ವೈದ್ಯರು, ಪೊಲೀಸರು ನಮ್ಮ ರಕ್ಷಣೆಗಾಗಿ ಹಗಲು–ರಾತ್ರಿ ದುಡಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ನಮ್ಮ ಕೈಯಲಾದ ಆರ್ಥಿಕ ನೆರವನ್ನು ಪರಿಹಾರ ನಿಧಿಗೆ ನೀಡಬೇಕು’ ಎಂದು ಕೋರಿದ್ದಾರೆ.
‘ನಾನು ಪ್ರಧಾನಮಂತ್ರಿಗಳ ಪರಿಹಾರ ನಿಧಿ, ಕೆಲವು ರಾಜ್ಯಗಳ ಪರಿಹಾರ ನಿಧಿಗೂ ಅಳಿಲು ಸೇವೆ ನೀಡಿದ್ದೇನೆ. ಇಂತಹ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿ ನಿಂತರೆ ಕೊರೊನಾ ವಿರುದ್ಧ ಹೋರಾಡಲು ಸಾಧ್ಯ. ಅದರ ಭೀತಿಯಿಂದ ದೂರವಾಗಿ ಮೊದಲಿನಂತೆಯೇ ಸಮಾಜದಲ್ಲಿ ಸುಖವಾಗಿ ಬದುಕುತ್ತೇವೆ ಎಂಬ ಭರವಸೆ ನನಗಿದೆ’ ಎಂದಿದ್ದಾರೆ ವಿಜಯಪ್ರಕಾಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.