ನವದೆಹಲಿ: ತಮ್ಮ 'ಪೊನ್ನಿಯಿನ್ ಸೆಲ್ವನ್ ' ಚಿತ್ರದ ಪ್ರಚಾರಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿರುವ ತಮಿಳು ನಟ ಚಿಯಾನ್ ವಿಕ್ರಮ್, 'ರಾವಣನ್' ನಂತರ ಮತ್ತೆ ಬಾಲಿವುಡ್ ತಾರೆ ಐಶ್ವರ್ಯಾ ರೈ ಬಚ್ಚನ್ ಅವರ ಜೊತೆ ತೆರೆ ಹಂಚಿಕೊಂಡಿರುವ ಬಗ್ಗೆ ಮಾತನಾಡಿದ್ದಾರೆ. ಐಶ್ವರ್ಯಾ ರೈ 'ಪಿಕ್ಚರ್ ಪರ್ಫೆಕ್ಟ್ ನಟಿ' ಎಂದು ಹೇಳಿದ್ದಾರೆ.
ಚಿತ್ರರಂಗದಲ್ಲಿ ಹಲವು ಬ್ಯೂಟಿಕ್ವೀನ್‌ಗಳು ಇದ್ದಾರೆ. ಆದರೆ, ಐಶ್ ಮಾತ್ರ ಎಲ್ಲರ ಹೃದಯವನ್ನು ಕದ್ದಿದ್ದಾರೆ ಎಂದು ನಾನು ಹೇಳಲೇಬೇಕು. ಅವರು ಪಿಕ್ಚರ್ ಪರ್ಫೆಕ್ಟ್, ನಾನು ಅವರ ಚಲನಚಿತ್ರಗಳನ್ನು ನೋಡಿದ್ದೇನೆ, ಅವರು ಸೌಂದರ್ಯದಲ್ಲಿ ಮಾತ್ರವಲ್ಲ ನಟನೆಯಲ್ಲೂ ಕ್ವೀನ್. ಅವರು ಸಾರ್ವಕಾಲಿಕ ಪರಿಪೂರ್ಣ ನಟಿಯಾಗಿದ್ದಾರೆ. ಅವರು ತಮ್ಮದೇ ಆದ ಸ್ಟೈಲ್ ಅನ್ನು ರೂಢಿಸಿಕೊಂಡಿದ್ದಾರೆ’ಎಂದು ವಿಕ್ರಮ್ ಹೇಳಿದರು.
‘ನಮ್ಮ ಎಲ್ಲಾ ಅಭಿಮಾನಿಗಳು ನೀವಿಬ್ಬರೂ ಪರದೆ ಮೇಲೆ ಸುಂದರವಾಗಿ ಕಾಣುತ್ತೀರಿ ಎಂದು ಹೇಳುತ್ತಲೇ ಇರುತ್ತಾರೆ’ಎಂದರು.
ಐಶ್ವರ್ಯಾ ರೈ ಅವರ ನೃತ್ಯ ಕೌಶಲ್ಯವನ್ನು ಶ್ಲಾಘಿಸಿದ ವಿಕ್ರಮ್, ಅವರು ಚಿತ್ರೀಕರಣದ ಸಂದರ್ಭ ತುಂಬಾ ಸುಂದರವಾಗಿ ನೃತ್ಯ ಮಾಡುತ್ತಾರೆ, ಅವರ ನೃತ್ಯ ನೋಡಿ ನನ್ನನ್ನೇ ಮರೆತುಹೋಗುತ್ತೇನೆ. ಅವರು ನಿಜವಾಗಿಯೂ ಪರಿಪೂರ್ಣ ನಟಿ ಎಂದು ಕೊಂಡಾಡಿದ್ದಾರೆ.
ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನಿರ್ವಹಿಸಿರುವ ಅದಿತ ಕರಿಕಾಳನ್ (10 ನೇ ಶತಮಾನದ ಚೋಳ ಚಕ್ರವರ್ತಿ) ಪಾತ್ರವನ್ನು 'ಕನಸಿನ ಪಾತ್ರ' ಎಂದು ಅವರು ಬಣ್ಣಿಸಿದರು. ನಾನು ಯಾವಾಗಲೂ ತೆರೆಯ ಮೇಲೆ ರಾಜಕುಮಾರ ಅಥವಾ ಯೋಧನ ಪಾತ್ರವನ್ನು ಮಾಡಲು ಬಯಸುತ್ತೇನೆ ಎಂದು ವಿಕ್ರಮ್ ಹೇಳಿದರು.
‘ಈ ಚಿತ್ರದಲ್ಲಿ ನಾವೆಲ್ಲರೂ ತುಂಬಾ ಆಸಕ್ತಿದಾಯಕ ಪಾತ್ರಗಳನ್ನು ನಿರ್ವಹಿಸಿದ್ದೇವೆ. ನಾನು ನನ್ನ ಕನಸಿನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ನಾನು ಹೇಳಲೇಬೇಕು. ಮಣಿರತ್ನಂ ಸರ್ ಮಾಡಿರುವ ಚಿತ್ರಗಳೆಲ್ಲವೂ ತುಂಬಾ ರೋಮಾಂಚನಕಾರಿ ಮತ್ತು ವಿಭಿನ್ನವಾಗಿವೆ. ನಾವು ಅವರನ್ನು ಭಾರತದ ಸ್ಟೀವನ್ ಸ್ಪೀಲ್ಬರ್ಗ್ ಎಂದು ಕರೆಯುತ್ತೇವೆ ಎಂದು ನಿಮಗೆ ತಿಳಿದಿದೆ’ ಎಂದು ವಿಕ್ರಮ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.