‘ಮಿಲೆನಿಯಲ್’ ಎನ್ನುವ ಪದ ಹೊಸ ಕಾಲದ ಸಂಕಥನಗಳಲ್ಲಿ ಬಹುವಾಗಿ ಬಳಕೆ ಆಗುತ್ತಿದೆಯಾದರೂ, ‘ಮಿಲೆನಿಯಲ್’ಗಳನ್ನು ಕೇಂದ್ರವಾಗಿ ಇರಿಸಿಕೊಂಡ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ಬಹಳ ಕಡಿಮೆ. ಆ ರೀತಿಯ ಸಿನಿಮಾ ‘ಅಯನ’ ಎರಡು ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಅದೇ ರೀತಿ, ಮಿಲೆನಿಯಲ್‌ಗಳ ಸುತ್ತವೇ ಹೆಣೆದಿರುವ ಸಿನಿಮಾ ‘ಮುಂದಿನ ನಿಲ್ದಾಣ’ ಸಿದ್ಧವಾಗಿದೆ. ಇದು ಈ ವಾರ (ನ. 29) ತೆರೆಗೆ ಬರುತ್ತಿದೆ.
ವಿನಯ್ ಭಾರದ್ವಾಜ್ ನಿರ್ದೇಶನದ ಈ ಸಿನಿಮಾ ಮಿಲೆನಿಯಲ್‌ಗಳಾದ ಪಾರ್ಥ, ಮೀರಾ ಮತ್ತು ಅಹನಾ ಎನ್ನುವ ಮೂರು ಪಾತ್ರಗಳ ಪಯಣದ ಕಥೆ. ‘ಇಂದಿನ ಯುವಕರು ಹೇಗೆ ಆಲೋಚಿಸುತ್ತಾರೆ, ಅವರ ಆದ್ಯತೆಗಳು ಏನು, ಅವರಲ್ಲಿನ ಗೊಂದಲಗಳು ಏನು ಎಂಬುದು ಮುಂದಿನ ನಿಲ್ದಾಣ ಚಿತ್ರದ ವಸ್ತು’ ಎನ್ನುತ್ತಾರೆ ನಿರ್ದೇಶಕ ವಿನಯ್.
ಮದುವೆಯ ವ್ಯಾಖ್ಯಾನ ಬದಲಾಗುತ್ತಿದೆ, ಲಿವ್–ಇನ್ ಸಂಬಂಧಗಳು ಸಮಾಜದ ಒಳಮನೆಯನ್ನು ಪ್ರವೇಶಿಸಿ ಆಗಿದೆ, ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಚೇರಿ ಕೆಲಸ ಮಾಡುವ ಇಂದಿನ ಹುಡುಗರು ಹವ್ಯಾಸವಾಗಿ ಬೇರೇನೋ ಕೆಲಸ ಮಾಡುತ್ತಿರುತ್ತಾರೆ... ಈ ಎಲ್ಲ ವಿಷಯಗಳನ್ನು ಒಡಲಲ್ಲಿ ಇರಿಸಿಕೊಂಡಿದೆ ಈ ಸಿನಿಮಾ ಎನ್ನುವುದು ವಿನಯ್ ಹೇಳುವ ಮಾತು.
ಅವರು ಹೇಳುವಂತೆ ಇದು, ವೀಕ್ಷಕರಲ್ಲಿ ಒಂದಿಷ್ಟು ಪ್ರಶ್ನೆಗಳನ್ನು ಸೃಷ್ಟಿಸಿ ಕೊನೆಯಲ್ಲಿ ಆ ಪ್ರಶ್ನೆಗಳಿಗೆ ಉತ್ತರ ನೀಡುವ ಸಿನಿಮಾ ಅಲ್ಲ. ‘ಈ ಸಿನಿಮಾದ ಪಾತ್ರಗಳು ನಿರ್ದಿಷ್ಟ ಸಂದರ್ಭಗಳಲ್ಲಿ ತೆಗೆದುಕೊಳ್ಳುವ ತೀರ್ಮಾನ ಕೆಲವರಿಗೆ ಸರಿ ಅನ್ನಿಸಬಹುದು, ತಪ್ಪು ಎಂದೂ ಅನ್ನಿಸಬಹುದು. ಸರಿ ಯಾವುದು, ತಪ್ಪು ಯಾವುದು ಎಂಬ ತೀರ್ಮಾನಕ್ಕೆ ಸುಲಭವಾಗಿ ಬರಲು ಸಾಧ್ಯವಿಲ್ಲ. ನಾವು ಕೂಡ ನಮ್ಮ ನಿಜ ಜೀವನದಲ್ಲಿ ಹೀಗೇ ಅಲ್ಲವೇ’ ಎಂದು ಪ್ರಶ್ನಿಸುತ್ತಾರೆ ನಿರ್ದೇಶಕ.
ವಿನಯ್ ಅವರು ತಮ್ಮ ಇದುವರೆಗಿನ ಅನುಭವಗಳನ್ನೆಲ್ಲ ಸೇರಿಸಿ ಮಾಡಿದ ಸಿನಿಮಾ ಇದು. ‘ಯುವಕರಿಗಾಗಿ ಬಂದಿರುವ ಸಿನಿಮಾಗಳ ಸಂಖ್ಯೆ ನಮ್ಮಲ್ಲಿ ಬಹಳ ಕಡಿಮೆ. ಹದಿಹರೆಯದ ತಮ್ಮ ಮಕ್ಕಳು ಹೇಗೆ ಆಲೋಚಿಸುತ್ತಾರೆ ಎಂಬ ಕುತೂಹಲ ವಯಸ್ಸಾದವರಿಗೂ ಇರುತ್ತದೆ. ಮಗ ಏಕೆ ಮದುವೆ ಬೇಡ ಅನ್ನುತ್ತಿದ್ದಾನೆ, ಕೆಲಸ ಯಾಕೆ ಬಿಡುತ್ತಿದ್ದಾನೆ ಎಂಬೆಲ್ಲ ಕುತೂಹಲ ಇರುತ್ತದೆ. ಅವೆಲ್ಲ ಆಯಾಮಗಳು ಇರುವ ಸಿನಿಮಾ ಇದು’ ಎಂದು ವಿನಯ್ ಹೇಳುತ್ತಾರೆ.
ದತ್ತಣ್ಣ ಅವರು ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ‘ಅವರ ಮಾತುಗಳು ಇಂದಿನ ಯುವಕರಿಗೆ ಒಂದಿಷ್ಟು ಒಳ್ಳೆಯದನ್ನು ಹೇಳುತ್ತವೆ. ಚಿತ್ರದಲ್ಲಿ ಮಸಾಲೆ ಇಲ್ಲ, ಆದರೆ ವಿವೇಕ ಇದೆ. ಒಂದೂಮುಕ್ಕಾಲು ತಾಸಿನ ಈ ಕಥೆ ಯಾವುದೇ ಯುವಕ–ಯುವತಿಯ ಜೀವನದಲ್ಲಿ ನಡೆದಿರಬಹುದಾಗಿದ್ದು’ ಎಂದು ಅವರು ವಿವರಿಸುತ್ತಾರೆ.
ಕಲಾವಿದರ ಆಯ್ಕೆ ಹೇಗಿತ್ತು
ವಿನಯ್ ಅವರು ‘ಪಾರ್ಥ’ ಪಾತ್ರ ಸೃಷ್ಟಿಸಿದಾಗ ಅವರ ಮನಸ್ಸಿನಲ್ಲಿ ಯಾರೂ ಇರಲಿಲ್ಲ. ‘ನಾನು ಪ್ರವೀಣ್ ತೇಜ್ ಅವರ ಕೆಲಸ ನೋಡಿರಲಿಲ್ಲ. ಅವರು ಚೂರಿಕಟ್ಟೆ ಸಿನಿಮಾ ಡಿವಿಡಿ ಕೊಟ್ಟು, ಅದನ್ನು ನೋಡಿ ಎಂದಿದ್ದರು. ಚೂರಿಕಟ್ಟೆ ವೀಕ್ಷಿಸಿ ಪ್ರವೀಣ್ ಅವರನ್ನು ನನ್ನ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡೆ’ ಎಂದರು ವಿನಯ್.
ರಾಧಿಕಾ ಅವರು ವಿನಯ್ ಅವರಿಗೆ ಹಳೆಯ ಪರಿಚಯ. ಆ ಮೂಲಕ ಮೀರಾ ಶರ್ಮಾ ಪಾತ್ರಕ್ಕೆ ರಾಧಿಕಾ ಪ್ರವೇಶ ಪಡೆದರು. ಅಹನಾ ಪಾತ್ರಕ್ಕೆ ಆಡಿಷನ್ ಮಾಡುತ್ತಿದ್ದ ವಿನಯ್ ಅವರಿಗೆ ಅನನ್ಯಾ ಬಗ್ಗೆ ಯಾರೋ ಹೇಳಿದರು. ಅನನ್ಯಾ ಅವರು ರಂಗಭೂಮಿಯ ಮೂಲಕ ಅಭಿನಯ ಲೋಕ ಪ್ರವೇಶಿಸಿದವರು. ಅವರ ಅಭಿನಯ ಕಂಡು ಅಹನಾ ಪಾತ್ರಕ್ಕೆ ಅನನ್ಯಾ ಆಯ್ಕೆ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.