ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ...
ನನ್ನದು ‘ಪೇಪೆ’ ಎಂಬ ಪಾತ್ರ. ಕೊಡಗಿನ ಕಾಲ್ಪನಿಕ ಊರಾದ ಬದನಾಳುವಿನಲ್ಲಿನ ನಾಲ್ಕು ಕುಟುಂಬಗಳ ನಡುವೆ ನಡೆಯುವ ಕಥೆ. ಪಾತ್ರದ ಹೆಸರು ಪ್ರದೀಪ. ಆದರೆ ಎಲ್ಲರೂ ‘ಪೇಪೆ’ ಎಂದು ಕರೆಯತ್ತಿರುತ್ತಾರೆ. ಬಹುಶಃ ನಿರ್ದೇಶಕರು ಫುಟ್ಬಾಲ್ ಆಟಗಾರ ಪೇಪೆಯಿಂದ ಸ್ಫೂರ್ತಿ ಪಡೆದು ಈ ಪಾತ್ರ ಬರೆದಿರಬಹುದು. ಈ ಪಾತ್ರಕ್ಕೆ ಎರಡು ಶೇಡ್ ಇದೆ.
ನಂಜನಗೂಡಿನ ‘ಬದನವಾಳು’ ದುರಂತದ ಕಥೆಯನ್ನೇ ಈ ಚಿತ್ರ ಹೊಂದಿದೆಯಾ?
ಇದೊಂದು ಸಿನಿಮಾ. ಇಲ್ಲಿ ಯಾವುದೇ ನೈಜ ಘಟನೆಗಳಿಲ್ಲ. ನೇರವಾಗಿ ಯಾವ ವ್ಯಕ್ತಿಗೂ ಸಂಬಂಧಿಸಿಲ್ಲ. ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ಜಾತಿ, ಸಂಘರ್ಷ, ಮಹಿಳೆ ಮೇಲಿನ ದೌರ್ಜನ್ಯ ಸೇರಿದಂತೆ ನಮ್ಮ ಸುತ್ತಲು ನಿತ್ಯ ನಡೆಯುವ ಸಾಕಷ್ಟು ಸಂಗತಿಗಳಿವೆ. ಹಾಗಾಗಿ ಯಾವ ವಿಷಯ ಯಾರಿಗೆ ಬೇಕಾದರೂ ಕನೆಕ್ಟ್ ಆಗಬಹುದು. ಊರಿನ ನಾಲ್ಕು ಕುಟುಂಬಗಳ ನಡುವಿನ ಕಥೆ. ಆ ಕುಟುಂಬಗಳು ಒಂದೇ ಸಮುದಾಯಕ್ಕೆ ಸೇರಿರಬಹುದು ಅಥವಾ ಇಲ್ಲದಿರಬಹು. ಚಿತ್ರ ಬೇರೆಯದೇ ಕಥೆ ಹೇಳುತ್ತಿದೆ.
ನೀವು ವಿಭಿನ್ನ ಕಥೆಗಳನ್ನು ಆಯ್ದುಕೊಳ್ಳಲು ಕಾರಣ?
ನಟನಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಹೊಸ ವಿಷಯಗಳನ್ನು ಆಯ್ದುಕೊಂಡಾಗ ನಾವು ಒಂದಷ್ಟು ಹೊಸತನ್ನು ಕಲಿಯುತ್ತೇವೆ. ಹೊಸ ಪರಿಸರ, ಜನರ ಜೊತೆ ಬೆರೆಯುತ್ತೇವೆ. ಈ ಚಿತ್ರ ಕೊಡಗಿನ ಕಾಡಿನಲ್ಲಿ ಹೆಚ್ಚು ಚಿತ್ರೀಕರಣವಾಗಿದ್ದು. ಅಲ್ಲಿನ ಜನರ ಒಡನಾಟ ದೊರೆಯಿತು. ‘ಪೇಪೆ’ ಕೂಡ ಮಾಮೂಲಿ ಆ್ಯಕ್ಷನ್ ಸಿನಿಮಾವಲ್ಲ. ಸಂಸ್ಕೃತಿ ಸೊಗಡಿನ ಜೊತೆಗೆ ಸಾಗುವ ಚಿತ್ರ. ನನಗೆ ವೈಯಕ್ತಿಕವಾಗಿ ರಾಮ್‌ಕಾಂ ಸಿನಿಮಾಗಳು ಇಷ್ಟ. ಆ್ಯಕ್ಷನ್ ಸಿನಿಮಾ ಮಾಡಬೇಕೆಂದಿತ್ತು. ಒಂದು ಕಥೆ ಗಿಟಾರ್ ಹಿಡಿದವನನ್ನು ಬಯಸಿದರೆ ಮತ್ತೊಂದು ಕಥೆ ಲಾಂಗು, ಮಚ್ಚು ಹಿಡಿದವನನ್ನು ಕೇಳುತ್ತದೆ.
ಲಾಂಗು, ಮಚ್ಚಿನಿಂದ ಯುವಜನತೆಗೆ ತಪ್ಪು ಸಂದೇಶ ರವಾನೆಯಾಗುವುದಿಲ್ಲವೇ?
ಸಿನಿಮಾ ಯಾವತ್ತಿಗೂ ನಿಜ ಜೀವನವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ರಕ್ತಸಿಕ್ತ ದೃಶ್ಯಗಳೊಂದಿಗೆ ಅಪರಾಧ ಮಾಡಿ ಎಂದು ಎಲ್ಲಿಯೂ ಹೇಳುವುದಿಲ್ಲ. ಅಪರಾಧ ಮಾಡಿದರೆ ಏನಾಗುತ್ತದೆ ಎಂಬ ಪರಿಣಾಮವನ್ನೇ ಹೇಳುತ್ತೇವೆ. ಹೀಗಾಗಿ ತಪ್ಪು ಸಂದೇಶ ರವಾನೆಯಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ನಡೆಯದೇ ಇರುವುದು, ನಾವು ನೋಡದೇ ಇರುವುದು ಯಾವುದನ್ನೂ ತೋರಿಸುವುದಿಲ್ಲ. ನಮ್ಮ ನಡುವೆ ನಡೆಯುತ್ತಿರುವುದನ್ನೇ ಕಾಲ್ಪನಿಕವಾಗಿ ತೋರಿಸುತ್ತೇವೆ.
ಭಿನ್ನ ಪಾತ್ರಗಳಿಗೆ ಹೇಗೆ ಸಿದ್ಧರಾಗುತ್ತೀರಿ?
ನನಗೆ ಮೊದಲು ಕಥೆ ಇಷ್ಟವಾಗಬೇಕು. 4–5 ಸಲ ಕಥೆಯನ್ನು ಕೇಳುತ್ತೇನೆ. ಆಗ ಪಾತ್ರ ಅರ್ಧ ಅರ್ಥವಾಗಿರುತ್ತದೆ. ಸಹ ಕಲಾವಿದರು, ತಂಡಗಳ ಜೊತೆಗಿನ ಒಡನಾಟ, ಪಾತ್ರವಾಗಿ ಮಾನಸಿಕ ಸಿದ್ಧತೆ ಎಲ್ಲವೂ ಒಂದು ಹೊಸ ಪಾತ್ರಕ್ಕೆ ಒಗ್ಗಿಕೊಳ್ಳಲು ಸಹಕಾರಿ.
ಉತ್ತಮ ಪ್ರತಿಕ್ರಿಯೆ ಗಳಿಸಿದರೂ ನಿಮ್ಮ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ತಲುಪದಿರಲು ಏನು ಕಾರಣ?
ಒಂದೊಂದು ಸಿನಿಮಾಕ್ಕೆ ಒಂದೊಂದು ಕಾರಣ. ಇಂಥದ್ದೆ ಕಾರಣ ಎನ್ನಲು ಸಾಧ್ಯವಿಲ್ಲ. ಪ್ರತಿ ಸಲ ಈ ಸಿನಿಮಾ ಚೆನ್ನಾಗಿ ಆಗಬಹುದು ಎಂದಿರುತ್ತದೆ. ನಂತರ ಎಲ್ಲಿ ಎಡವಿದ್ದೇವೆ ಎಂದು ಆಲೋಚಿಸುತ್ತೇನೆ. ಬಿಡುಗಡೆ ದಿನಾಂಕ, ಪ್ರಚಾರ ಮೊದಲಾದವು ಕಾರಣವಾಗಬಹುದು. ಕೆಲವೊಮ್ಮೆ ನಾವು ಕಥೆ ಹೇಳಿದ ರೀತಿ ಪ್ರೇಕ್ಷಕರಿಗೆ ಇಷ್ಟವಾಗದೇ ಇರಬಹುದು. ನಿರೀಕ್ಷೆ ಇದ್ದ ಸಿನಿಮಾ ಜನರನ್ನು ತಲುಪುದಿದ್ದಾಗ ಬೇಸರ ಅನ್ನಿಸುತ್ತದೆ. ಜೊತೆಗೆ ಮುಂದಿನ ಸಿನಿಮಾಕ್ಕೆ ಇನ್ನಷ್ಟು ಶ್ರಮ ಹಾಕುವಂತೆ ಮಾಡುತ್ತದೆ. ‘ಪೇಪೆ’ ಎಲ್ಲ ರೀತಿಯಿಂದಲೂ ಭರವಸೆ ಮೂಡಿಸಿದೆ. ಈ ಸಿನಿಮಾವನ್ನು ಜನ ಹೇಗೆ ಸ್ವೀಕರಿಸಬಹುದೆಂದು ಕಾತುರವಿದೆ.
ನಿಮ್ಮ ಮುಂದಿನ ಸಿನಿಮಾಗಳು?
ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ‘ಗ್ರಾಮಾಯಣ’ ಇನ್ನೊಂದು 20 ದಿನದ ಚಿತ್ರೀಕರಣ ಬಾಕಿಯಿದೆ. ‘ಅಂದೊಂದಿತ್ತು ಕಾಲ’ ಚಿತ್ರ ಬಿಡುಗಡೆಗೆ ಸಿದ್ಧವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.