ನಾನಾಕಾರಣಗಳಿಂದ ಸ್ಥಗಿತಗೊಂಡಿದ್ದ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾಗೆ ಮರುಜೀವ ಸಿಕ್ಕಿದೆ. ‘ಪೆಪೆ’ ಸಿನಿಮಾ ಬಿಡುಗಡೆಗೆ ಹೊಸ್ತಿಲಲ್ಲೇ ವಿನಯ್ ಹೊಸ ಪ್ರಾಜೆಕ್ಟ್ ಆರಂಭಿಸಿದ್ದಾರೆ.
2018ರಲ್ಲೇ ಸೆಟ್ಟೇರಿದ್ದ ‘ಗ್ರಾಮಾಯಣ’ ಸಿನಿಮಾ ಹಲವು ಕಾರಣಗಳಿಂದ ಮಧ್ಯದಲ್ಲೇ ಸ್ಥಗಿತಗೊಂಡಿದ್ದು. ದೇವನೂರು ಚಂದ್ರು ಆ್ಯಕ್ಷನ್ ಕಟ್ ಹೇಳಿದ್ದ ಈ ಸಿನಿಮಾ ಇದೀಗ ಮರುಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಇತ್ತೀಚೆಗೆ ಚಿತ್ರದ ಮುಹೂರ್ತ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಟ ಉಪೇಂದ್ರ ಆರಂಭ ಫಲಕ ತೋರಿದರು. ಅಶ್ವಿನಿ ಪುನೀತ್ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ದುನಿಯಾ ವಿಜಯ್, ಧ್ರುವ ಸರ್ಜಾ, ರಾಜ್ ಬಿ. ಶೆಟ್ಟಿ, ಆರ್. ಚಂದ್ರು, ಪವನ್ ಒಡೆಯರ್, ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಲಹರಿ ಫಿಲ್ಮ್ಸ್ ಮನೋಹರ್ ನಾಯ್ಡು ಜೊತೆಗೂಡಿ ಈ ಪ್ರಾಜೆಕ್ಟ್‌ಗೆ ಮರುಜೀವ ನೀಡಿದ್ದಾರೆ. ‘ಯುಐ’ ಸಿನಿಮಾ ಬಳಿಕ ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಹಳೆಯ ಸಿನಿಮಾದ ಯಾವುದೇ ದೃಶ್ಯಾವಳಿಗಳನ್ನು ಬಳಸದೇ, ಹೊಸ ಕಥೆ ಮಾಡಿಕೊಂಡು ಮತ್ತೆ ಹೊಸದಾಗಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಇದು ದೇವನೂರು ಅವರ ಚೊಚ್ಚಲ ಸಿನಿಮಾ.
‘ಗ್ರಾಮಾಯಣ’ ಇದು ಗ್ರಾಮದಲ್ಲೇ ನಡೆಯುವ ಕಥೆ. ‘ಸಿಂಪಲ್’ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೇ ಈ ಕಥೆಗೆ ಇವರೇ ಸೂಕ್ತ ನಾಯಕ ಅಂದುಕೊಂಡೆ. ಅವರು ಕಥೆ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಚಿಕ್ಕಮಗಳೂರು, ದೇವರಾಯ ಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದೇವೆ. ಯಶಸ್ವಿನಿ ಅಂಚಲ್ ಛಾಯಾಚಿತ್ರಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ’ ಎಂದರು ದೇವನೂರು ಚಂದ್ರು.
‘ಯುಐ’ ಚಿತ್ರದ ಸೆಟ್‌ನಲ್ಲಿರುವಾಗ ‘ಗ್ರಾಮಾಯಣ’ ಚಿತ್ರದ ಟೀಸರ್ ನೋಡಿದೆ. ಟೀಸರ್‌ಗೆ ತುಂಬಾ ಉತ್ತಮವಾದ ಪ್ರತಿಕ್ರಿಯೆ ದೊರೆತಿತ್ತು. ಇಂತಹ ಒಳ್ಳೆಯ ಚಿತ್ರ ನಿಲ್ಲಬಾರದು ಎಂದು ಲಹರಿ ಫಿಲ್ಮ್ಸ್ ಜೊತೆ ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕೆ.ಪಿ.ಶ್ರೀಕಾಂತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.