ADVERTISEMENT

ಚಂದನವನದ ಮಾಸ್ಟರ್‌ಪೀಸ್ ಸಿನಿಮಾ ‘ನಾಗರಹಾವಿ’ಗೆ 50 ವರ್ಷ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಡಿಸೆಂಬರ್ 2022, 11:13 IST
Last Updated 29 ಡಿಸೆಂಬರ್ 2022, 11:13 IST
ನಾಗರಹಾವು ಸಿನಿಮಾ ಪೋಸ್ಟರ್
ನಾಗರಹಾವು ಸಿನಿಮಾ ಪೋಸ್ಟರ್   

70–80 ರ ದಶಕದ ಸಿನಿಪ್ರಿಯರಲ್ಲದೆ ಇಂದಿನ ಚಿತ್ರ ರಸಿಕರಿಗೆ 'ನಾಗರಹಾವು' ಎಂಬ ಮಾಸ್ಟರ್‌ಪೀಸ್ ಸಿನಿಮಾವನ್ನು ಮತ್ತು ಅದರ ಪಾತ್ರಗಳಾಗಿದ್ದ ರಾಮಾಚಾರಿ, ಚಾಮಯ್ಯ ಮೇಷ್ಟ್ರು, ಅಲಮೇಲು, ಮಾರ್ಗರೇಟ್, ಜಲೀಲ ಪಾತ್ರಗಳನ್ನು ಹೇಗೆ ಮರೆಯಲು ಸಾಧ್ಯ?

ಹೌದು, ಕನ್ನಡ ಚಿತ್ರರಂಗದ ಒಂದು ಅದ್ಭುತ ಚಿತ್ರ ‘ನಾಗರಹಾವ’ನ್ನು ಈಗ ನೆನಪಿಸಿಕೊಳ್ಳಲು ಮುಖ್ಯ ಕಾರಣ ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 50 ವರ್ಷ ಆಯಿತು. 1972 ಡಿಸೆಂಬರ್ 29 ರಂದು ‘ನಾಗರಹಾವು’ ಚಿತ್ರಮಂದಿರಗಳಲ್ಲಿ ಬುಸುಗುಟ್ಟಿತ್ತು. ಈ ಚಿತ್ರಕ್ಕೀಗ ಸುವರ್ಣ ಸಂಭ್ರಮ.

ಚಂದನವನದಲ್ಲಿ ಮಾಸ್ಟರ್‌ಪೀಸ್ ಎಂದು ಕರೆಯಿಸಿಕೊಳ್ಳುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ಕಣಗಾಲರು, ಕಾಂದಂಬರಿಕಾರ ತ.ರಾ.ಸು ಅವರ ನಾಗರಹಾವು ಹಾಗೂ ಇತರ ಎರಡು ಕಾದಂಬರಿಗಳನ್ನು ಆದರಿಸಿ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಅಂದಿನ ಖ್ಯಾತ ನಿರ್ಮಾಪಕರಾಗಿದ್ದ ಎನ್. ವೀರಸ್ವಾಮಿ ಈ ಸಿನಿಮಾವನ್ನು ‘ಈಶ್ವರಿ ಪ್ರೊಡಕ್ಷನ್ಸ್’ ಹೆಸರಿನಲ್ಲಿ ನಿರ್ಮಾಣ ಮಾಡಿದ್ದರು.

ADVERTISEMENT

ನಾಗರಹಾವು ಸಿನಿಪ್ರಿಯರನ್ನು ಸೆಳೆದಿದ್ದಲ್ಲದೇ ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿತ್ತು. ಸ್ಲೋ ಮೋಷನ್‌ ತಂತ್ರಜ್ಞಾನದೊಂದಿಗೆ ಬಂದ ಭಾರತೀಯ ಮೊದಲ ಚಿತ್ರ (ಬಾರೇ ಬಾರೇ ಹಾಡು) ಇದಾಗಿತ್ತು.

ಅಲ್ಲದೇ ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್, ಅಂಬರೀಷ್ ಎಂಬ ದೈತ್ಯ ಪ್ರತಿಭೆಗಳನ್ನು ಪರಿಚಯಿಸಿದ ಚಿತ್ರ ಕೂಡ ಇದಾಗಿತ್ತು.

ಒಂದು ಸುಂದರ ಹಾಗೂ ಕರುಣಾಜನಕ ತ್ರಿಕೋನ ಪ್ರೇಮಕಥೆಯನ್ನು ಹೊಂದಿದ್ದ ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಎಂಬ ಆ್ಯಂಗ್ರಿ ಎಂಗ್ ಮ್ಯಾನ್ ಆಗಿ ವಿಷ್ಣುವರ್ಧನ್ ಮಿಂಚಿದ್ದರು. ಈ ಚಿತ್ರದಿಂದ ರಾತ್ರೋರಾತ್ರಿ ವಿಷ್ಣುವರ್ಧನ್ ಅವರಿಗೆ ಸ್ಟಾರ್ ಪಟ್ಟ ಬಂದಿತ್ತು. ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಐವತ್ತು ವರ್ಷಗಳ ಹಿಂದೆಯೇ ಶತದಿನೋತ್ಸವ ಕಂಡು ಮುನ್ನುಗ್ಗಿತ್ತು.

ಅಲಮೇಲು ಆಗಿ ಖ್ಯಾತ ನಟಿ ಆರತಿ, ಚಾಮಯ್ಯ ಮೇಷ್ಟ್ರಾಗಿ ಅಶ್ವತ್ಥ್, ಜಲೀಲನಾಗಿ ಅಂಬರೀಷ್, ರಾಮಾಚಾರಿ ತಾಯಿಯಾಗಿ ಜಯಶ್ರೀ, ಸಾಕು ತಾಯಿಯಾಗಿ ಲೀಲಾವತಿ, ಪ್ರಿನ್ಸಿಪಾಲ್ ಆಗಿ ಅಂಕಲ್ ಲೋಕನಾಥ್, ಪೈಲ್ವಾನ್ ಆಗಿ ಎಂ.ಪಿ ಶಂಕರ್, ರಾಮಚಾರಿಯ ಸ್ನೇಹಿತ ವರದನಾಗಿ ಶಿವರಾಂ ಅಭಿನಯಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಒನಕೆ ಓಬವ್ವನ ಪಾತ್ರದಲ್ಲಿ ನಟಿ ಜಯಂತಿ ಮಿಂಚಿದ್ದು ಎವರ್‌ಗ್ರೀನ್.

ನಾಗರಹಾವು ಸಿನಿಮಾಗಾಗಿ ಚಿತ್ರದುರ್ಗ ಸೇರಿದಂತೆ ಅನೇಕ ಕಡೆ 73 ದಿನ ಶೂಟಿಂಗ್ ನಡೆಸಲಾಗಿತ್ತು. ಕಲಾವಿದರು ಸೇರಿದಂತೆ 40 ಮಂದಿಯ ಚಿತ್ರ ತಂಡ ಭಾರಿ ಉಪಕರಣಗಳೊಂದಿಗೆ ಚಿತ್ರದುರ್ಗ ಕೋಟೆಯನ್ನು ಏರಿ ಹಲವು ದಿನ ಶೂಟಿಂಗ್ ನಡೆಸಿತ್ತು.

ಇನ್ನೊಂದು ವಿಶೇಷ ಸಂಗತಿಯೆಂದರೆ ಅಂಬರೀಷ್ ಮಿಂಚಿದ್ದ ಜಲೀಲನ ಪಾತ್ರದಲ್ಲಿ ರಜನಿಕಾಂತ್ ಅಭಿನಯಿಸಬೇಕಾಗಿತ್ತು. ಆದರೆ, ಜಲೀಲನ ಪಾತ್ರದ ಸ್ವಲ್ಪ ಭಾಗ ಶೂಟಿಂಗ್ ಆಗಿದ್ದ ಮೇಲೆ ರಜನಿಕಾಂತ್ ಅವರನ್ನು ಕಾರಣಾಂತರಗಳಿಂದ ಕಣಗಾಲ್ ಕೈಬಿಟ್ಟಿದ್ದರು.

ವಿಜಯ್ ಭಾಸ್ಕರ್ ಅವರ ಸಂಗೀತದಲ್ಲಿ ನಾಗರಹಾವಿನ ಆರು ಹಾಡುಗಳು (ಬಾರೆ ಬಾರೆ,ಕನ್ನಡ ನಾಡಿನ,ಹಾವಿನ ದ್ವೇಷ, ಸಂಗಮ ಸಂಗಮ,ಕರ್ಪೂರದ ಗೊಂಬೆ, ಕಥೆ ಹೇಳುವೆ) ಸೂಪರ್ ಹಿಟ್ ಆಗಿದ್ದವು. ಪಿ.ಬಿ ಶ್ರೀನಿವಾಸ್, ಎಸ್‌.ಪಿ ಬಾಲಸುಬ್ರಹ್ಮಣ್ಯ, ಪಿ.ಸುಶೀಲ ಅರವ ಧ್ವನಿಯಲ್ಲಿ ಕೇಳಿಬಂದಿದ್ದ ಈ ಹಾಡುಗಳು ಇಂದಿಗೂ ಜನಪ್ರಿಯ. ಅಂದಹಾಗೇ ಈ ಸಿನಿಮಾವನ್ನು ಸುಂದರವಾಗಿ ಚಿಟ್ಟಿಬಾಬು ಛಾಯಾಗ್ರಹಣ ಮಾಡಿದ್ದರು. ವಿ.ಪಿ ಕೃಷ್ಣ ಪ್ರೇಕ್ಷಕರನ್ನು ಹಿಡಿದಿಡುವಂತೆ ಎಡಿಟಿಂಗ್ ಮಾಡಿದ್ದರು.

50 ವರ್ಷಗಳ ಹಿಂದೆ ತೆರೆ ಕಂಡಿದ್ದ ನಾಗರಹಾವು ಸಿನಿಮಾವನ್ನುವೀರಸ್ವಾಮಿ ಪುತ್ರ, ನಟ ರವಿಚಂದ್ರನ್ ಸಹೋದರ ಬಾಲಾಜಿ, ‘ಕಲರ್ ಡಿಜಿಟಲ್ ಸ್ಕೋಪ್‌’ನಲ್ಲಿ ಇತ್ತೀಚೆಗೆಬಿಡುಗಡೆ ಮಾಡಿ ಯಶಸ್ಸು ಕಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.