ಗುನುಗುವಿಕೆಯಿಂದ ಗೀತೆ ರಚನೆವರೆಗೆ, ಗೀತ ರಚನೆಯಿಂದ ಸಂಗೀತ ಅಳವಡಿಕೆವರೆಗೆ... ಹೀಗೆ ಸರಿಗಮ ಸಾಂಗತ್ಯದ ಸೊಬಗನ್ನು
ವಿ.ಮನೋಹರ್ ಮೊನ್ನೆ ಶ್ರೋತೃಗಳಿಗೆ ಉಣಬಡಿಸಿದರು. ಅಂದಹಾಗೆ,ಇದು ನಡೆದದ್ದು ‘ಆಲದ ಮರ’ದ (ಪ್ರಜಾವಾಣಿ ಕ್ಲಬ್ ಹೌಸ್‌ನ
ಭಾನುವಾರದ ಮಾತುಕತೆ ವೇದಿಕೆ) ಅಡಿಯಲ್ಲಿ...
ಬಾನುಲಿಯಿಂದ ಬೆಳ್ಳಿತೆರೆವರೆಗೆ...
60ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ನಾಲ್ಕು ಮನೆಗಳಲ್ಲಿ ಮಾತ್ರ ರೇಡಿಯೊ ಇತ್ತು. ಆ ಮನೆಗಳ ಪೈಕಿ ಒಂದು ನನ್ನ ಸ್ನೇಹಿತನ ಮನೆ. ಶಾಲೆ ಬಿಟ್ಟ ಬಳಿಕ ಅವನ ಮನೆಗೆ ಹೋಗಿ ರೇಡಿಯೊ ಹಾಡುಗಳನ್ನು ಕೇಳುವುದು, ಗುನುಗುವುದು ನಡೆದೇ ಇತ್ತು. ವಿಟ್ಲದಲ್ಲೊಂದು ರೇಡಿಯೊ ಮೈದಾನ ಇತ್ತು. ಅಲ್ಲಿಯೂ ರೇಡಿಯೊ ಕೇಳುವುದು ನಡೆದಿತ್ತು. ಮುಂದೆ ಅದೇ ಜಾಗದಲ್ಲಿ ಸಿನಿಮಾ ಟೆಂಟ್ ಬಂದಿತು. ಅಲ್ಲಿ ಸಿನಿಮಾ ನೋಡಿ ಹಾಡು ಗುನುಗುವುದು ಶುರುವಾಯಿತು. ಹೀಗೆ ಗುನುಗುವಿಕೆಯೇ ಸಂಗೀತದ ಹುಚ್ಚು ಹಿಡಿಸಿ ನನ್ನದೇ ಆದ ರಾಗಸೃಷ್ಟಿಯವರೆಗೆ ಮುಂದುವರಿಯಿತು’ ಎಂದು ನಾಂದಿ ಹಾಡಿದರು.
‘ಬೆಂಗಳೂರಿನಲ್ಲಿ ₹ 300 ಸಂಬಳಕ್ಕೆ ‘ಜನವಾಣಿ’ ಪತ್ರಿಕೆಯಲ್ಲಿ ಕೆಲಸ ಆರಂಭಿಸಿದ್ದೆ. ‘ಅಪರಿಚಿತ’ ಸಿನಿಮಾ ಬಿಡುಗಡೆಯಾದ ಹೊತ್ತಿನಲ್ಲಿ ಶಂಖನಾದ ಅರವಿಂದ್ ಪರಿಚಯವಾಗಿ ಅವರು ಮುಂದೆ ಕಾಶಿನಾಥ್ ಅವರಿಗೆ ಪರಿಚಯಿಸಿದರು’ ಎಂದು ಅವರು ಹೇಳಿದರು. ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರ ಪರಿಚಯ ಆಗಿದ್ದು, ಕಾಶಿನಾಥ್ ಅವರ ಅನುಭವ ಚಿತ್ರಕ್ಕೆ ಹಾಡು ಬರೆದದ್ದು, ಕಾಶೀನಾಥ್ ಅವರ ಮನೆಯಲ್ಲೇ ಉಳಿದುಕೊಂಡದ್ದು, ಅವರು ತಮ್ಮನ ಹಾಗೆ ನೋಡಿಕೊಂಡದ್ದು ಹೀಗೆಲ್ಲಾ ನೆನಪಿಸಿಕೊಳ್ಳುವಾಗ ಮನೋಹರ್ ಅವರಲ್ಲೊಂದು ಕೃತಜ್ಞತೆ, ವಿನಯವಂತಿಕೆಯ ಭಾವ ಇಣುಕಿತ್ತು.
‘ಸಿನಿಮಾ ಸಂಗೀತದಲ್ಲಿ ಜನಪದ ವಾದ್ಯಗಳನ್ನೇ ನೇರವಾಗಿ ಬಳಸಿದ್ದೀರಾ’ ಎಂಬ ಪ್ರಶ್ನೆ ಎದುರಾಯಿತು. ಪ್ರತಿಕ್ರಿಯಿಸಿದ ಮನೋಹರ್, ‘ಹೌದು ‘ಕೋಲುಮಂಡೆ ಜಂಗಮದೇವ ಕೋರಣ್ಯಕೆ ದಯಮಾಡವ್ರೆ...’ ಹಾಡಿನಲ್ಲಿ ತಾಳ, ಉಡುಕವನ್ನು ಬಳಸಿದ್ದೇವೆ. ‘ಓ ಮಲ್ಲಿಗೆ’ ಸಿನಿಮಾದ ‘ಆರತಿ ಅಣ್ತಮ್ಮಂಗೆ...’ ಹಾಡಿನಲ್ಲಿ ಡೊಳ್ಳನ್ನು ಬಳಸಿದ್ದೇವೆ. ‘ತೇರಾ ಏರಿ ಅಂಬರದಾಗೆ’ ಚಿತ್ರದ ಹಾಡಿನಲ್ಲಿಕಂಸಾಳೆ ಬಳಸಿದ್ದೇವೆ... ಹಾಗೆಂದು ಎಲ್ಲ ಸಂದರ್ಭಗಳಲ್ಲಿ ಜನಪದ ವಾದ್ಯಗಳನ್ನೇ ನೇರವಾಗಿ ಬಳಸಲು ಸಿಕ್ಕ ಅವಕಾಶ ಕಡಿಮೆ’ ಎಂದು ಹೇಳಿದರು.
ನಟನೆ ಬಯಸದೇ ಬಂದ ಭಾಗ್ಯ. ಉಪೇಂದ್ರ ಮಾಡಿದ ಕೆಲಸವದು. ಎಲ್ಲ ಪಾತ್ರಗಳನ್ನೂ ಒಪ್ಪಿಕೊಳ್ಳುವುದಿಲ್ಲ. ಕೆಲವೆಡೆ ಕೋಡಂಗಿ ಆಗಿ ತೋರಿಸಿದ್ದಾರೆ. ‘ಕನಸುಗಾರ’, ‘ಲಾಲಿಹಾಡು’ ಚಿತ್ರಗಳಲ್ಲಿ ನನ್ನನ್ನು ವಿ.ಮನೋಹರ್ ಆಗಿಯೇ ತೋರಿಸಿದ್ದಾರೆ. ಅದೇ ಆಶ್ಚರ್ಯ ಎಂದರು.
ಕಾಶಿನಾಥ್ ಅವರ ಬಳಿ ನಾನು ನಿರ್ದೇಶಕ ಆಗಬೇಕು ಎಂದೇ ಸೇರಿಕೊಂಡಿದ್ದೆ. ಆದರೆ, ಸಂಗೀತದ ಅವಕಾಶಗಳೇ ಪ್ರವಾಹದಂತೆ ಹರಿದುಬಂದವು. ಈ ಮೊದಲು ‘ಕುಸುಮಬಾಲೆ’ ಎಂಬ ಆಲ್ಬಂ ತಂದಿದ್ದೆವು. ಅದನ್ನು ನೋಡಿದ ಉಪೇಂದ್ರ ಅವರು ‘ತರ್ಲೆ ನನ್ ಮಗ’ ಸಿನಿಮಾದಲ್ಲಿ (ನಾನು ಸಹಾಯಕ ನಿರ್ದೇಶಕ ಆಗಿದ್ದೆ.) ನೀವೇ ಸಂಗೀತ ಮಾಡಿ ಅಂದರು. ‘ಅಂತಿಂಥ ಗಂಡು ನಾನಲ್ಲ...’ ಹಾಡು ಹಿಟ್ ಆಯಿತು. ಹೀಗೆ ಹಾಡಿನ ಜಾಡು ಹಿಡಿದು ಹೋದೆ. ನಿರ್ದೇಶಕನಾಗುವ ಕನಸು ಹಾಗೇ ಉಳಿಯಿತು ಎಂದು ನೆನಪಿಸಿಕೊಂಡರು.
ಪಲ್ಲವಿ ಪ್ರಕಾಶ್ ಅವರ ಮೂಲಕ ‘ಓ ಮಲ್ಲಿಗೆ’ ನಿರ್ದೇಶನ ಮಾಡಿದೆ. ವಾಸ್ತವವಾಗಿ ಅದರ ಚಿತ್ರಕಥೆ ರೂಪುಗೊಂಡಿದ್ದು ಸಂಕಲನದ ಮೇಜಿನಲ್ಲಿ. ಸಂಕಲನಕಾರರು ಇಡೀ ಚಿತ್ರದ ಸ್ವರೂಪ ಬದಲಾಯಿಸಿಬಿಟ್ಟರು. ಅದು ಸೂಪರ್‌ಹಿಟ್ ಆಯಿತು. ಮುಂದೆ ಇಂದ್ರಧನುಷ್ ನಿರ್ದೇಶಿಸಿದೆ. ಮುಂದೆ ಯಾಕೋ ಯಾವ ನಿರ್ದೇಶನ ಅವಕಾಶಗಳೂ ಬರಲಿಲ್ಲ ಎಂದು ಸ್ವಗತದಲ್ಲಿ ಹೇಳಿಕೊಂಡರು.
ಹಾಡಿನ ಸಾಹಿತ್ಯದ ಸ್ವರೂಪ ಬದಲಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಮನೋಹರ್, ‘ಹೌದು, ಅದು ಸನ್ನಿವೇಶದ ಮೇಲೆ ಅವಲಂಬಿತ. ರೌಡಿಗಳ ಬಾಯಲ್ಲಿ ‘ಜಯತು ಜಯ ವಿಠಲ...’ ಎಂದು ಹಾಡಿಸಲಿಕ್ಕಾಗುತ್ತದೆಯೇ? ಅವರು ತಮ್ಮದೇ ಆದ ಭಾಷೆಯಲ್ಲಿ ಕೆಂಚಾಲೋ ಮಂಚಾಲೋ... ಎಂದೆಲ್ಲಾ ಹಾಡುತ್ತಾರೆ. ಕುಡುಕರ ಹಾಡುಗಳೂ ಹೀಗೆಯೇ ಇವೆ. ಆ ಹಾಡುಗಳಲ್ಲಿ ಒಂದು ತುಂಟತನ ಇದೆ. ಯೋಗರಾಜ್ ಭಟ್ರು ತುಂಬಾ ಚೆನ್ನಾಗಿ ಅಂಥ ಹಾಡುಗಳನ್ನು ಬರೆಯುತ್ತಾರೆ ಎಂದರು.
ಸಿನಿಮಾ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ಯಾಕೆ ಇಲ್ಲ ಎಂಬ ಪ್ರಶ್ನೆಯೂ ಎದುರಾಯಿತು. ಮನೋಹರ್ ಪ್ರತಿಕ್ರಿಯೆ ಹೀಗಿತ್ತು. ಇದ್ದಾರೆ. ಸಾಯಿ ಸುಕನ್ಯಾ, ಮಾನಸಾ ಸೇರಿದಂತೆ ಕೆಲವರಷ್ಟೇ ಇದ್ದಾರೆ. ಹೆಣ್ಣುಮಕ್ಕಳು ಚೆನ್ನಾಗಿಯೇ ಬರೆಯುತ್ತಾರೆ. ಆದರೆ, ಅಲ್ಲೊಂದು ತುಂಬಾ ಗಂಭೀರತೆ, ಭಾವುಕತನ ಕಾಣುತ್ತದೆ. ಸಿನಿಮಾದಲ್ಲಿ ಎಲ್ಲ ಕಡೆ ಅದು ಬೇಕಾಗುವುದಿಲ್ಲ. ಮಹಿಳೆಯರು ಸಿನಿಮಾ ಸಾಹಿತ್ಯ ಕ್ಷೇತ್ರಕ್ಕೆ ಬಂದರೆ ಈ ಕ್ಷೇತ್ರ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.