ನವದೆಹಲಿ: ಭಾರತೀಯ ಚಿತ್ರರಂಗಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ಪ್ರಸಕ್ತ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಕೇಂದ್ರ ಮಾಹಿತಿ ಹಾಗೂ ಪ್ರಚಾರ ಸಚಿವ ಅನುರಾಗ್ ಠಾಕೂರ್ ಈ ವಿಷಯವನ್ನು ಮಂಗಳವಾರ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
85 ವರ್ಷದ ವಹೀದಾ ಅವರು ಪ್ಯಾಸಾ, ಸಿಐಡಿ, ಗೈಡ್, ಖಾಗಜ್ ಕೆ ಫೂಲ್, ಖಾಮೋಷಿ, ತ್ರಿಶೂಲ್ ಚಿತ್ರಗಳಲ್ಲಿನ ಮನೋಜ್ಞ ಅಭಿನಯದಿಂದ ಚಿರಪರಿಚಿತರಾದವರು. 1955ರಲ್ಲಿ ತೆಲುಗು ಚಿತ್ರ ‘ರೊಜುಲು ಮಾರಾಯಿ’ ಎಂಬ ಚಿತ್ರದ ಮೂಲಕ ವಹೀದಾ ಅವರು ತಮ್ಮ ಅಭಿನಯ ಯಾತ್ರೆ ಆರಂಭಿಸಿದರು. 1956ರಲ್ಲಿ ದೇವಾನಂದ್ ಅವರ ಸಿಐಡಿ ಮೂಲಕ ಹಿಂದಿ ಚಿತ್ರರಂಗಕ್ಕೆ ಅವರು ಪದಾರ್ಪಣೆ ಮಾಡಿದರು.
‘ಕಳೆದ ಐದು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿರುವ ಹಿರಿಯ ನಟಿ ಹಲವು ಭಾಷೆಗಳಲ್ಲಿ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1971ರಲ್ಲಿ ತೆರೆಕಂಡ ರೇಷ್ಮಾ ಹಾಗೂ ಷೆರಾ ಚಿತ್ರಕ್ಕಾಗಿ ಅವರು ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳೂ ವಹೀದಾ ಅವರಿಗೆ ಸಂದಿವೆ’ ಎಂದು ಅನುರಾಗ್ ಠಾಕೂರ್ ಬರೆದುಕೊಂಡಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾದ ಸಂದರ್ಭದಲ್ಲೇ ಭಾರತೀಯ ಚಿತ್ರರಂಗದ ಹಿರಿಯ ನಟಿಯೊಬ್ಬರಿಗೆ ಅವರ ಜೀವಮಾನ ಸಾಧನೆ ಪ್ರಶಸ್ತಿ ಘೋಷಣೆಯಾಗಿರುವುದು ಹೆಚ್ಚು ಅರ್ಥಪೂರ್ಣ’ ಎಂದಿದ್ದಾರೆ.
2021ರಲ್ಲಿ ತೆರೆಕಂಡ ‘ಸ್ಕೇಟರ್ ಗರ್ಲ್’ ಚಿತ್ರ ವಹೀದಾ ಅವರು ನಟಿಸಿದ ಇತ್ತೀಚಿನ ಚಿತ್ರ.
2020ರಲ್ಲಿ ಹಿಂದಿ ಚಿತ್ರ ನಟಿ ಆಶಾ ಪರೇಖ್ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.