ಬೆಂಗಳೂರು: ನಾವು ಭಾರತೀಯರು. ಆದರೆ, ವಿವಿಧ ಭಾಷೆಗಳ ಹಿನ್ನೆಲೆಯುಳ್ಳವರು. ನಮಗೆ ನಮ್ಮದೇ ಪ್ರತ್ಯೇಕ ಧ್ವಜಗಳಿವೆ ಎಂದು ಗಾಯಕ, ಸಂಗೀತ ನಿರ್ದೇಶಕ ಅದ್ನಾನ್ ಸಾಮಿಗೆ ನಟಿ, ಮಾಜಿ ಸಂಸದೆ ರಮ್ಯಾ ತಿಳಿ ಹೇಳಿದ್ದಾರೆ.
‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದ ಆರ್‌ಆರ್‌ಆರ್ ಚಿತ್ರಕ್ಕೆ ಅಭಿನಂದಿಸುವ ವೇಳೆ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಅವರು ‘ತೆಲುಗು ಧ್ವಜ ಹಾರಾಡುತ್ತಿದೆ’ ಎಂದು ಟ್ವೀಟ್ ಮಾಡಿದ್ದರು. ಇದನ್ನು ಬಾಲಿವುಡ್ ಸಂಗೀತ ನಿರ್ದೇಶಕ ಅದ್ನಾನ್ ಸಾಮಿ ವಿರೋಧಿಸಿದ್ದರು. ಸಮಿ ವಿರೋಧಕ್ಕೆ ರಮ್ಯಾ ಆಕ್ಷೇಪವೆತ್ತಿದ್ದಾರೆ. ಅಲ್ಲದೇ ವಿವಿಧತೆಯಲ್ಲಿ ಏಕತೆಯ ಪಾಠ ಹೇಳಿದ್ದಾರೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಲನಚಿತ್ರದಲ್ಲಿನ ‘ನಾಟು ನಾಟು’ ಗೀತೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಒಲಿದಿದೆ. ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ ಈ ಹಾಡು ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾಗಿದೆ.
ಈ ಪ್ರಶಸ್ತಿ ಪ್ರಕಟವಾಗುತ್ತಲೇ ಟ್ವೀಟ್ ಮಾಡಿದ್ದ ಆಂಧ್ರ ಸಿಎಂ ಜಗನ್ ಮೋಹನ ರೆಡ್ಡಿ, ‘ತೆಲುಗು ಬಾವುಟ ಹಾರಾಡುತ್ತಿದೆ. ಆಂಧ್ರ ಜನರ ಪರವಾಗಿ ನಾನು ಕೀರವಾಣಿ, ರಾಜಮೌಳಿ, ಜೂನಿಯರ್ ಎನ್‌ಟಿಆರ್, ರಾಮಚರಣ್ ತೇಜ ಮತ್ತು ಆರ್‌ಆರ್‌ಆರ್ ಸಿನಿಮಾದ ಇಡೀ ತಂಡವನ್ನು ಅಭಿನಂದಿಸುತ್ತೇನೆ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ’ ಎಂದು ಟ್ವೀಟ್ ಮಾಡಿದ್ದರು.
ರೆಡ್ಡಿ ಅವರ ಈ ಟ್ವೀಟ್‌ಗೆ ಅದ್ನಾನ್ ಸಾಮಿ ವಿರೋಧ ವ್ಯಕ್ತಪಡಿಸಿದ್ದರು. ‘ತೆಲುಗು ಧ್ವಜ? ಅಂದರೆ, ಭಾರತದ ಧ್ವಜ ಎಂದರ್ಥ ಅಲ್ಲವೇ? ನಾವು ಮೊದಲು ಭಾರತೀಯರು. ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದನ್ನು ನಿಲ್ಲಿಸಿ. ವಿಶೇಷವಾಗಿ, ಅಂತರಾಷ್ಟ್ರೀಯವಾಗಿ. ನಾವೆಲ್ಲರೂ ಒಂದೇ ದೇಶದವರು. ನಾವು 1947 ರಲ್ಲಿ ನೋಡಿದಂತೆ ಈ ‘ಪ್ರತ್ಯೇಕತಾವಾದಿ’ ಧೋರಣೆ ಅತ್ಯಂತ ಅನಾರೋಗ್ಯಕರವಾದದ್ದು. ಜೈ ಹಿಂದ್’ ಎಂದು ಹೇಳಿದ್ದಾರೆ.
ಅದ್ನಾನ್ ಸಾಮಿ ನಿಲುವನ್ನು ನಟಿ ರಮ್ಯಾ ಗುರುವಾರ ಟ್ವಿಟರ್‌ನಲ್ಲೇ ವಿರೋಧಿಸಿದ್ದಾರೆ. ‘ಹೌದು, ನಾವು ಭಾರತೀಯರು. ಆದರೆ ನಾವು ಕನ್ನಡಿಗರು, ತಮಿಳರು, ತೆಲುಗರು, ಬೆಂಗಾಲಿಗಳು... ಹೀಗೇ ನಮ್ಮದೇ ಭಾಷೆಗಳನ್ನು ಮಾತನಾಡುವವರಾಗಿದ್ದೇವೆ. ಅದರಂತೇ ನಾವೆಲ್ಲರೂ ನಮ್ಮದೇ ‘ಧ್ವಜ’ಗಳನ್ನು ಹೊಂದಿದ್ದೇವೆ. ನಾವು ಭಾರತೀಯರಾಗಿಯೂ ಮೂಲ ಸಂಸ್ಕೃತಿ, ಭಾಷೆ, ಧ್ವಜಗಳನ್ನು ಹೊಂದಿರುವರಾಗಿದ್ದೇವೆ. ಇದಕ್ಕಾಗಿ ಹೆಮ್ಮೆ ಪಡುತ್ತೇವೆ. ವಿವಿಧತೆಯಲ್ಲಿ ಏಕತೆ ಎಂಬುದನ್ನು ನೆನಪಾಗುತ್ತದೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.