ಮುಂಬೈ: ‘ಕಂಪನಿಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಉನ್ನತ ಮಟ್ಟದ ಅಧಿಕಾರ ದೊರೆತಾಗ ಮಾತ್ರ ಇತರ ಮಹಿಳೆಯರು ಸುರಕ್ಷಿತಾ ಭಾವದಿಂದ ಕೆಲಸ ಮಾಡಲು ಸಾಧ್ಯ’ ಎಂದು ನಿರ್ಮಾಪಕಿ ಏಕ್ತಾ ಆರ್. ಕಪೂರ್ ಹೇಳಿದ್ದಾರೆ.
ಮಲಯಾಳ ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ನ್ಯಾ. ಹೇಮಾ ಸಮಿತಿ ವರದಿ ಕುರಿತು ಅವರು ಮಂಗಳವಾರ ಪ್ರತಿಕ್ರಿಯಿಸಿ, ‘ಚಿತ್ರೀಕರಣ ಸೆಟ್‌ನಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ಪ್ರಜ್ಞಾಪೂರ್ವಕ ಪ್ರಯತ್ನವನ್ನು ನಡೆಸುವುದು ಅನಿವಾರ್ಯ’ ಎಂದಿದ್ದಾರೆ.
ತಮ್ಮ ನಿರ್ಮಾಣದ ‘ದಿ ಬಕ್ಕಿಂಗ್‌ಹ್ಯಾಮ್ ಮರ್ಡರ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಏಕ್ತಾ, ‘ಬಹಳಷ್ಟು ಕಂಪನಿಗಳು ಹಾಗೂ ಸ್ಥಳಗಳಲ್ಲಿ ಉನ್ನತ ಮಟ್ಟದಲ್ಲಿ ಮಹಿಳೆಯರು ಇರಬೇಕು. ಇದಕ್ಕೆ ಮಹಿಳೆಯರೇ ಮುನ್ನುಡಿ ಬರೆಯಬೇಕು. ಮಹಿಳೆಯರಿಗೆ ವೃತ್ತಿ ಸ್ಥಳದಲ್ಲಿ ಸುರಕ್ಷಿತ ವಾತಾವರಣ ಸೃಷ್ಟಿಸುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಬೇಕಿದೆ. ಮಹಿಳೆಯರು ವೃತ್ತಿಪರ ಕೆಲಸಗಳಲ್ಲಿ ನಾಯಕತ್ವ ಗುಣ ಪ್ರದರ್ಶಿಸಬೇಕು. ಇದು ಈಗ ಆರಂಭವಾಗಿದೆ. ಸಾಗಬೇಕಾದ ಹಾದಿ ಇನ್ನೂ ಬಹಳಷ್ಟಿದೆ’ ಎಂದಿದ್ದಾರೆ.
‘ಮಹಿಳೆಯರ ಸುರಕ್ಷತೆ ಎನ್ನುವುದು ಕೇವಲ ಚಿತ್ರರಂಗದಲ್ಲಿನ ಸಮಸ್ಯೆ ಅಲ್ಲ. ಇಂಥ ಘಟನೆಗಳು ಯಾವುದೇ ಉದ್ಯಮದಲ್ಲೂ ನಡೆಯಬಾರದು. ಇದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಇಂದಿನ ದಿನದಲ್ಲಿ ಹೆಚ್ಚು ಮಹಿಳೆಯರು ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿರುವುದರಿಂದ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಸೃಷ್ಟಿಯಾಗುತ್ತಿದೆ. ಮಹಿಳೆಯರ ಸುರಕ್ಷತೆ ಪುರುಷರ ಜವಾಬ್ದಾರಿಯೂ ಹೌದು. ಯಾವುದೇ ಕ್ಷೇತ್ರವಿರಲಿ ಅಲ್ಲಿ ಸಮಾನತೆ ಹಾಗೂ ಸುರಕ್ಷತೆ ಖಾತ್ರಿಯನ್ನು ಪುರುಷರೂ ನೀಡಬೇಕು’ ಎಂದು ಏಕ್ತಾ ಅಭಿಪ್ರಾಯಪಟ್ಟಿದ್ದಾರೆ.
ಕೇರಳದ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ನ್ಯಾ. ಹೇಮಾ ವರದಿಯು ಬಂಗಾಳಿ, ತೆಲುಗು ಸೇರಿದಂತೆ ವಿವಿಧ ಚಿತ್ರೋದ್ಯಮಗಳಲ್ಲೂ ಪ್ರತಿಧ್ವನಿಸುತ್ತಿದೆ.
‘‘ದಿ ಬಕ್ಕಿಂಗ್‌ಹ್ಯಾಮ್ ಮರ್ಡರ್ಸ್’ ಚಿತ್ರ ನಿರ್ಮಾಣಕ್ಕೆ ಇಬ್ಬರು ನಿರ್ಮಾಪಕಿಯರು ಮುಂದಾಗಿದ್ದಾರೆ. ಮಹಿಳಾ ಅಧಿಕಾರಿ ಸುತ್ತಲಿನ ಈ ಚಿತ್ರವು, ಮಹಿಳೆಯರಲ್ಲಿ ಸುರಕ್ಷಿತಾ ಭಾವ ಹಾಗೂ ಶಕ್ತಿಯನ್ನು ತುಂಬಲಿದೆ. ಕರೀನಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ಈ ಚಿತ್ರ ಸೆ. 13ರಂದು ತೆರೆ ಕಾಣಲಿದೆ’ ಎಂದು ಏಕ್ತಾ ಕಪೂರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.