ADVERTISEMENT

‘ವೀಕ್‌ ಎಂಡ್‌’ನಲ್ಲಿ ತಣ್ಣನೆಯ ಖುಷಿ

ಕೆ.ಎಂ.ಸಂತೋಷ್‌ ಕುಮಾರ್‌
Published 25 ಮೇ 2019, 19:30 IST
Last Updated 25 ಮೇ 2019, 19:30 IST
ವೀಕ್‌ ಎಂಡ್‌
ವೀಕ್‌ ಎಂಡ್‌   

ಸಾಫ್ಟ್‌ವೇರ್‌ ಉದ್ಯೋಗಿಗಳೆಂದರೆ ಎಲ್ಲರ ಕಣ್ಮುಂದೆ ಬರುವುದು ಲಕ್ಷ ಲಕ್ಷ ಸಂಬಳ ಎಣಿಕೆ, ಐಷರಾಮಿ ಕಾರಿನಲ್ಲಿ ಸುತ್ತಾಟ, ಲಕ್ಸುರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸ,ವಾರಾಂತ್ಯದ (ವೀಕ್‌ ಎಂಡ್‌) ಮೋಜು ಮಸ್ತಿ.ಈ ರಮ್ಯಕಲ್ಪನೆಯೇ ಬಹುತೇಕ ಎಲ್ಲರ ಕಣ್ಮುಂದೆ ಇರುತ್ತದೆ. ಐ.ಟಿ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡ ಟೆಕಿಗಳ ಪಾಡು ಏನು?ಎನ್ನುವ ಇನ್ನೊಂದು ಸಣ್ಣ ಮುಖ ‘ವೀಕ್‌ ಎಂಡ್‌’ ಸಿನಿಮಾದಲ್ಲಿ ಪರಿಚಯವಾಗುತ್ತದೆ.

ಐ.ಟಿ ಕಂಪನಿಯಲ್ಲಿ ಕೆಲಸ ಕಳೆದುಕೊಂಡರೆ ಟೆಕಿಗಳ ಜೀವನ ಮುಗಿದು ಹೋಗುವುದಿಲ್ಲ. ಬದುಕಿಗಾಗಿಅಪರಾಧ ಕೃತ್ಯಗಳತ್ತ ಚಿತ್ತ ಹರಿಸದೆ ‘ಇಡ್ಲಿ, ದೋಸೆ’ ಮಾರಿಯಾದರೂ ಬದುಕಬಹುದೆಂಬ ಸಂದೇಶ ನೀಡುವಪ್ರಯತ್ನ ಮಾಡಿದ್ದಾರೆನಿರ್ದೇಶಕ ಶೃಂಗೇರಿ ಸುರೇಶ್‌.

ವಿರಾಮದವರೆಗೂ ಐ.ಟಿ ಕಂಪನಿ ಕಚೇರಿಯಲ್ಲಿ ಉದ್ಯೋಗಿಗಳಕೆಲಸ, ಸ್ನೇಹಿತರ ಹರಟೆ, ವೀಕೆಂಡ್‌ ಪಾರ್ಟಿಯ ಮೋಜಿನಲ್ಲೇಸಿನಿಮಾದ ಕಥೆ ಸಾಗುತ್ತದೆ. ತಾತ ಅನಂತರಾಮು (ಅನಂತನಾಗ್‌) ಬಳಿ ಮೊಮ್ಮಗ ಟೆಕಿ ಅಜಯ್‌ (ಮಿಲಿಂದ್‌) ಬೆಳೆಯುತ್ತಾನೆ. ದುರ್ಗುಣಗಳಿಂದ ಕೂಡಿದ ಅಪ್ಪನ ಜತೆ ತಾಯಿ ಇಲ್ಲದ ತಬ್ಬಲಿಯಾಗಿ ಬೆಳೆಯುತ್ತಾಳೆ ಅನುಪಮಾ (ಸಂಜನಾ ಬುರ್ಲಿ). ನಾಯಕ– ನಾಯಕಿಗೆ ಹೇಗೊ ಪರಸ್ಪರ ಪ್ರೀತಿ ಬೆಳೆದು,ಇಬ್ಬರೂ ಜಾಲಿಯಾಗಿ ಸುತ್ತಾಡುತ್ತಾರೆ. ಈ ಇಬ್ಬರನ್ನು ಬೇರ್ಪಡಿಸಲು ಬಹುತೇಕ ಸಿನಿಮಾಗಳಂತೆಯೇ ನಾಯಕಿಯ ಅಪ್ಪನೇ ವಿಲನ್‌ ಆಗುತ್ತಾನೆ. ಇಷ್ಟೇ ಕಥೆ ಸಿನಿಮಾದ ತಿರುಳಾಗಿದ್ದರೆ ‘ವೀಕ್‌ ಎಂಡ್‌’ ಕೂಡ ‌ಬೋರೆನಿಸುತ್ತಿತ್ತು. ಮಧ್ಯಂತರತೆರೆದುಕೊಳ್ಳುವ ಕಥೆಯಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಇದೆ. ಇದರಿಂದಾಗಿ ಈ ಸಿನಿಮಾ ಪ್ರೇಕ್ಷಕರನ್ನು ಕೊನೆಯವರೆಗೂ ಕುಳಿತು ವೀಕ್ಷಿಸುವಂತೆ ಮಾಡುತ್ತದೆ.

ADVERTISEMENT

ಕಥೆಯೊಳಗಿನ ಸಂದೇಶವನ್ನುಪ್ರೇಕ್ಷಕರಿಗೆ ತಲುಪಿಸುವ ಹೊಣೆಯನ್ನು ಚಿತ್ರದ ನಾಯಕನ ತಾತನ ಪಾತ್ರ ನಿಭಾಯಿಸಿರುವ ಹಿರಿಯ ನಟ ಅನಂತನಾಗ್‌ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮೊಮ್ಮಗನಿಗೆ ಸಂಸ್ಕಾರ ಕೊಡುವತಾತನಾಗಿ, ಮನಸಿಗೆ ತಟ್ಟುವ ಸಂಭಾಷಣೆ ಮತ್ತು ಸಹಜ ನಟನೆಯಿಂದಾಗಿ ಅನಂತನಾಗ್‌ ಇಷ್ಟವಾಗುತ್ತಾರೆ.ಈ ಸಿನಿಮಾಕ್ಕೆ ಬಂಡವಾಳ ಹೂಡಿರುವ ಮಂಜುನಾಥ್‌ ಡಿ. ಅವರು ಮೊದಲ ಬಾರಿಗೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಟಫ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ತಮ್ಮ ಪುತ್ರಮಿಲಿಂದ್‌ನನ್ನು ಈ ಚಿತ್ರದಲ್ಲಿ ನಾಯಕನನ್ನಾಗಿ ಪರಿಚಯಿಸಿದ್ದಾರೆ.ಹೊಸ ಮುಖಗಳಾದ ಮಿಲಿಂದ್‌ ಮತ್ತು ‌ನಾಯಕಿ ಸಂಜನಾ ಬುರ್ಲಿ, ನಾಯಕನ ಸ್ನೇಹಿತೆ ಪಾತ್ರದಲ್ಲಿ ನೀತು ಬಾಲಾ ಚೊಚ್ಚಿಲ ಸಿನಿಮಾದಲ್ಲೇ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.

ಸೌಂಡ್‌ ಮಿಕ್ಸಿಂಗ್‌ ಸರಿ ಇಲ್ಲದ ಕಾರಣಕ್ಕೇನೊ ಅಲ್ಲಲ್ಲಿ ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ. ಹಿನ್ನೆಲೆ ಸಂಗೀತವೂ ಅಲ್ಲಲ್ಲಿ ಕಿರಿಕಿರಿ ಎನಿಸುತ್ತದೆ. ಸಂಭಾಷಣೆಗಳುಮಾತ್ರ ಮನಸಿಗೆ ನಾಟುತ್ತವೆ.ಮನೋಜ್ ಸಂಗೀತ ನಿರ್ದೇಶನವಿರುವ ಹಾಡುಗಳು ಕೇಳಲು ಹಿತವಾಗಿವೆ.ಶಶಿಧರ್ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಲ್ಲಷ್ಟೇ ಕಣ್ಣಿಗೆ ಹಿತವೆನಿಸುತ್ತದೆ.ಒಟ್ಟಾರೆ ಕುಟುಂಬ ಸಮೇತ ಕುಳಿತು ನೋಡಲು ಯಾವುದೇ ಅಡ್ಡಿ ಇಲ್ಲ. ಒಂದು ತಣ್ಣನೆಯ ಹಿತವಾದ ಖುಷಿಯೂ ಸಿಗುತ್ತದೆ.

ಸಿನಿಮಾ:ವೀಕ್ಎಂಡ್

ನಿರ್ಮಾಣ:ಮಂಜುನಾಥ್ ಡಿ.

ನಿರ್ದೇಶನ:ಶೃಂಗೇರಿ ಸುರೇಶ್

ತಾರಾಗಣ:ಮಿಲಿಂದ್, ಸಂಜನಾ ಬುರ್ಲಿ, ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.