‘ನಟನಾಗಿ ನಾನು ತೆರೆಯ ಮೇಲೆ ಯಶಸ್ವಿಯಾಗಿರಬಹುದು. ಆದರೆ ನನ್ನ ಹಿಂದೆ ಪಾತ್ರವನ್ನು ಬರೆದ ಬರಹಗಾರ, ಪಾತ್ರವನ್ನು ಕಲ್ಪಿಸಿದ ನಿರ್ದೇಶಕನಿಂದ ಹಿಡಿದು ಅನೇಕರ ಕೆಲಸವಿರುತ್ತದೆ. ಹೀಗಾಗಿ ನಾವಿಲ್ಲಿ ನಿಮಿತ್ತ ಮಾತ್ರ. ನಾವೇನೇ ಮಾಡಿದರೂ, ಅದನ್ನು ಮಾಡಿಸುವವನೊಬ್ಬ ಇರುತ್ತಾನೆ. ಪಾತ್ರಕ್ಕಾಗಿ ಎಷ್ಟೇ ಸಿದ್ಧತೆ ಮಾಡಿಕೊಂಡರೂ, ಕೊನೆಗೆ ಸ್ಥಳದಲ್ಲಿ, ಆ ಘಳಿಗೆಯಲ್ಲಿ ಅನ್ನಿಸಿದ್ದನ್ನು ನಟಿಸಿ ಬಂದಿರುತ್ತೇವೆ’ ಎಂದು ತಮ್ಮ ಸಿನಿಪಯಣದ ಕುರಿತು ಭಾವುಕರಾದರು ನಟ ಅನಂತ ನಾಗ್.
ಅನಂತ ನಾಗ್ ಕನ್ನಡ ಚಿತ್ರೋದ್ಯಮದಲ್ಲಿ ಐದು ದಶಕ ಪೂರೈಸಿದ ಸಂಭ್ರಮಕ್ಕಾಗಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಹಮ್ಮಿಕೊಂಡಿದ್ದ ‘ಅನಂತಲೋಕ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಅವರು ಮನಬಿಚ್ಚಿ ಮಾತನಾಡಿದರು.
ನಟ ರಮೇಶ ಅರವಿಂದ್ ತಮ್ಮ ಜನಪ್ರಿಯ ‘ವೀಕೆಂಡ್ ವಿತ್ ರಮೇಶ್’ ಮಾದರಿಯಲ್ಲಿಯೇ ಈ ಕಾರ್ಯಕ್ರಮ ನಡೆಸಿಕೊಟ್ಟರು. ಅನಂತ ನಾಗ್ ವೈಯಕ್ತಿಕ ಬದುಕಿನ ಸುತ್ತ ಹೆಣೆಯಲಾಗಿದ್ದ ಈ ಸಂವಾದದಲ್ಲಿ ಅನಂತ ನಾಗ್ ಅತ್ಯಂತ ಸಿಟ್ಟಾಗಿದ್ದು, ಖುಷಿಯಾಗಿದ್ದ ಕ್ಷಣಗಳು ಸೇರಿದಂತೆ ಸಾರ್ವಜನಿಕ ಜಗತ್ತಿಗೆ ಗೊತ್ತಿಲ್ಲದ ತಮ್ಮ ಬದುಕಿನ ಒಂದಷ್ಟು ಘಟನೆಗಳನ್ನು ಹಂಚಿಕೊಂಡರು.
‘ತಾವು ಕೋಪಗೊಳ್ಳುವುದು ಅತ್ಯಂತ ಕಡಿಮೆ’ ಎಂದು ಅನಂತ ನಾಗ್ ಮುಗುಳ್ನಕ್ಕರು. ಅವರ ಪಕ್ಕದಲ್ಲಿಯೇ ಕುಳಿತಿದ್ದ ಪತ್ನಿ ಗಾಯಿತ್ರಿ, ಅನಂತ ನಾಗ್ ಬದುಕಿನ ಸಿಟ್ಟಿನ ಘಟನೆಗಳು, ಅಡುಗೆ ಸರಿಯಿಲ್ಲದ್ದಕ್ಕೆ ರೇಗಾಡಿದ್ದನ್ನು ಮೆಲುಕು ಹಾಕಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.
ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಕುಟುಂಬವರ್ಗ ಅನಂತ ನಾಗ್ ದಂಪತಿಯನ್ನು ಸನ್ಮಾನಿಸಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.