ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ 9 ಜನರ ಪೈಕಿ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇಬ್ಬರು ಇತರರ ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಆಘಾತಕಾರಿ ಮತ್ತು ಕ್ರಿಮಿನಲ್ ಅಪರಾಧಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿದೆ ಎಂದು ಮಾದಕ ವಸ್ತು ನಿಗ್ರಹ ದಳ(ಎನ್‌ಸಿಬಿ) ಸೋಮವಾರ ಮುಂಬೈ ನ್ಯಾಯಾಲಯಕ್ಕೆ ತಿಳಿಸಿದೆ. ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಂಪರ್ಕ ಇದ್ದಂತೆ ತೋರಿಸುತ್ತಿದೆ ಎಂದು ಎನ್‌ಸಿಬಿ ಹೇಳಿದೆ.
ಆರ್ಯನ್ ಖಾನ್ ಮತ್ತು ಇತರ ಎಂಟು ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಕ್ಟೊಬರ್ 7ರವರೆಗೆ ವಶಕ್ಕೆ ಪಡೆದಿರುವ ಎನ್‌ಸಿಬಿ, ವಾಟ್ಸ್‌ಆ್ಯಪ್ ಚಾಟ್‌ಗಳಲ್ಲಿ ಮಾದಕವಸ್ತು ಖರೀದಿಗಾಗಿ ಪಾವತಿ ವಿಧಾನಗಳು, ಡ್ರಗ್ಸ್‌ಗೆ ಹಲವಾರು ಕೋಡ್ ಹೆಸರುಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದೆ. ಆದರೆ, ಆರ್ಯನ್ ಖಾನ್ ಅವರ ವಕೀಲರು ತಮ್ಮ ಕಕ್ಷಿದಾರನ ಬಳಿಯಿಂದ ಯಾವುದೇ ಮಾದಕ ದ್ರವ್ಯ ವಶಪಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ವಾದವನ್ನು ಆಲಿಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಎಂ ನೆರ್ಲಿಕರ್, ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಹೇಳಿದ್ದು, ಉಳಿದ 6 ಆರೋಪಿಗಳು ಸೇರಿ ಎಲ್ಲರನ್ನೂ ಅಕ್ಟೋಬರ್ 7 ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದರು.
‘ಪ್ರಕರಣದ ಸಹ-ಆರೋಪಿಗಳು ಡ್ರಗ್ಸ್ ಹೊಂದಿದ್ದರು ಮತ್ತು ಈ ಮೂವರು ಪ್ರಮುಖ ಆರೋಪಿಗಳು (ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ) ಅವರ ಜೊತೆಗಿದ್ದರು. ಹಾಗಾಗಿ, ವಿಚಾರಣೆ ಅತ್ಯಂತ ಮಹತ್ವದ್ದಾಗಿದೆ’ಎಂದು ನ್ಯಾಯಾಲಯ ಹೇಳಿದೆ.
ಮಾದಕ ದ್ರವ್ಯ ಬಳಕೆದಾರರು ಮತ್ತು ಪೂರೈಕೆದಾರರ ನಡುವಿನ ಸಂಬಂಧವನ್ನು ಪತ್ತೆ ಹಚ್ಚಬೇಕು ಹಾಗೂ ಬಂಧಿತ ಎಲ್ಲ ಆರೋಪಿಗಳನ್ನು ಪರಸ್ಪರ ಎದುರಿನಲ್ಲಿ ವಿಚಾರಣೆ ನಡೆಸಬೇಕು. ಮಾದಕ ವಸ್ತುಗಳ ಪೂರೈಕೆದಾರರನ್ನು ಬಂಧಿಸಬೇಕು. ಹಾಗಾಗಿ, ಆರ್ಯನ್ ಖಾನ್, ಮರ್ಚೆಂಟ್ ಮತ್ತು ಧಮೇಚಾ ಅವರನ್ನು ಅಕ್ಟೋಬರ್ 11 ರವರೆಗೆ ವಶಕ್ಕೆ ನೀಡಲು ಕೋರಿತ್ತು.
ಎನ್‌ಸಿಬಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಆರ್ಯನ್ ಖಾನ್ ಸೇರಿದಂತೆ ಬಂಧಿತ ಆರೋಪಿಗಳ ವಾಟ್ಸ್‌ಆ್ಯಪ್ ಚಾಟ್‌ಗಳ ಮೂಲಕ ಮಾದಕವಸ್ತು ಮಾರಾಟಗಾರರು ಮತ್ತು ಪೂರೈಕೆದಾರರ ಜೊತೆಗೆ ಸಂಪರ್ಕಕ್ಕೆ ಸಂಬಂಧಿಸಿದ ಕ್ರಿಮಿನಲ್ ಅಪರಾಧದ ಮಾಹಿತಿಯನ್ನು ಎನ್‌ಸಿಬಿ ಪತ್ತೆ ಮಾಡಿದೆ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡರು.
‘ಈಗ ದಾಳಿಗಳು ನಡೆಯುತ್ತಿವೆ. ಆರೋಪಿಯ ವಾಟ್ಸ್‌ಆ್ಯಪ್ ಚಾಟ್‌ಗಳಲ್ಲಿ ಪತ್ತೆಯಾದ ಆಘಾತಕಾರಿ ಮತ್ತು ಕ್ರಿಮಿನಲ್ ಅಪರಾಧಕ್ಕೆ ಸಂಬಂಧಿಸಿದ ಮಾಹಿತಿಗಳು ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯನ್ನು ತೋರಿಸುತ್ತವೆ’ ಎಂದು ಎನ್‌ಸಿಬಿ ಪರ ವಕೀಲರು ವಾದಿಸಿದರು.
‘ಆರೋಪಿ ಆರ್ಯನ್ ಖಾನ್, ವಾಟ್ಸ್‌ಆ್ಯಪ್ ಚಾಟ್‌ಗಳಲ್ಲಿ ಡ್ರಗ್ಸ್ ಖರೀದಿಗಾಗಿ ಪಾವತಿ ವಿಧಾನಗಳನ್ನು ಚರ್ಚಿಸಿದ್ದಾರೆ. ಹಲವಾರು ಕೋಡ್ ಹೆಸರುಗಳನ್ನು ಬಳಸಲಾಗುತ್ತಿದೆ. ಎಲ್ಲ ಆರೋಪಿಗಳನ್ನು ಪರಸ್ಪರ ಎದುಬದುರಿಗೆ ವಿಚಾರಣೆ ನಡೆಸಬೇಕಿದೆ. ಅಂತರರಾಷ್ಟ್ರೀಯ ವಹಿವಾಟುಗಳನ್ನು ತನಿಖೆ ಮಾಡಬೇಕಾಗಿದೆ’ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಎನ್‌ಸಿಬಿ ಜುಹುವಿನಿಂದ ಒಬ್ಬ ಡ್ರಗ್ಸ್ ಪೂರೈಕೆದಾರನನ್ನು ಬಂಧಿಸಿದೆ ಮತ್ತು ಆತನಿಂದ ಅಧಿಕ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಂಗ್ ಹೇಳಿದರು.
ಎನ್‌ಸಿಬಿ ಕಸ್ಟಡಿ ವಿರೋಧಿಸಿದ ಆರ್ಯನ್ ಪರ ವಕೀ;ಲ ಸತೀಶ್ ಶಿಂಧೆ, ಎನ್‌ಸಿಬಿ ದಾಳಿ ವೇಳೆ ಆರ್ಯನ್ ಓಡಿಹೋಗಲು ಯತ್ನಿಸಿಲ್ಲ. ಅವರಿಗೆ ಯಾವುದೇ ಕ್ರಿಮಿನಲ್ ಪ್ರವೃತ್ತಿಯಿಲ್ಲ. ಜೊತೆಗೆ ಸರ್ಚ್‌ಗೆ ಅವಕಾಶ ಮಾಡಿಕೊಡುವ ಮೂಲಕ ಉತ್ತಮ ನಡವಳಿಕೆ ತೋರಿದ್ದಾರೆ ಎಂದು ವಾದಿಸಿದರು.
ಬಂಧಿತ ಆರೋಪಿಗಳಿಂದ ಎಷ್ಟು ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಧೀಶರು ಕೇಳಿದ್ದು, ಮರ್ಚೆಂಟ್ ಅವರಿಂದ ಆರು ಗ್ರಾಂ ಚರಸ್, ಧಮೇಚಾ ಅವರಿಂದ ಐದು ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಕಾಯ್ದೆ ಅಡಿಯಲ್ಲಿ ಇವೆಲ್ಲವನ್ನೂ ‘ಸಣ್ಣ ಪ್ರಮಾಣ‘ ಎಂದು ಪರಿಗಣಿಸಲಾಗಿದೆ.
ಆದರೆ, ಪಾರ್ಟಿ ನಡೆಯುತ್ತಿದ್ದ ಹಡಗಿನಿಂದ 13 ಗ್ರಾಂ ಕೊಕೇನ್, ಐದು ಗ್ರಾಂ ಎಂಡಿಎಂಎ, 21 ಗ್ರಾಂ ಚರಸ್ ಮತ್ತು 22 ಎಕ್ಸ್‌ಟೆಸಿ ಮಾತ್ರೆಗಳನ್ನು ವಶಪಡಿಸಿಕೊಂಡಿರುವುದಾಗಿ ಎನ್‌ಸಿಬಿ ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.