ಬೆಂಗಳೂರು: ‘ಆರ್‌ಆರ್‌ಆರ್’ ಸಿನಿಮಾವನ್ನು ಬಾಯ್ಕಾಟ್ ಮಾಡಲು ಹೇಳಿದ್ದ, ಚಿತ್ರಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿಯ ಧರ್ಮಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ ಎಂದು ಸಿನಿಮಾ ನಟ ಪ್ರಕಾಶ್ ರಾಜ್ ಅವರು ಪ್ರಶ್ನೆ ಮಾಡಿದ್ದಾರೆ.
ರಾಜಮೌಳಿ ನಿರ್ದೇಶನದ, ರಾಮ್‌ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ತೆಲುಗು ಸಿನಿಮಾ ‘ಆರ್‌ಆರ್‌ಆರ್’ನ ‘ನಾಟು ನಾಟು‘ ಹಾಡಿಗೆ ಆಸ್ಕರ್‌ನ ಅತ್ಯುತ್ತಮ ಗೀತೆ ಪ್ರಶಸ್ತಿ ಸಿಕ್ಕಿದೆ. ದೇಶ ವಿದೇಶದ ಗಣ್ಯರು, ಕಲಾಭಿಮಾನಿಗಳಿಂದ ಚಿತ್ರ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಸೇರಿದಂತೆ ಬಿಜೆಪಿ ನಾಯಕರ ಶುಭಾಶಯಗಳೂ ಇವೆ.
ಆದರೆ, ಬಿಜೆಪಿ ನಾಯಕರು ಆರ್‌ಆರ್‌ಆರ್ ಸಿನಿಮಾ ವಿರುದ್ಧ ಹಿಂದೊಮ್ಮೆ ತಳೆದಿದ್ದ ಧೋರಣೆಯನ್ನು ಟ್ವಿಟರ್‌ನಲ್ಲಿ ಪ್ರಸ್ತಾಪಿರುವ ಪ್ರಕಾಶ್ ರಾಜ್, ಟೀಕಾ ಪ್ರಹಾರ ನಡೆಸಿದ್ದಾರೆ.
’ಸುಪ್ರೀಂ(ಮಿ) (ಮೋದಿ) ಬಿಜೆಪಿಯ ಧರ್ಮಾಂಧರು ‘ಆರ್‌ಆರ್‌ಆರ್’ ಅನ್ನು ಬಹಿಷ್ಕರಿಸಲು ಮತ್ತು ಚಿತ್ರಮಂದಿರಗಳನ್ನು ಸುಡಲು ಬಯಸಿದ್ದರು. ಈಗ ಅವರು ಎಲ್ಲಿ ಅಡಗಿದ್ದಾರೆ. ವಿಸ್ವಗುರುವಿನ ಶಿಷ್ಯರು ‘ಆರ್‌ಆರ್‌ಆರ್’ ಸಿನೆಮಾನ ಬ್ಯಾನ್ ಮಾಡಿ... ಚಿತ್ರಮಂದಿರಗಳನ್ನ ಕೆಡುವುತೀವಿ ಅಂದಿದ್ರು... ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ?’ ಎಂದು ಅವರು ಬಿಜೆಪಿ ನಾಯಕರನ್ನು ವ್ಯಂಗ್ಯ ಮಾಡಿದ್ದಾರೆ.
ಆರ್‌ಆರ್‌ಆರ್ ಸಿನಿಮಾ ಬಿಡುಗಡೆಗೊಂಡಾಗ ಬಿಜೆಪಿ ನಾಯಕರ ವಿರೋಧ ಎದುರಿಸಿತ್ತು. ಚಿತ್ರದಲ್ಲಿ ಕೋಮರಮ್ ಭೀಮನನ್ನು ಬಿಂಬಿಸಿದ ರೀತಿಯ ಬಗ್ಗೆ ತೆಲಂಗಾಣದ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಮುಸ್ಲಿಮರು ಧರಿಸುವ ಟೋಪಿಯನ್ನು ಭೀಮನ ಪಾತ್ರಧಾರಿ ಜೂನಿಯರ್ ಎನ್‌ಟಿಆರ್‌ಗೆ ತೊಡಿಸಿದ್ದಕ್ಕೆ ಬಿಜೆಪಿ ವಿರೋಧಿಸಿತ್ತು. ಚಿತ್ರಕ್ಕೆ ಅಡ್ಡಿಪಡಿಸುವುದಾಗಿ ತೆಲಂಗಾಣ ಬಿಜೆಪಿ ನಾಯಕರು ಬೆದರಿಕೆ ಹಾಕಿದ್ದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.