ಹಚ್ಚಹಸಿರು ಹೊದ್ದ ಬೆಟ್ಟಗುಡ್ಡಗಳು. ತಂಪಿನ ವಾತಾವರಣ. ಅಲ್ಲೊಂದು ಸುಂದರ ಮನೆ. ಮನೆಯ ಮೆಟ್ಟಿಲು ಇಳಿದು ಹೊರಬರುವ ಯುವತಿ ತನ್ನ ಮುದ್ದಿನ ಸಾಕುನಾಯಿ ‘ರಾಕಿ’ಯನ್ನು ಕೂಗಿ ಕರೆಯುತ್ತಾಳೆ. ಅದು ಓಡೋಡಿ ಬಂದಾಗ ಬಿಗಿದಪ್ಪಿಕೊಂಡು ಮುದ್ದಾಡುತ್ತಾಳೆ.
ಬಳಿಕ ಇಬ್ಬರದು ಒಂಟಿ ದಾರಿಯ ಪಯಣ. ಆಕೆ ರಸ್ತೆಬದಿಯ ಕುರ್ಚಿ ಮೇಲೆ ಕೂರುತ್ತಾಳೆ. ರಾಕಿ ವಾಸನೆ ಆಘ್ರಾಣಿಸಿ ಏನನ್ನೋ ಹುಡುಕಿಕೊಂಡು ದಾರಿಯಲ್ಲಿ ಮುಂದೆ ಸಾಗುತ್ತದೆ. ಆಕೆಯ ಮನದಲ್ಲಿ ದಿಗಿಲು. ರಾಕಿಯನ್ನೂ ಕೂಗುತ್ತಾಳೆ. ಕಾಡಿನ ಏಕಾಂತತೆ ಸೀಳಿಕೊಂಡು ಮುನ್ನುಗ್ಗುವ ಆ ಧ್ವನಿಗೆ ಉತ್ತರವಿರಲಿಲ್ಲ.
ಮೆಲ್ಲನೆ ಮೇಲೆದ್ದು ನಾಯಿ ಹುಡುಕಲು ಹೊರಟಾಗಲೇ ಆಕೆ ಅಂಧೆ ಎನ್ನುವುದು ಗೊತ್ತಾಗುತ್ತದೆ. ಆಕೆಗೆ ಮುಂದಿನ ದಾರಿ ತೋರಿಸುವುದು ಬ್ರೈಲ್‌ಸ್ಟಿಕ್. ದಾರಿಯಲ್ಲಿ ಹೋಗುವಾಗ ಎಡವಿ ಬೀಳುತ್ತಾಳೆ. ಬ್ರೈಲ್‌ಸ್ಟಿಕ್ ಆಕೆಯ ಕೈಯಿಂದ ಜಾರುತ್ತದೆ. ಅಳುವಿನ ಕಡಲಲ್ಲಿ ಮುಳುಗಿದ ಅವಳಿಗೆ ಮತ್ತೆ ನೆರವಾಗುವುದು ರಾಕಿ. ಅದು ಆಕೆಗೆ ಬ್ರೈಲ್‌ಸ್ಟಿಕ್ ತಂದುಕೊಟ್ಟಾಗ ಅವಳ ಸಂತೋಷ ಹೇಳತೀರದು.
ಆಕೆಯ ಮೊಗದಲ್ಲಿ ನಗು ಮೂಡಿದಾಗ ‘ಪ್ರತಿಯೊಬ್ಬರು ನೇತ್ರದಾನ ಮಾಡಿ ಅಂಧರಿಗೆ ನೆರವಾಗಿ’ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಧ್ವನಿ ಅನುರಣಿಸುತ್ತದೆ.
ಐದು ನಿಮಿಷದ ‘ವೈಟ್’ ಹೆಸರಿನ ಈ ಕಿರುಚಿತ್ರ ಪ್ರದರ್ಶನ ಕಂಡಾಗ ನೆರೆದಿದ್ದವರಿಂದ ಕರತಾಡನ ಮೊಳಗಿತು.
ಮನು ನಾಗ್‌ಗೆ ಇದು ಮೊದಲ ಕಿರುಚಿತ್ರ ನಿರ್ದೇಶನದ ಅನುಭವ. ಹಲವು ಚಿತ್ರಗಳಲ್ಲಿ ಸಹಾಯಕರಾಗಿ ದುಡಿದಿರುವ ಅವರಿಗೆ ಈ ಕಾನ್ಸೆಫ್ಟ್ ಹೊಳೆದಿದ್ದು ‘ದನ ಕಾಯೋನು’ ಚಿತ್ರದ ಶೂಟಿಂಗ್ ವೇಳೆಯಂತೆ. ಆಗಲೇ ಅವರು ಪ್ರಿಯಾಮಣಿ ಬಳಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರಂತೆ. ಈಗ ಅದು ‘ವೈಟ್’ ಆಗಿ ದೃಶ್ಯರೂಪ ತಳೆದಿದೆ.
‘ಪ್ರಿಯಾಮಣಿ ಮೇಡಂ ಹಣ ಪಡೆಯದೆ ನಟಿಸಿದ್ದಾರೆ. ಲವ್‌ಮೆಹ್ತಾ ಅವರು ಅಮಿತಾಭ್ ಬಚ್ಚನ್ ಸರ್ ಅವರನ್ನು ಸಂಪರ್ಕಿಸಲು ನೆರವಾದರು. ಬಚ್ಚನ್ ಅವರ ಮನೆಗೆ ಹೋಗಿ ಕಿರುಚಿತ್ರ ತೋರಿಸಿದೆ. ಅದನ್ನು ನೋಡಿದ ತಕ್ಷಣವೇ ಸ್ಕ್ರಿಪ್ಟ್ ಕಳುಹಿಸಿಕೊಡುವಂತೆ ಸೂಚಿಸಿದರು. ನಾನು ಕಳುಹಿಸಿ ಕೊಟ್ಟೆ. ಅವರೇ ಸ್ಟುಡಿಯೊಗೆ ತೆರಳಿ ಕಂಠದಾನ ಮಾಡಿ ಕಳುಹಿಸಿಕೊಟ್ಟಿದ್ದಾರೆ’ ಎಂದು ಸಂತಸ ಹಂಚಿಕೊಂಡರು ಮನು ನಾಗ್.
ಇದರ ನಿರ್ಮಾಣದ ಹಿಂದೆಐ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯ ನೆರವು ದೊಡ್ಡದಿದೆಯಂತೆ. ಎಸ್. ರಾಜಶೇಖರ್ ಬಂಡವಾಳ ಹೂಡಿದ್ದಾರೆ.ಅಂದಹಾಗೆ ಅಂಧೆಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿರುವವರು ನಟಿ ಪ್ರಿಯಾಮಣಿ.ಈ ಕಿರುಚಿತ್ರಕ್ಕೆ ಚಾಲನೆ ನೀಡಿದ್ದು ನಟಿ ರಾಧಿಕಾ ಪಂಡಿತ್. ರಾಕಿಯೂ ವೇದಿಕೆ ಏರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.