ಎಂ.ವಿ.ಸುಬ್ಬಯ್ಯನಾಯ್ಡು ಅವರದ್ದು ಕಲಾವಿದರ ಕುಟುಂಬ. ಅವರ ಸೊಸೆ, ನಟಿ ಗಿರಿಜಾ ಲೋಕೇಶ್ ಅವರು ‘ವಿಶ್ವ ಕುಟುಂಬ ದಿನ’ದ ನೆಪದಲ್ಲಿ ‘ಪ್ರಜಾಪ್ಲಸ್’ನೊಂದಿಗೆ ತಮ್ಮ ಕಲಾಕುಟುಂಬದ ಪಯಣದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಲೋಕೇಶ್ ಬಾಲ್ಯದಿಂದಲೂ ನಟನೆಯನ್ನು ಮಾಡಿಕೊಂಡು ಬಂದವರು. ನೃತ್ಯಕಲಾವಿದೆಯಾಗಿದ್ದ ನಾನು ಲೋಕೇಶ್ ಅವರನ್ನು ಮದುವೆಯಾದ ಮೇಲೆ ಪೂರ್ಣ ಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಕೊಂಡೆ. ಈಗ ನನ್ನ ಮಗ, ಮಗಳು, ಸೊಸೆ ಎಲ್ಲರೂ ಕಲಾವಿದರೇ ಆಗಿದ್ದಾರೆ. ಹಾಗಾಗಿ ನಮ್ಮದು ಪರಿಪೂರ್ಣ ಕಲಾವಿದರ ಕುಟುಂಬ!
ಆದರೆ, ನನಗೆ ತಿಳಿದಂತೆ ಲೋಕೇಶ್ ತಂದೆ ಎಂ.ವಿ. ಸುಬ್ಬಯ್ಯನಾಯ್ಡು ಅವರಿಗೆ ಕಲಾ ಕುಟುಂಬದ ಹಿನ್ನೆಲೆ ಇರಲಿಲ್ಲ. ಅವರದ್ದು ಜಮೀನ್ದಾರ್ ಕುಟುಂಬ. ಬಾಲ್ಯದಲ್ಲೇ ತಂದೆ ಕಳೆದುಕೊಂಡು, ಮನೆಯಿಂದ ಹೊರಗಡೆ ಬೆಳೆದವರು. ಹೊಟ್ಟೆಪಾಡಿಗಾಗಿ ದನ ಕಾಯ್ದರು; ಕೂಲಿ ಮಾಡಿದರು. ಆ ವೇಳೆ ತಮ್ಮ ಸುತ್ತಲು ನಡೆಯುತ್ತಿದ್ದ ಸಂಗೀತ, ನಾಟಕಗಳು, ಅವರೊಳಗಿದ್ದ ಕಲಾವಿದನೆಂಬ‘ಬೀಜ‘ವನ್ನು ಚಿಗುರಿಸಿದವು. ಮುಂದೆ ನಾಟಕ ಕಂಪನಿ ಕಟ್ಟಿ ಕಲಾಸೇವೆಗೆ ಬದುಕು ಮೀಸಲಿಟ್ಟರು. ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನಾ‘ದಲ್ಲಿ ನಾಯಕನಟನಾಗಿ ಅಭಿನಯಿಸಿದರು.
ಲೋಕೇಶ್‌ಗೆ ಬಾಲ್ಯದಲ್ಲಿ ರಂಗಭೂಮಿ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲವಂತೆ. ಬಾಲ್ಯದ ಒಂದು ಘಟನೆ ಹೇಳಿದ್ದು, ನೆನಪಾಗ್ತಿದೆ. ನಾಯ್ಡು ಅವರ ‘ಭಕ್ತಪ್ರಹ್ಲಾದ‘ ಸಿನಿಮಾಕ್ಕೆ ಪಾತ್ರಗಳ ಆಯ್ಕೆ ನಡೆಯುತ್ತಿತ್ತು. ಆಗ ಲೋಕೇಶ್ ಪುಟ್ಟ ಹುಡುಗ. ಅವರ ಅಕ್ಕ ಈ ಹುಡುಗನಿಗೆ ಫ್ರಾಕ್ ಹಾಕಿ ಕರೆದು ಕೊಂಡು ಬಂದು ಸುಬ್ಬಯ್ಯನಾಯ್ಡು ಎದುರು ನಿಲ್ಲಿಸಿದರಂತೆ. ‘ನೋಡಿ, ಈ ಮಗು ಪ್ರಹ್ಲಾದ ಪಾತ್ರಕ್ಕೆ ಆಗುತ್ತಾ‘ ಅಂತ ಕೇಳಿದರಂತೆ. ಮಗು ನೋಡಿ, ‘ಯಾರದ್ದು ಈ ಮಗು, ಇಷ್ಟು ಮುದ್ದಾಗಿದೆ?’ ಎಂದು ಕೇಳಿದರಂತೆ. ‘ನಿಮ್ಮ ಮಗನೇ ಇವನು‘ ಎಂದಾಗ ಅಚ್ಚರಿ ಅವರಿಗೆ. ಲೋಕೇಶ್ ಆ ಸಿನಿಮಾಕ್ಕೆ ಆಯ್ಕೆ ಆಗಿದ್ದು ಹೀಗೆ. ಇದಾದ ನಂತರ ಅವರು ಮತ್ತೆ ರಂಗಭೂಮಿ, ಸಿನಿಮಾ ಕಡೆಗೆ ಬರಲಿಲ್ಲ. ಸುಬ್ಬಯ್ಯನಾಯ್ಡು ಅವರು ತೀರಿಕೊಂಡ ನಂತರ, ಲೋಕೇಶ್ ಅಕ್ಕ ಬಂಗಾರಮ್ಮ ‘ಸುಬ್ಬಯ್ಯನಾಯ್ಡು ಶಿಷ್ಯ ಮಂಡಳಿ‘ ಎಂಬ ಸಂಸ್ಥೆನಡೆಸುತ್ತಿದ್ದರು. ಆ ಮಂಡಳಿಯ ನಾಟಕಗಳಲ್ಲಿ ಲೋಕೇಶ್ ಪಾತ್ರ ಮಾಡುತ್ತಿದ್ದರು. ನಂತರ ಕಪ್ಪಣ್ಣ, ಸಿ.ಆರ್. ಸಿಂಹ ಜತೆ ಸೇರಿ ‘ನಟರಂಗ’ ಸಂಸ್ಥೆ ಆರಂಭಿಸಿದರು. ಆಮೇಲೆ ಸಿನಿಮಾ ಪಯಣ.
ನನಗೂ ರಂಗಭೂಮಿ ಹಿನ್ನೆಲೆ ಇಲ್ಲ. ನಮ್ಮದು ದೊಡ್ಡಕುಟುಂಬ. ಆದರೆ, ಎಲ್ಲ ಮಕ್ಕಳಿಗೂ ಸಂಗೀತ, ನೃತ್ಯ ಕಲಿಸಿದ್ದರು. ನಾನು ನೃತ್ಯ ಮಾಡುತ್ತಿದ್ದೆ. ಅಪ್ಪನಿಗೆ ಬ್ಯುಸಿನೆಸ್‌ನಲ್ಲಿ ನಷ್ಟವಾಯ್ತು. ನಾನು ಜೀವನನಿರ್ವಹಣೆಗಾಗಿ ನಾಟಕಗಳಲ್ಲಿ ಬರುವ ದೃಶ್ಯಗಳಲ್ಲಿ ನೃತ್ಯ ಮಾಡುತ್ತಾ ಅಭಿನಯಿಸುತ್ತಿದ್ದೆ. ಹೀಗೆ ಒಂದು ನಾಟಕದಲ್ಲಿ ಅಭಿನಯಿಸುವಾಗ ಲೋಕೇಶ್ ಭೇಟಿಯಾದರು. ಪರಿಚಯವಾಯಿತು; ಮದುವೆಯಾದೆವು.
ಮಕ್ಕಳುರಂಗಭೂಮಿ, ಸಿನಿಮಾ ಕ್ಷೇತ್ರಕ್ಕೆ ಬರುವುದು ಬೇಡ ಎಂದು ತೀರ್ಮಾನಿಸಿದ್ದೆ. ಹಾಗೆಯೇ ಸೃಜನ್ ಕೂಡ ತುಂಬಾ ಚೆನ್ನಾಗಿ ಓದುತ್ತಿದ್ದ. ಮಗಳು ಪೂಜಾಗೆ ಮಾತ್ರ, ಬಾಲ್ಯದಿಂದಲೇ ನೃತ್ಯ ಕಲಿಯುವ ಆಸೆ, ತುಂಬಾ ಟ್ಯಾಲೆಂಟೆಡ್. ಹಾಗಾಗಿ ಅವಳಿಗೆ ಭರತನಾಟ್ಯ ಕಲಿಸಿದೆ. ನಾವು ಬೇಡ ಅಂದರೂ ಕಲೆ ಬಿಡಬೇಕಲ್ಲ. ಇಬ್ಬರು ಮಕ್ಕಳೂ ರಂಗಭೂಮಿ, ಸಿನಿಮಾ ಕ್ಷೇತ್ರಕ್ಕೆ ಬಂದರು.
ಸೃಜನ್, ಭುಜಂಗಯ್ಯನ ದಶಾವತಾರ, ದೇವರಾಜ್ ನಟನೆಯ ‘ವೀರಪ್ಪನ್‘ ಚಿತ್ರದಲ್ಲಿ ಬಾಲನಟನ ಪಾತ್ರದಲ್ಲಿ ಅಭಿನಯಿಸಿದ್ದಾನೆ. ಮುಂದೆ ಸಿನಿಮಾಗಳಲ್ಲಿ ನಟನೆ, ರಿಯಾಲಿಟಿ ಶೋ.. ಹೀಗೆ ಅವನದ್ದೇ ಹಾದಿಯಲ್ಲಿ ಸಾಗುತ್ತಿದ್ದಾನೆ. ನಮ್ಮ ಕಲಾ ಕುಟುಂಬಕ್ಕೆ ಕಲಾವಿದೆಯಾಗಿದ್ದ ಗ್ರೀಷ್ಮಾ ಸೊಸೆಯೇ ಸೇರಿಕೊಂಡಿದ್ದು ಮತ್ತಷ್ಟು ಖುಷಿ. ನಮ್ಮನೆಯಲ್ಲಿ ಬೆಳೆಯುತ್ತಿರುವ ಮುಂದಿನ ಪೀಳಿಗೆಯ ಕೂಸಿನಲ್ಲೂ ಆ ಕಲೆಯ ಚಿಗುರು ಕಾಣುತ್ತಿದ್ದೇನೆ. ಅದು ಮತ್ತಷ್ಟು ಸಂತಸದ ವಿಷಯ.
ಈಗ ಇಲ್ಲಿ ನಿಂತು, ನಮ್ಮ ಕಲಾ ಕುಟುಂಬ ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿದರೆ ತುಂಬಾ ಹೆಮ್ಮೆ ಎನ್ನಿಸುತ್ತದೆ. ನಾವು ನಂಬಿದ ಕಲೆ, ಇಡೀ ಕುಟುಂಬವನ್ನೇ ಪೋಷಿಸುತ್ತಿದೆ.ಇನ್ನೊಬ್ಬರಿಗೆ ನೆರವಾಗುಷ್ಟು ಶಕ್ತಿಯನ್ನು ನೀಡಿದೆ.ಇದೇ ವೇಳೆ ಅವಕಾಶ ಸಿಗದೇ ಸಂಕಷ್ಟದಲ್ಲಿರುವ ಕಲಾವಿದರ ಕುಟುಂಬಗಳನ್ನು ಕಂಡಾಗ ಸಂಕಟವಾಗುತ್ತದೆ. ಅಂಥ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಸಣ್ಣದೊಂದು ನೆರವು ನೀಡುತ್ತಿದ್ದೇವೆ. ಈಗ ಸಂಕಷ್ಟದಲ್ಲಿರುವ ಕಲಾವಿದರ ಕುಟುಂಬಗಳಿಗೆ ಎಲ್ಲರೂ ನೆರವಾಗಬೇಕಿದೆ.
ನಿರೂಪಣೆ: ಗಾಣಧಾಳು ಶ್ರೀಕಂಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.