ADVERTISEMENT

ಯಜ್ಞಾ ಶೆಟ್ಟಿಗೆ ಪ್ರಯೋಗಾತ್ಮಕ ಪಾತ್ರಗಳೇ ಇಷ್ಟವಂತೆ

ರೇಷ್ಮಾ
Published 5 ನವೆಂಬರ್ 2020, 17:15 IST
Last Updated 5 ನವೆಂಬರ್ 2020, 17:15 IST
ಯಜ್ಞಾ ಶೆಟ್ಟಿ
ಯಜ್ಞಾ ಶೆಟ್ಟಿ   

ಪ್ರಯೋಗಾತ್ಮಕ ಚಿತ್ರಗಳಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ನಟಿ ಯಜ್ಞಾ ಶೆಟ್ಟಿ ತಮ್ಮ ವಿಭಿನ್ನ ನಟನಾ ಶೈಲಿಯ ಮೂಲಕ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ಕನ್ನಡವಲ್ಲದೇ ತೆಲುಗು ಚಿತ್ರರಂಗದಲ್ಲೂ ಮಿಂಚಿರುವ ಇವರು ಸದ್ಯ ‘ಆ್ಯಕ್ಟ್ 1978:’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ.

‘ಒಂದು ಪ್ರೀತಿಯ ಕಥೆ’ ಸಿನಿಮಾದ ಮೂಲಕ ನಟನೆ ಆರಂಭಿಸಿದ ಕುಡ್ಲದ ಬೆಡಗಿ ಯಜ್ಞಾ ಶೆಟ್ಟಿ ಪ್ರಯೋಗಾತ್ಮಕ ಹಾಗೂ ನಟನೆಗೆ ಹೆಚ್ಚು ಪ್ರಾಮುಖ್ಯವಿರುವ ಸಿನಿಮಾಗಳಿಂದಲೇ ಗುರುತಿಸಿಕೊಂಡವರು ವರ್ಷಕ್ಕೆ ಒಂದೋ, ಎರಡೋ ಸಿನಿಮಾ ಮಾಡುವ ಇವರು ಪಾತ್ರಗಳ ಆಯ್ಕೆಯಲ್ಲಿ ತುಂಬಾನೇ ಚ್ಯೂಸಿ. ‘ಎದ್ದೇಳು ಮಂಜುನಾಥ’, ‘ಸುಗ್ರೀವ’, ‘ಕಳ್ಳ ಮಳ್ಳ ಸುಳ್ಳ’, ‘ಉಳಿದವರು ಕಂಡಂತೆ’, ‘ಕಿಲ್ಲಿಂಗ್ ವೀರಪ್ಪನ್‌’, ‘ಕಥಾ ಸಂಗಮ’ದಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಇವರು ‘ಲಕ್ಷ್ಮೀಸ್‌ ಎನ್‌ಟಿಆರ್‌’ ಸಿನಿಮಾದ ಮೂಲಕ ತೆಲುಗು ಸಿನಿರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಸದ್ಯ ‘ಆ್ಯಕ್ಟ್‌ 1978’ ಸಿನಿಮಾದಲ್ಲೂ ತಮ್ಮ ನಟನೆಯ ಛಾಪು ತೋರಿದ್ದಾರೆ. ಟ್ರೈಲರ್‌ ಮೂಲಕವೇ ಸದ್ದು ಮಾಡು ತ್ತಿರುವ ಈ ಸಿನಿಮಾದಲ್ಲಿ ಯಜ್ಞಾ ಶೆಟ್ಟಿ ಅವರದ್ದು ಗರ್ಭಿಣಿಯ ಪಾತ್ರ. ತಮ್ಮ ಸಿನಿಪಯಣದ ಬಗ್ಗೆ ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ ಈ ನಟಿ.

* ಸಿನಿಪಯಣ ಆರಂಭವಾದಾಗಿನಿಂದ ಇಲ್ಲಿಯವರೆಗಿನ ನಿಮ್ಮ ಹಾದಿ ಹೇಗಿತ್ತು?

ADVERTISEMENT

ಸಿನಿರಂಗದಲ್ಲಿ ಇಲ್ಲಿಯವರೆಗೆ ಸಾಗಿ ಬಂದ ಹಾದಿ ತುಂಬಾ ಚೆನ್ನಾಗಿತ್ತು. ಆಸಕ್ತಿದಾಯಕವಾಗಿತ್ತು. ಸಹಜವಾಗಿ ನಾನು ನಟನೆಗೆ ಹೆಚ್ಚು ಪ್ರಾಶಸ್ತ್ಯ ಇರುವ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತಿದ್ದೆ. ನಾನು ಸಿನಿಮಾ ಕಡಿಮೆ ಮಾಡುವುದು. ಆದರೆ ತುಂಬಾ ಚೆನ್ನಾಗಿರುವ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ.

* ಸದ್ಯ ನಿಮ್ಮ ಕೈಯಲ್ಲಿರುವ ಸಿನಿಮಾಗಳು?

ಕನ್ನಡದಲ್ಲಿ ‘ಆ್ಯಕ್ಟ್ 1978’ ಹಾಗೂ ತೆಲುಗಿನಲ್ಲಿ ‘9 ಡೈರೀಸ್’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಸದ್ಯ ನಾನು ಬ್ರೇಕ್‌ ತೆಗೆದುಕೊಂಡಿದ್ದೇನೆ. ಹಾಗಾಗಿ ಯಾವುದೇ ಸಿನಿಮಾಕ್ಕೆ ಸಹಿ ಮಾಡಿಲ್ಲ.

* ‘ಆ್ಯಕ್ಟ್‌ 1978’ ಚಿತ್ರದ ಕಥೆ ಹಾಗೂ ನಿಮ್ಮ ಪಾತ್ರ?

ನೀವು ಟ್ರೈಲರ್ ನೋಡಿದ್ರಿ ಅನ್ಸುತ್ತೆ. ಅಷ್ಟನ್ನೇ ನಾನು ವಿವರಿಸಲು ಸಾಧ್ಯ. ಅದರಲ್ಲಿ ನನ್ನದು ಗರ್ಭಿಣಿಯ ಪಾತ್ರ. ಬಾಂಬ್ ಕಟ್ಟಿಕೊಂಡು, ಕೈಯಲ್ಲಿ ಪಿಸ್ತೂಲ್ ಹಿಡಿದು ಸರ್ಕಾರಿ ಕಚೇರಿಯನ್ನು ಹೈಜಾಕ್ ಮಾಡುವ ಹೆಂಗಸು. ಕೊನೆಗೆ ಏನಾಗುತ್ತದೆ, ಕಥೆ ಏನು ಎನ್ನುವುದನ್ನು ನೀವು ಸಿನಿಮಾದಲ್ಲೇ ನೋಡಬೇಕು.

* ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ?

ಈ ಸಿನಿಮಾ 2019ರ ಸೆಪ್ಟೆಂಬರ್‌ನಲ್ಲಿ ಶೂಟಿಂಗ್‌ ಮಾಡಿದ್ದು. ಅಕ್ಟೋಬರ್‌ನಲ್ಲಿ ನನ್ನ ಮದುವೆ ಇದ್ದ ಕಾರಣ ಸಿನಿಮಾ ಒಪ್ಪಿಕೊಳ್ಳುತ್ತಿರ ಲಿಲ್ಲ. ಮಂಸೋರೆ ಸರ್ ಕರೆ ಮಾಡಿದಾಗಲೂ ನಾನು ಅವರಿಗೆ ಅದನ್ನೇ ಹೇಳಿದ್ದೆ. ಆದರೆ ಕಥೆ ಕೇಳಿದ ಮೇಲೆ ನನಗೆ ಅದನ್ನು ಒಪ್ಪಿಕೊಳ್ಳದೇ ಇರಲು ಕಾರಣವೇ ಇರಲಿಲ್ಲ. ಇಂತಹ ಕಥೆ ಬಿಟ್ಟರೆ ನಾನೇ ಮೂರ್ಖಳಾಗುವೆ ಎನ್ನಿಸಿತ್ತು. ಮಹಿಳಾ ಕೇಂದ್ರಿತ ಸಿನಿಮಾ ಸಿಗುವುದೇ ಕಷ್ಟ. ಅದರಲ್ಲೂ ಇಂತಹ ಪಾತ್ರ ಸಿಗುವುದು ಅಪರೂಪ. ಮಂಸೋರೆ ಈ ಕಥೆ ಮಾಡುವ ಮೊದಲು ತುಂಬಾನೇ ಹೋಮ್‌ವರ್ಕ್‌ ಮಾಡಿದ್ದಾರೆ. ಅದು ನನಗೆ ಖುಷಿ ನೀಡಿತ್ತು.

* ಈ ಪಾತ್ರ ನಿಮಗೆ ಹೇಗೆ ಚಾಲೆಂಜಿಂಗ್ ಆಗಿತ್ತು?

ಹೌದು. ಈ ಪಾತ್ರಕ್ಕೂ ನಿಜಕ್ಕೂ ಚಾಲೆಂಜಿಂಗ್‌ ಆಗಿತ್ತು. ನಾನು ಗರ್ಭಿಣಿಯಂತೆ ಸಹಜವಾಗಿ ಕಾಣಬೇಕು ಎಂಬ ಕಾರಣಕ್ಕೆ ನನ್ನ ದೇಹಾಕಾರಕ್ಕೆ ತಕ್ಕಂತೆ ಗರ್ಭಿಣಿಯ ಹೊಟ್ಟೆಯ ಅಚ್ಚನ್ನು ತಯಾರಿಸಿದ್ದರು. ಆದರೆ ಅದನ್ನು ಧರಿಸಿ ನಡೆಯುವುದು ಕಷ್ಟ. ಅಲ್ಲದೇ 9 ತಿಂಗಳ ಗರ್ಭಿಣಿ ನಡೆಯುವುದು, ಮಾತನಾಡುವುದು ಎಲ್ಲವೂ ಬೇರೆ ರೀತಿಯಾಗಿರುತ್ತದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾನು ಕೆಲಸ ಮಾಡಬೇಕಿತ್ತು. ಇದು ನಾನು ನಟಿಸಿದ ಪಾತ್ರಗಳಲ್ಲೇ ‘ದಿ ಬೆಸ್ಟ್‌’ ಎನ್ನಬಹುದು.

* ಚಿತ್ರತಂಡದ ಬಗ್ಗೆ ಹೇಳುವುದಾದರೆ...

ಈಗ ಜನರು ನಾರ್ಮಲ್ ಕರ್ಮಷಿಯಲ್ ಸಿನಿಮಾಗಳಿಗಿಂತ ಪ್ರಯೋಗಾತ್ಮಕ ಹಾಗೂ ವಿಭಿನ್ನ ಕತೆಗಳಿರುವ ಚಿತ್ರಗಳನ್ನೂ ಮೆಚ್ಚಿ ನೋಡುತ್ತಿದ್ದಾರೆ. ಅದರಲ್ಲೂ ಕೊರೊನಾ ನಡುವೆ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಈ ಸಿನಿಮಾದಲ್ಲಿ ಯಾರೂ ನಟಿಸಿಲ್ಲ. ಬದಲಾಗಿ ಪಾತ್ರಗಳಲ್ಲೇ ಜೀವಿಸಿದ್ದಾರೆ. ಒಂದು ಒಳ್ಳೆಯ ಕಥೆ ಹಾಗೂ ಚಿತ್ರತಂಡದ ಪ್ರಯತ್ನ ಇದರ ಹಿಂದಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂಬುದು ನನ್ನ ಹಾರೈಕೆ.

* ಭವಿಷ್ಯದ ಯೋಜನೆಗಳು?

ನನಗೆ ತೆಲುಗು, ತಮಿಳಿನಿಂದ ಅವಕಾಶಗಳು ಬರುತ್ತಿವೆ. ನಾನು ಮದುವೆಯ ನಂತರ ಬ್ರೇಕ್ ತೆಗೆದುಕೊಂಡಿದ್ದರೂ ಅವಕಾಶಗಳು ಬರುತ್ತಲೇ ಇವೆ. ನನಗೆ ‘ಆ್ಯಕ್ಟ್‌ 1978’ರಂತಹ ಒಳ್ಳೆಯ ಕಥೆ, ಪಾತ್ರ ಸಿಕ್ಕರೆ ನಟಿಸುವುದೇ ಇಲ್ಲ ಎಂದು ಹೇಳುವುದಿಲ್ಲ. ಆದರೆ ಸದ್ಯಕ್ಕಂತೂ ನಾನು ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.