ನಟ ಕೋಮಲ್ ಕುಮಾರ್ ನಾಯಕನಾಗಿ 25 ಸಿನಿಮಾಗಳನ್ನು ಪೂರೈಸಿದ್ದಾರೆ. ಕಳೆದ ಐದು ವರ್ಷದಿಂದ ಚಿತ್ರರಂಗದಿಂದ ದೂರವಿದ್ದ ಅವರು, ‘ಯಲಾಕುನ್ನಿ’ಯಲ್ಲಿ ‘ವ್ರಜಮುನಿ’ಯಾಗಿ ಬರುತ್ತಿದ್ದು, ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ...
ಇದು ನಿಮ್ಮ ಎರಡನೇ ಇನಿಂಗ್ಸ್ ಎನ್ನಬಹುದೇ?
ನನ್ನ ಸಿನಿಪಯಣದಲ್ಲಿ ನೂರಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದೇನೆ. ನಾಯಕನಾಗಿ 25 ಸಿನಿಮಾಗಳನ್ನು ಪೂರ್ಣಗೊಳಿಸಿದ್ದೇನೆ. ನಾನು ಹೀಗೆ ಸಿನಿಮಾಗಳನ್ನು ಲೆಕ್ಕ ಇಡುವುದಿಲ್ಲ. ನನ್ನ ಈ 32 ವರ್ಷಗಳ ಸಿನಿಪಯಣದಲ್ಲಿ ಪಾತ್ರಗಳ ಆಯ್ಕೆ ವಿಚಾರದಲ್ಲಿ ಬಹಳ ಸೂಕ್ಷ್ಮವಾದ ಹಾಗೂ ಕಟ್ಟುನಿಟ್ಟಾದ ನಿರ್ಧಾರಗಳನ್ನು ತೆಗೆದುಕೊಂಡಾತ. ಸಾಮಾನ್ಯವಾಗಿ ಇಷ್ಟು ವರ್ಷ ಸಿನಿಮಾರಂಗದಲ್ಲಿ ಇದ್ದವರು ಮುನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುತ್ತಾರೆ. ನನ್ನ ಸಿನಿಮಾಗಳ ಸಂಖ್ಯೆ ಕಡಿಮೆ ಇದೆ ಎಂದರೆ ಅದಕ್ಕೆ ನನ್ನ ಆಯ್ಕೆಯ ಮಾನದಂಡಗಳೇ ಕಾರಣ.
ಕೋವಿಡ್ ಸಂದರ್ಭದಲ್ಲಿ ಆರು ತಿಂಗಳು ಆರೋಗ್ಯ ಸಮಸ್ಯೆ ಕಾಡಿತು. ನಾನು ಗ್ರಹಗತಿಗಳನ್ನು ನಂಬುತ್ತೇನೆ. ಐದು ವರ್ಷಗಳಲ್ಲಿ ಈ ಕಾರಣಕ್ಕಾಗಿ ನಾನು ಸಿನಿಮಾದಿಂದ ದೂರ ಉಳಿದಿದ್ದೆ. ಅದಕ್ಕೆ ಇದೇ ಕಾರಣ. ನಮ್ಮ ಗುರುಗಳು ಈಗಿನ ಅವಧಿ ಒಳ್ಳೆಯದಿದೆ ಎಂದಿದ್ದಾರೆ. ಇದಕ್ಕೆ ನಾನು ಒಪ್ಪಿಕೊಳ್ಳುತ್ತಿರುವ ಸಿನಿಮಾಗಳ ಸಂಖ್ಯೆ ಸಾಕ್ಷಿ. ಸಿನಿಪಯಣದಲ್ಲಿ ಬಹಳಷ್ಟು ಏಳುಬೀಳುಗಳ ನಡುವೆ ನನ್ನ ಪ್ರಯತ್ನವನ್ನು ಮುಂದುವರಿಸಿಕೊಂಡೇ ಬಂದಿದ್ದೇನೆ. ಒಂದೊಳ್ಳೆ ಸಿನಿಮಾ ಬಂದಾಗ ಪ್ರೇಕ್ಷಕರು ಬೆಂಬಲ ನೀಡುತ್ತಾರೆ. ಸಿನಿಮಾ ಚೆನ್ನಾಗಿಲ್ಲ ಎಂದರೆ ಯಾರೂ ಬೆಂಬಲಕ್ಕೆ ಬರಲು ಸಾಧ್ಯವಿಲ್ಲ. ನನ್ನ ಪಯಣದಲ್ಲಿ ಹೀಗೇ ಆಗಿದೆ. ನಾನು ಇಂದಿಗೂ ಸಿನಿಮಾ ಮಾಡುತ್ತಿದ್ದೇನೆ ಎಂದರೆ ಎಲ್ಲರ ಬೆಂಬಲವೇ ಕಾರಣ.
‘ಯಲಾಕುನ್ನಿ’ಯ ಕಥೆ ಒಪ್ಪಿಕೊಂಡಿದ್ದು ಏಕೆ?
ಈ ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ವಜ್ರಮುನಿ ಎನ್ನುವ ಪಾತ್ರ ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ಉಳಿದುಕೊಂಡಿದೆ. ಇಂತಹ ಪಾತ್ರ ನಿಭಾಯಿಸಬೇಕು ಎಂದಾಗ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಪಾತ್ರವೇ ನನ್ನನ್ನು ಹುಡುಕಿಕೊಂಡು ಬಂದಿದೆ, ನೀವೇ ಆ ಪಾತ್ರವನ್ನು ನಿಭಾಯಿಸಲು ಸಾಧ್ಯ ಎಂದಾಗ ನಮ್ಮ ಮೇಲೆ ಅವರು ಇಟ್ಟಿರುವ ಭರವಸೆ ಕಂಡಿತು.
ವಜ್ರಮುನಿಯಾಗಿ ನಿಮ್ಮನ್ನು ನೀವು ಕಂಡಾಗ...
ಮೇಕಪ್‌ಗೆ ಅಮೆರಿಕದಲ್ಲಿರುವ ಶ್ರೀಜಿತ್ ದಾಮೋದರನ್ ಎಂಬುವವರು ಶಿಫಾರಸು ಮಾಡಿದ ಕಲಾಮಂಡಳಂ ವೈಶಾಖ್ ಬಂದಿದ್ದರು. ಕೇವಲ ಒಂದು ವಿಗ್, ಮೀಸೆ ಮತ್ತು ಸ್ವಲ್ಪ ಮೇಕಪ್ ಅವರ ಬಳಿ ಇತ್ತು. ಇಷ್ಟರಲ್ಲೇ ವಜ್ರಮುನಿಯಾಗಲು ಸಾಧ್ಯವೇ ಎಂಬ ಅಳುಕು ಕಾಡಿತು. ಸಣ್ಣ ಕೂದಲೂ ಕಾಣದಂತೆ ಮೂರು ಮೂರು ಬಾರಿ ಶೇವ್ ಮಾಡಿಸಿದರು. ಅವರು ಮೇಕಪ್ ಮುಗಿಸುವವರೆಗೂ ಅವರ ಮೇಲೆ ನಂಬಿಕೆ ಬರಲಿಲ್ಲ. ಮೇಕಪ್ ಬಳಿಕ ಕಾಂಟ್ಯಾಕ್ಟ್ ಲೆನ್ಸ್ ಹಾಕಿ ಕನ್ನಡಿ ಮುಂದೆ ನಿಂತಾಗ, ವಜ್ರಮುನಿ ಅವರೇ ಕಣ್ಮುಂದೆ ಬಂದಂತಾಯಿತು. ಅಲ್ಲಿ ನಾನು ಕಾಣಿಸಲೇ ಇಲ್ಲ. ನಾನು ಆ ಸಂದರ್ಭದಲ್ಲಿ ಬಹಳ ಭಾವುಕನಾದೆ. ನನಗೆ ಒಂದು ರೀತಿಯ ಶಕ್ತಿಯನ್ನೂ ಇದು ನೀಡಿತು. ವೈಶಾಖ್ ಅವರನ್ನು ತಬ್ಬಿಕೊಂಡೆ. ನನ್ನನ್ನು ಇಷ್ಟಪಡದವರೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ಗೆಟ್‌ಅಪ್ ನೋಡಿ ಮೆಚ್ಚಿಕೊಂಡರು. ವಜ್ರಣ್ಣ ಅವರ ವಿಡಿಯೊ ನೋಡಿ ಹಾವಭಾವ ಕಲಿತುಕೊಳ್ಳೋಣ ಎಂದುಕೊಂಡಿದ್ದೆ. ಆದರೆ ಮಿಮಿಕ್ರಿ ರೀತಿ ಆಗಬಹುದು ಎಂಬ ಭಯ ಕಾಡಿತು. ಅವರನ್ನು ನೆನಪಿಸಿಕೊಂಡು ಹುಬ್ಬೆತ್ತಿದಾಗ ವಜ್ರಣ್ಣನೇ ಕಾಣಿಸಿಕೊಂಡಂತಾಯಿತು.
ವಸ್ತುಗಳಲ್ಲಿ ರೆಟ್ರೊ ಅನುಭವ ಕೊಡುವುದು ಸುಲಭ. ಆದರೆ ಜಯಸಿಂಹ ಮುಸರಿಯವರು ಮತ್ತು ನಾನು ಸೇರಿ, ವಜ್ರಮುನಿ ಮತ್ತು ಮುಸುರಿ ಅವರ ರೆಟ್ರೊ ಅನುಭವವನ್ನು ತೆರೆಯಲ್ಲಿ ಕಟ್ಟಿಕೊಟ್ಟಿದ್ದೇವೆ.
ಚಿತ್ರದಲ್ಲಿ ವಜ್ರಮುನಿಯವರ ಪಾತ್ರವೇ?
ಅಲ್ಲ. ವಜ್ರಮುನಿಯವರನ್ನೇ ತದ್ರೂಪ ಮಾಡಿದ್ದೇವೆ. ಒಂದು ರೀತಿ ಕ್ಲೋನಿಂಗ್ ಮಾಡಿದ ಹಾಗೆ. ಇದೊಂದು ದೊಡ್ಡ ಸವಾಲೇ ಆಗಿತ್ತು. ನಾನು ವಜ್ರಮುನಿ ಎಂದು ಹೇಳುವುದೇ ಬೇಡ. ನನ್ನನ್ನು ನೋಡಿದಾಕ್ಷಣ ಎಲ್ಲರೂ ವಜ್ರಮುನಿ ಎನ್ನುತ್ತಿದ್ದರು. ಅವರ ವೈಯಕ್ತಿಕ ಬದುಕು ಇಲ್ಲಿಲ್ಲ. ಹೀರೊನ ತಂದೆಯಷ್ಟೆ. ಆ ಪಾತ್ರದ ಹೆಸರು ‘ಕೆ.ಡಿ.ನಾಗಪ್ಪ’. ಆತನ ಮಗ ನಾಯಕ ‘ಸತ್ಯ ಹರಿಶ್ಚಂದ್ರ’. ವಜ್ರಮುನಿ ಅವರಿಗೆ ಕಳಂಕ ಬರದಂತೆ ನಟಿಸಿದ್ದೇನೆ. ಈ ಸಿನಿಮಾದಲ್ಲಿ ಬರುವ ವಜ್ರಮುನಿಯವರ ಗೆಟಪ್ ಅವರ ಯಾವ ಸಿನಿಮಾಗಳಿಗೂ ಸಂಬಂಧವಿಲ್ಲ. ಹೋಲಿಕೆ ಬರುವ ಪಾತ್ರವಷ್ಟೇ. ವಜ್ರಣ್ಣ ಹಾಸ್ಯ ಮಾಡಿದ್ದಿದ್ದರೆ ಹೇಗೆ ಇರುತ್ತಿತ್ತು ಎನ್ನುವುದನ್ನೂ ಪ್ರಯತ್ನಿಸಿದ್ದೇವೆ.
ಈ ಪಾತ್ರ ನಿಭಾಯಿಸುವಾಗ ಅಳುಕಿತ್ತೇ?
ನಾನು ಕಲಾಶಾರದೆಯನ್ನು ಪೂಜಿಸಿಕೊಂಡು ಬಂದಿದ್ದೇನೆ. ಈ ಆಶೀರ್ವಾದವೇ ಪಾತ್ರ ನಿಭಾಯಿಸಲು ಧೈರ್ಯ ತುಂಬಿತು. ಸಣ್ಣದೊಂದು ಪಾತ್ರದಿಂದ ಇಲ್ಲಿಯವರೆಗೂ ಬೆಳೆದುಕೊಂಡು ಬಂದಿದ್ದೇನೆ. ನಾನು ರಂಗಭೂಮಿ ಕಲಾವಿದನಲ್ಲ. ಏಕಲವ್ಯನಂತೆ ಬೆಳೆದವನು. ನಟನಾ ಶಾಲೆಗೆ ಹೋಗದಿದ್ದರೂ ದೂರದಿಂದಲೇ ಎಲ್ಲವನ್ನೂ ಗ್ರಹಿಸಿದವನು. ಹೀಗಾಗಿ ಭರವಸೆ ಎನ್ನುವುದು ನನ್ನೊಳಗೆ ಭರಪೂರವಿದೆ. 32 ವರ್ಷಗಳಲ್ಲಿ ಈ ರೀತಿಯ ಭಿನ್ನಭಿನ್ನ ಪಾತ್ರಗಳನ್ನು ನಿಭಾಯಿಸಿಕೊಂಡೇ ಬಂದಿದ್ದೇನೆ. ಇದರಿಂದಾಗಿಯೇ ಇಲ್ಲಿಯವರೆಗೂ ಉಳಿದುಕೊಳ್ಳಲು ಸಾಧ್ಯವಾಯಿತು.
ಮುಂದಿನ ಪ್ರಾಜೆಕ್ಟ್‌ಗಳು...
‘ಯಲಾಕುನ್ನಿ’ ಬಳಿಕ ‘ಕಾಲಾಯ ನಮಃ’ ಬಿಡುಗಡೆಯಾಗಲಿದೆ. ‘ಕುಟೀರ’ ಸಿನಿಮಾದ ಶೇಕಡ 70ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಬಳಿಕ ಹರಿಕೃಷ್ಣ ಎಸ್. ನಿರ್ದೇಶನದ ‘ಕೋಣ’ ಬಿಡುಗಡೆಯಾಗಲಿದೆ. ಇದನ್ನು ಹೊರತುಪಡಿಸಿ ಇನ್ನೆರಡು ಸಿನಿಮಾಗಳ ಕಥೆಯನ್ನು ಕೇಳಿದ್ದೇನೆ, ಚರ್ಚೆ ನಡೆಯುತ್ತಿದೆ. ಈ ನಡುವೆ ‘ರಾಜುಪುತ್ರನ್’ ಎಂಬ ಒಂದು ತಮಿಳು ಸಿನಿಮಾ ಮಾಡಿದೆ. ಅಲ್ಲಿ ಪ್ರತಿಭೆಗಳನ್ನು ಬೇಗ ಗುರುತಿಸುತ್ತಾರೆ. ಇದಾದ ಬಳಿಕ ‘ಖಳನಾಯಕ’ನ ಪಾತ್ರಕ್ಕೆ ಹಲವು ಆಫರ್‌ಗಳು ತಮಿಳಿನಿಂದ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.