ವಜ್ರಮುನಿ ಅವರ ಗೆಟಪ್‌ನಲ್ಲಿ ನಟ ಕೋಮಲ್ ಕಾಣಿಸಿಕೊಂಡಿರುವ ‘ಯಲಾಕುನ್ನಿ’ ಚಿತ್ರ ಅ.25ರಂದು ತೆರೆಗೆ ಬರಲಿದೆ. ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ನಿರ್ಮಿಸಿರುವ ಚಿತ್ರವನ್ನು ಎನ್.ಆರ್.ಪ್ರದೀಪ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
‘ನಿರ್ದೇಶಕರು ನನಗೆ ಈ ಚಿತ್ರದ ಕಥೆ ಹೇಳಿದಾಗ ಈ ಪಾತ್ರ ಮಾಡಲು ಕಷ್ಟ ಅಂತ ಹೇಳಿದ್ದೆ. ಆದರೆ ಅವರು ಬಿಡದೆ ನೀವು ಮಾಡುತ್ತೀರಾ ಅಂತ ಒಪ್ಪಿಸಿ ಈ ಪಾತ್ರ ಮಾಡಿಸಿದ್ದಾರೆ. ಮೊದಲ ಬಾರಿ ವಜ್ರಮುನಿ ಅವರ ಗೆಟಪ್ ಹಾಕಿಕೊಂಡು ಕನ್ನಡಿ ಮುಂದೆ ಬಂದು ನಿಂತಾಗ ನನಗೆ ನಾನು ಕಾಣಿಸಲಿಲ್ಲ. ವಜ್ರಮುನಿ ಅವರೇ ಕಂಡರು. ಅವರ ಆಶೀರ್ವಾದದಿಂದ ಈ ಪಾತ್ರ ಮಾಡಲು ಸಾಧ್ಯವಾಯಿತು. ಎರಡು ಶೇಡ್‌ಗಳಲ್ಲಿ ನನ್ನ ಪಾತ್ರವಿರುತ್ತದೆ. ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಣ್ಣ ಜಗ್ಗೇಶ್ ಅವರ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್, ಡಿಐ ಮುಂತಾದ ಕಾರ್ಯಗಳು ನಡೆದಿದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ’ ಎಂದರು ನಟ ಕೋಮಲ್.
ನಿಸರ್ಗ ಅಪ್ಪಣ್ಣ ಈ ಚಿತ್ರದ ನಾಯಕಿ. ಯತಿರಾಜ್, ಜಯಸಿಂಹ ಮುಸುರಿ, ಮಯೂರ್ ಪಟೇಲ್, ಸಾಧುಕೋಕಿಲ, ದತ್ತಣ್ಣ, ಮಿತ್ರ, ತಬಲ ನಾಣಿ, ಶಿವರಾಜ್ ಕೆ.ಆರ್ ಪೇಟೆ, ಮಾನಸಿ ಸುಧೀರ್, ಸುಮನ್ ನಗರಕರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
‘ಕೆಲವು ಸಿನಿಮಾಗಳಿಗೆ ಸಹ,ಸಹಾಯಕ ನಿರ್ದೇಶಕನಾಹಿ ಕಾರ್ಯ ನಿರ್ವಹಿಸಿರುವ ನನಗೆ ಇದು ನಿರ್ದೇಶಕನಾಗಿ ಮೊದಲ ಚಿತ್ರ. ಕೋಮಲ್ ಕುಮಾರ್ ಅವರ ವಜ್ರಮುನಿ ಲುಕ್‌ಗೆ ಈಗಾಗಲೇ ಅಭಿಮಾನಿಗಳು ಮನಸೋತಿದ್ದಾರೆ. ಈ ಕಥೆಯನ್ನು ಸಿನಿಮಾವಾಗಿಸಲು ಸಹಕಾರ ನೀಡಿದ ವಜ್ರಮುನಿ ಕುಟುಂಬ ಹಾಗೂ ಜಗ್ಗೇಶ್ ಅವರಿಗೆ ಧನ್ಯವಾದ ಹೇಳಲೇಬೇಕು’ ಎಂದರು ನಿರ್ದೇಶಕರು.
ಧರ್ಮವಿಶ್ ಅವರ ಸಂಗೀತ ಸಂಯೋಜನೆ, ಹಾಲೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
‘ನಮ್ಮ ತಂದೆ ಅವರಿಗೆ ಹೆಸರು ತಂದುಕೊಟ್ಟ ಪಾತ್ರ ‘ಪಡವಾರಹಳ್ಳಿ ಪಾಂಡವರು’ ಚಿತ್ರದ ಕನೆಕ್ಷನ್ ಕಾಳಪ್ಪ. ನಾನು ಕೂಡ ಈ ಚಿತ್ರದಲ್ಲಿ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ಜಯಸಿಂಹ ಮುಸುರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.