ADVERTISEMENT

Year Ender 2022 | ಈ ವರ್ಷ ಕಣ್ಮರೆಯಾದ ಭಾರತೀಯ ಚಿತ್ರರಂಗದ 12 ತಾರೆಯರು

ಸಹಜ, ಅನಿರೀಕ್ಷೀತ, ಆಘಾತಕಾರಿ ಸಾವು; ಭಾರತೀಯ ಚಿತ್ರರಂಗ ಮರೆಯದ ತಾರೆಯರು

ಪ್ರಜಾವಾಣಿ ವಿಶೇಷ
Published 27 ಡಿಸೆಂಬರ್ 2022, 9:21 IST
Last Updated 27 ಡಿಸೆಂಬರ್ 2022, 9:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

2022ನೇ ಇಸವಿ ಅಂತ್ಯವಾಗುತ್ತಿದೆ. ಹಲವು ಸಿಹಿ–ಕಹಿ ನೆನಪುಗಳನ್ನು ಕೊಟ್ಟು 2022 ವಿದಾಯ ಹೇಳಲು ಸಜ್ಜಾಗುತ್ತಿದೆ. ಹಾಗೆ ನೋಡಿದರೆ 2022 ಭಾರತೀಯ ಚಿತ್ರರಂಗಕ್ಕೆ ಸಿಹಿ ಉಂಟು ಮಾಡಿದ ವರ್ಷವೇನಲ್ಲ. ಹಲವು ಖ್ಯಾತನಾಮರು ಇದೇ ವರ್ಷ ಕಾಲನ ಕರೆಗೆ ಓಗೊಟ್ಟು ಭೂಲೋಕದ ಪ್ರಯಾಣ ಮುಗಿಸಿದ್ದಾರೆ. ಹಲವು ಸೆಲೆಬ್ರೆಟಿಗಳು ಅಸಹಜವಾಗಿ ಸಾವಿಗೀಡಾದರು. ಹಲವು ಅನಿರೀಕ್ಷಿತ ಸಾವುಗಳು ಭಾರತದ ಚಿತ್ರರಂಗವನ್ನು ಆಘಾತಕ್ಕೀಡು ಮಾಡಿತು. ಈ ವರ್ಷ ನಮ್ಮನ್ನು ಅಗಲಿದ ಚಿತ್ರರಂಗ ಪ್ರಮುಖರ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.

ಲತಾ ಮಂಗೇಶ್ಕರ್‌

ಈ ಹೆಸರಿಗೆ ಪರಿಯಚವೇ ಬೇಕಿಲ್ಲ. ಭಾರತದ ನೈಟಿಂಗೇಲ್‌ ಎಂದೇ ಪ್ರಸಿದ್ಧರಾಗಿದ್ದ, ಭಾರತದ ಸಂಗೀತ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೈದಿದ್ದ ಲತಾ ಮಂಗೇಶ್ಕರ್ ಅವರು ಈ ವರ್ಷ ಫೆಬ್ರವರಿ 6 ರಂದು ಕೊನೆಯುಸಿರೆಳೆದರು. ಕೋವಿಡ್‌ –19ಗೆ ತುತ್ತಾಗಿದ್ದ ಅವರು, ಬಳಿಕ ಕೋವಿಡೋತ್ತರ ಸಮಸ್ಯೆ‌ಗಳಿಂದ ಬಳಲುತ್ತಿದ್ದರು. ಶ್ವಾಸಕೋಶದ ಸಮಸ್ಯೆ ಹಾಗೂ ಬಹುಅಂಗಾಗ ವೈಫಲ್ಯದಿಂದ ಅವರು ನಿಧನರಾದರು.

ADVERTISEMENT

ಬಪ್ಪಿ ಲಹಿರಿ

‘ಬಪ್ಪಿ ದಾ‘ ಎಂದೇ ಖ್ಯಾತರಾಗಿದ್ದ ಪ್ರಸಿದ್ಧ ಗಾಯಕ ಬಪ್ಪಿ ಲಹಿರಿ ಅವರು ಕೂಡ ಈ ವರ್ಷ ಕಾಲನ ಕರೆಗೆ ಓಗೊಟ್ಟು ಮರೆಯಾದರು. ಬಾಲಿವುಡ್‌, ಬೆಂಗಾಲಿ, ತೆಲುಗು, ಕನ್ನಡ ಭಾಷೆಯ ಸಿನಿಮಾಗಳ ಹಾಡುಗಳಿಗೆ ದನಿಯಾಗಿದ್ದ ಅವರು, ಫೆಬ್ರವರಿ 15 ರಂದು ಮೃತಪಟ್ಟರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಕೃಷ್ಣಕುಮಾರ್‌ ಕುನ್ನತ್‌

ಕೆ.ಕೆ ಎಂದೇ ಹೆಸರುವಾಸಿಯಾಗಿದ್ದ ಕೃಷ್ಣಕುಮಾರ್‌ ಕುನ್ನತ್‌ ಅವರದ್ದು ಭಾರತೀಯ ಸಿನಿಮಾದಲ್ಲಿ ಅಳಿಸಲಾಗದ ಹೆಸರು. ಹಿನ್ನಲೆ ಗಾಯಕರಾಗಿದ್ದ ಅವರು, ಗಾಯನ ಕಾರ್ಯಕ್ರಮದಲ್ಲೇ ಅಸ್ವಸ್ಥರಾಗಿ ಕೊನೆಯುಸಿರೆಳೆದರು. ಮೇ 31 ರಂದು ದಕ್ಷಿಣ ಕೋಲ್ಕತ್ತಾದ ನಝ್ರುಲ್‌ ಮಂಚ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗಲೇ, ಹೃದಯಾಘಾತ ಉಂಟಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

ರಾಜು ಶ್ರೀವಾಸ್ತವ

ಸ್ಟಾಂಡಪ್‌ ಕಾಮೆಡಿಯನ್‌, ನಟ, ರಾಜಕಾರಣಿ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದ ರಾಜು ಶ್ರೀವಾಸ್ತವ ಅವರನ್ನೂ ಈ ವರ್ಷ ವಿಧಿ ಬಲಿಪಡೆದುಕೊಂಡಿತು. ಅನಾರೋಗ್ಯದಿಂದ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಸೆಪ್ಟೆಂಬರ್‌ 21 ರಂದು ಅಲ್ಲಿಯೇ ಮೃತಪಟ್ಟರು. ಅವರ ಸ್ಟಾಂಡಪ್‌ ಕಾಮೆಡಿ ಶೋಗಳು, ಸಿನಿಮಾದಲ್ಲಿನ ಪಂಚಿಂಗ್‌ ಡೈಲಾಗ್‌ಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸಿಧು ಮೂಸೆವಾಲ

ಖ್ಯಾತ ಪಂಜಾಬಿ ಗಾಯಕ, ರಾಜಕಾರಣಿಯೂ ಆಗಿದ್ದ ಸಿಧು ಮೂಸೆವಾಲ ಅವರದ್ದು ದುರಂತ ಸಾವು. ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿದ ಆಗಂತುಕರು, ಗುಂಡು ಹಾರಿಸಿ ಕೊಲೆ ಮಾಡಿದ್ದರು. ಅವರಿಗೆ ಸುಮಾರು 30 ಗುಂಡುಗಳು ತಗುಲಿದ್ದವು. ಮೇ 29 ರಂದು ಈ ಘಟನೆ ನಡೆದಿತ್ತು. ಈ ವರೆಗೂ ಆರೋಪಿಗಳ ಬಂಧನ ಆಗಿಲ್ಲ.

ಪಂಡಿತ್‌ ಬಿರ್ಜು ಮಹರಾಜ್‌

ಉತ್ತರ ಪ್ರದೇಶದ ಲಖನೌ ಮೂಲದ ಕಥಕ್‌ ನೃತ್ಯಪಟು, ಸಂಗೀತ ಸಂಯೋಜಕ, ಗಾಯಕ ಪಂಡಿತ್‌ ಬಿರ್ಜು ಮಹರಾಜ್‌ ಅವರು ಜನವರಿ 17 ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರ ಆರೋಗ್ಯದಲ್ಲಿ ದಿಢೀರ್‌ ಏರುಪೇರಾಗಿತ್ತು.

ತುನಿಶಾ ಶರ್ಮಾ

‘ಫಿತೂರ್‌‘, ‘ಬಾರ್‌ ಬಾರ್‌ ದೇಖೋ‘, ‘ಕಹಾನಿ 2; ದುರ್ಗ ರಾಣಿ ಸಿಂಗ್‌‘ ಹಾಗೂ ‘ದಬಾಂಗ್‌ 3‘ ಮುಂತಾದ ಸೂಪರ್‌ಹಿಟ್‌ ಚಲನಚಿತ್ರಗಳಲ್ಲಿ ನಟಿಸಿದ್ದ ತುನಿಶಾ ಶರ್ಮಾ ಅವರದ್ದು ಅನುಮಾನಾಸ್ಪದ ಸಾವು. ಡಿಸೆಂಬರ್ 24 ರಂದು ಅವರ ಮೃತದೇಹ ಟಿವಿ ಧಾರವಾಹಿ ಸೆಟ್‌ ಒಂದರಲ್ಲಿ ಪತ್ತೆಯಾಗಿತ್ತು. ಸಾವಿನ ಬಗ್ಗೆ ಹಲವು ಅನುಮಾನಗಳು ಇದ್ದು, ವಿವಿಧ ಕೋನಗಳಲ್ಲಿ ತನಿಖೆ ಸಾಗುತ್ತಿದೆ.

ವಿಕ್ರಂ ಗೋಖಲೆ

ರಂಗಭೂಮಿ ಹಾಗೂ ಸಿನಿಮಾದಲ್ಲಿ ಹೆಸರು ಮಾಡಿದ್ದ ಖ್ಯಾತ ಕಲಾವಿದ ವಿಕ್ರಂ ಗೋಖಲೆಯವರನ್ನು ನವೆಂಬರ್‌ 26 ರಂದು ವಿಧಿ ಬಲಿಪಡೆಯಿತು. 77 ವರ್ಷದ ಅವರು ಕೆಲ ದಿನಗಳ ಕಾಲ ಜೀವರಕ್ಷದ ಸಹಾಯದಿಂದ ಉಸಿರಾಡುತ್ತಿದ್ದರು.

ತಬಸ್ಸುಮ್‌ ಗೋವಿಲ್

ಹಿರಿತೆರೆ ಹಾಗೂ ಕಿರಿತೆರೆಗಳಲ್ಲಿ ಖ್ಯಾತಿ ಪಡೆದಿದ್ದ ಹಿರಿಯ ನಟಿ ತಬಸ್ಸುಮ್ ಗೋವಿಲ್ ಅವರು ನವೆಂಬರ್‌ 18 ರಂದು ವಿಧಿಯ ಕರೆಗೆ ಶರಣಾದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಹೃದಯಸ್ತಂಭನ ಉಂಟಾಗಿತ್ತು. ಮರಣದ ವೇಳೆ ಅವರಿಗೆ 78 ವರ್ಷವಾಗಿತ್ತು.

ಸಿದ್ಧಾರ್ಥ್‌ ವೀರ್ ಸೂರ್ಯವಂಶಿ

ಕುಸುಮ್, ವಾರಿಸ್‌, ಸೂರ್ಯಪುತ್ರ ಕರಣ್‌ ಮುಂತಾದ ಧಾರವಾಹಿಗಳ ಮೂಲಕ ಹೆಸರುವಾಸಿಯಾಗಿದ್ದ ಸಿದ್ಧಾರ್ಥ್‌ ವೀರ್ ಸೂರ್ಯವಂಶಿ ಅವರು ಜಿಮ್‌ನಲ್ಲಿ ಕಸರತ್ತು ಮಾಡುವಾಗ ಕುಸಿದು ಬಿದ್ದು ಕೊನೆಯುಸಿರೆಳೆದರು. ನವೆಂಬರ್‌ 11 ರಂದು ಅವರು ಮೃತಪಟ್ಟರು. 46 ವರ್ಷ ವಯಸ್ಸಾಗಿತ್ತು.

ದೀಪೇಶ್‌ ಭನ್‌

‘ಬಾಬಿ ಘರ್‌ ಪೇ ಹೈ’ ಎನ್ನುವ ಧಾರಾವಾಹಿಮೂಲಕ ಖ್ಯಾತರಾಗಿದ್ದ ದೀಪೇಶ್‌ ಭನ್‌ ಜುಲೈ 23 ರಂದು ಮರಣ ಹೊಂದಿದರು. ಮುಂಬೈನ ಅವರ ಮನೆಯಲ್ಲಿ ಕ್ರಿಕೆಟ್‌ ಆಡುವಾಗ ಕುಸಿದು ಬಿದ್ದು ಮೃತಪಟ್ಟರು. ಅದಕ್ಕೂ ಮುನ್ನ ಅವರು ಜಿಮ್‌ನಲ್ಲಿ ಕಸರತ್ತು ಮಾಡಿದ್ದರು. 41ನೇ ವಯಸ್ಸಿನಲ್ಲಿ ಅವರು ಮೃತಪಟ್ಟಿದ್ದಾರೆ.

ಐಂದ್ರಿಲಾ ಶರ್ಮಾ

ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ ಅವರು ನವೆಂಬರ್‌ 25ರಂದು ಹೃದಯ ಸ್ತಂಭನದಿಂದಾಗಿ ಕೊನೆಯುಸಿರೆಳೆದರು. 24 ವರ್ಷದ ಐಂದ್ರಿಲಾ, ಕ್ಯಾನ್ಸರ್‌ ಗೆದ್ದು ಬಂದಿದ್ದರೂ, ಸಣ್ಣ ವಯಸ್ಸಿನಲ್ಲಿ ನಿಧನರಾದರು. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕಾಲವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.