‘ಚಂದನವನ’ವು 2018ರಲ್ಲಿ ಸಾಕ್ಷಿಯಾದ ವಿವಾದಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ‘ಮೀ ಟೂ’ಗೆ ಸಂಬಂಧಿಸಿದ ಆರೋಪಗಳು.
ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಹೆಣ್ಣುಮಕ್ಕಳು ತಮಗಾದ ನೋವನ್ನು ಬಹಿರಂಗವಾಗಿ ಹೇಳಿಕೊಳ್ಳುವಂತೆ ಆಗಬೇಕು ಎಂಬ ಉದ್ದೇಶದಿಂದ ಆರಂಭವಾದ ‘ಮೀ ಟೂ’ ಚಳವಳಿ ಬಾಲಿವುಡ್‌ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತು. ಆ ಬಿರುಗಾಳಿ ನಂತರ ಕನ್ನಡ ಸಿನಿಮಾ ಕ್ಷೇತ್ರವನ್ನೂ ಆವರಿಸಿಕೊಂಡಿತು.
‘ವಿಸ್ಮಯ’ ಸಿನಿಮಾ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ತಮಗೆ ಅಹಿತಕರವೆನ್ನಿಸುವಂತೆ ನಡೆದುಕೊಂಡಿದ್ದರು ಎಂದು ಶ್ರುತಿ ಹರಿಹರನ್ ‘ಸುಧಾ’ ವಾರಪತ್ರಿಕೆಯ ಮೂಲಕ ಮಾಡಿದ ಆರೋಪ ‘ಚಂದನವನ’ವನ್ನು ಬೆಚ್ಚಿಬೀಳಿಸಿತು. ಶ್ರುತಿ ವಿರುದ್ಧ ಅರ್ಜುನ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಪ್ರತಿಯಾಗಿ ಶ್ರುತಿ ಅವರು ಅರ್ಜುನ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದರು. ಮಧ್ಯಪ್ರವೇಶ ಮಾಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಬಗೆಹರಿಸುವ ಯತ್ನವನ್ನೂ ಮಾಡಿತ್ತು.
‘ಗಂಡ– ಹೆಂಡತಿ’ಯ ಕಥೆ!: 2016ರಲ್ಲಿ ಬಿಡುಗಡೆಯಾದ ‘ಗಂಡ ಹೆಂಡತಿ’ ಚಿತ್ರೀಕರಣದ ವೇಳೆ ಒತ್ತಾಯಪೂರ್ವಕವಾಗಿ, ಅಗತ್ಯಕ್ಕಿಂತ ಹೆಚ್ಚು ಬಾರಿ ಕಿಸ್ಸಿಂಗ್ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದರು ಎಂದು ಸಂಜನಾ, ನಿರ್ದೇಶಕ ರವಿ ಶ್ರೀವತ್ಸ ಅವರ ವಿರುದ್ಧ ಆರೋಪ ಮಾಡಿದ್ದರು. ನಂತರ, ನಿರ್ದೇಶಕರಲ್ಲಿ ಬೇಷರತ್ ಕ್ಷಮೆ ಯಾಚಿಸುವ ಮೂಲಕ ಸಂಜನಾ ಈ ವಿವಾದಕ್ಕೆ ಅಂತ್ಯ ಕಾಣಿಸಿದರು.
ಸಂಗೀತಾ ಭಟ್ ಹೇಳಿದ ವೃತ್ತಾಂತ: ಶ್ರುತಿ, ಸಂಜನಾ ಅವರಂತೆಯೇ ತಮಗಾದ ಅಹಿತಕರ ಅನುಭವ ಹೇಳಿಕೊಂಡ ಸಂಗೀತಾ ಭಟ್, ಕನ್ನಡ ಚಿತ್ರರಂಗ ತೊರೆಯುತ್ತಿರುವುದಾಗಿ ಪ್ರಕಟಿಸಿದರು.
ಈರೇಗೌಡ ವಿರುದ್ಧ ಆರೋಪ: ‘ತಿಥಿ’ ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಹೆಸರು ಸಂಪಾದಿಸಿದ ಈರೇಗೌಡ ವಿರುದ್ಧ ನಟಿಯೊಬ್ಬರು ‘ಮೀ ಟೂ’ ಆರೋಪ ಹೊರಿಸಿದರು. ಇದರ ಪರಿಣಾಮವಾಗಿ ಈರೇಗೌಡ ನಿರ್ದೇಶನದ ‘ಬಳೆಕೆಂಪ’ ಸಿನಿಮಾ ಧರ್ಮಶಾಲಾ ಚಿತ್ರೋತ್ಸವದಿಂದ ಹೊರಬೀಳುವಂತಾಯಿತು. ಈರೇಗೌಡ ವಿರುದ್ಧ ಆರೋಪ ಮಾಡಿದ ನಟಿ ಅನಾಮಧೇಯರಾಗಿ ಉಳಿದರು.
ವಿಷ್ಣು ಸ್ಮಾರಕ: ಇದು ಬಗೆಹರಿಯದ ಸಮಸ್ಯೆಯಾಗಿಯೇ ಉಳಿದುಕೊಂಡಿತು. ಅಪರೂಪಕ್ಕೆ ಎಂಬಂತೆ ಡಾ. ವಿಷ್ಣು ಕುಟುಂಬದ ಎಲ್ಲರೂ (ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಮಗಳು ಕೀರ್ತಿ) ಈ ಕುರಿತು ತಮ್ಮ ಅಸಮಾಧಾನ ತೋಡಿಕೊಳ್ಳಲು ಪತ್ರಿಕಾಗೋಷ್ಠಿ ನಡೆಸಿದರು. ಅನಿರುದ್ಧ್ ಅವರು ಸರ್ಕಾರದ ವಿರುದ್ಧ ತೀವ್ರ ಕೋಪ ತೋಡಿಕೊಂಡ ಪ್ರಸಂಗವೂ ನಡೆಯಿತು.
‘ರಾಜರಥ’ದ ಮಾತು: ಭಾರಿ ನಿರೀಕ್ಷೆ ಹುಟ್ಟಿಸಿದ್ದ ‘ರಾಜರಥ’ ಸಿನಿಮಾ ಅಷ್ಟೇನೂ ಯಶಸ್ಸು ಕಾಣದಿದ್ದಾಗ ಅನೂಪ್ ಮತ್ತು ನಿರೂಪ್ ಭಂಡಾರಿ ಅವರು ‘ಈ ಸಿನಿಮಾ ವೀಕ್ಷಿಸದವರು ಕಚಡಾ ನನ್ಮಕ್ಕಳು’ ಎಂದು ಹೇಳಿ ಭಾರಿ ವಿವಾದ ಸೃಷ್ಟಿಸಿದರು. ನಂತರ ಕ್ಷಮೆಯಾಚಿಸಿ ವಿವಾದ ತಣ್ಣಗಾಗಿಸಿದರು.
ಅಭಿಮಾನಿಗಳ ಜಗಳ: ವಿಲನ್ ಚಿತ್ರದಲ್ಲಿ ಸುದೀಪ್ ಅವರು ಶಿವರಾಜ್ ಕುಮಾರ್ ಅವರಿಗೆ ಹೊಡೆಯುವ ಒಂದು ದೃಶ್ಯ ಸುದೀಪ್ ಹಾಗೂ ಶಿವಣ್ಣ ಅಭಿಮಾನಿಗಳ ನಡುವೆ ಕಿತ್ತಾಟಕ್ಕೆ ಕಾರಣವಾಯಿತು.
ವಿಜಯ್ ವಿವಾದ: ಜಿಮ್ ತರಬೇತುದಾರ ಮಾರುತಿಗೌಡ ಎನ್ನುವವರನ್ನು ಅಪಹರಿಸಿ, ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿ ವಿಜಯ್ ಅವರನ್ನು ಪೊಲೀಸರು ಬಂಧಿಸಿದ್ದರು.
ವಿವಾದದ ಹೊರಳುದಾರಿ
ಡಬ್ಬಿಂಗ್ ಎಂಬುದು ಕನ್ನಡ ಚಿತ್ರರಂಗದ ಪಾಲಿಗೆ ಸದಾ ಬಿಸಿ ಕೆಂಡ. ಬೇರೆ ಭಾಷೆಯ ಮನರಂಜನಾ ಕಾರ್ಯಕ್ರಮಗಳು, ಸಿನಿಮಾಗಳು ಕನ್ನಡಕ್ಕೆ ಡಬ್ ಆಗುವುದನ್ನು ಒಪ್ಪಲು ಕನ್ನಡ ಸಿನಿಮಾ ರಂಗದ ಹಲವರು ಸಿದ್ಧರಿಲ್ಲ.
ಆದರೆ ಈ ವರ್ಷ ಡಬ್ಬಿಂಗ್ ವಿಚಾರದಲ್ಲಿ ಕೆಲವು ಗುರುತಿಸಬೇಕಾದ ಬೆಳವಣಿಗೆಗಳು ನಡೆದವು. ಯಶ್ ‘ಕೆಜಿಎಫ್’ ಸಿನಿಮಾ ನಾಲ್ಕು ಭಾಷೆಗಳಿಗೆ ಡಬ್ ಆಗಿದೆ. ಹಾಗಾಗಿ, ಕೆಜಿಎಫ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ಯಶ್ ಅವರಿಗೆ ಡಬ್ಬಿಂಗ್ ಬಗ್ಗೆ ಒಂದು ಪ್ರಶ್ನೆ ಎದುರಾಯಿತು.
‘ದೇಶದಲ್ಲಿ ಬೇರೆ ಬೇರೆ ಭಾಷೆಗಳ ಜನ ಡಬ್ಬಿಂಗ್ ಮೂಲಕ ತಮ್ಮ ಭಾಷೆಯಲ್ಲೇ ಸಿನಿಮಾ ನೋಡುತ್ತಿದ್ದಾರೆ. ಕನ್ನಡದಲ್ಲಿ ಡಬ್ಬಿಂಗ್ ವಿಚಾರದಲ್ಲಿ ತಮ್ಮ ನಿಲುವು ಏನು’ ಎಂದು ಯಶ್ ಅವರನ್ನು ಪ್ರಶ್ನಿಸಿದಾಗ, ‘ಕಾಲದ ಜೊತೆಯಲ್ಲೇ ಹಲವು ವಿಷಯಗಳು ಬದಲಾಗುತ್ತಿರುತ್ತವೆ. ಭಾರತೀಯ ಸಿನಿಮಾಗಳನ್ನು ಇಂದು ಚೀನೀಯರು ಕೂಡ ನೋಡುತ್ತಾರೆ. ಕನ್ನಡ ಭಾಷೆಗೆ ಒಳ್ಳೆಯದಾಗುತ್ತದೆ ಎಂದಾದರೆ ನನ್ನದೇನೂ ವಿರೋಧ ಇಲ್ಲ. ಆದರೆ, ಡಬ್ಬಿಂಗ್‌ನಿಂದ ಸ್ಥಳೀಯ ಕಲಾವಿದರಿಗೆ ತೊಂದರೆ ಆಗುತ್ತದೆ. ಅದರ ಬಗ್ಗೆಯೂ ಗಮನ ನೀಡಬೇಕು’ ಎಂದು ಉತ್ತರಿಸಿದ್ದರು.
ನಟ ಜಗ್ಗೇಶ್ ಅವರು ಡಬ್ಬಿಂಗ್ ವಿಚಾರವಾಗಿ ಒಂದು ಟ್ವೀಟ್ ಮಾಡಿ, ‘ಸಂವಿಧಾನವೇ ಸರಿ ಎಂದ ಮೇಲೆ ನಮ್ಮದೇನೂ ಇಲ್ಲ. ಕನ್ನಡಿಗರಿಗೆ ಏನು ಇಷ್ಟವೋ ಅದನ್ನು ನೋಡಲು, ಪಡೆಯಲು ಸರ್ವಸ್ವತಂತ್ರರು’ ಎಂದು ಹೇಳಿದರು. ಯಶ್ ಮತ್ತು ಜಗ್ಗೇಶ್ ಅವರ ಮಾತುಗಳನ್ನು ಡಬ್ಬಿಂಗ್ ಪರ ಕಾರ್ಯಕರ್ತರು ಸ್ವಾಗತಿಸಿದ್ದರು.
ಪ್ರೈಮ್ ಪ್ರವೇಶ
ಡಿಜಿಟಲ್ ಮನರಂಜನಾ ಕ್ಷೇತ್ರದ ದೈತ್ಯ ಅಮೆಜಾನ್ ತನ್ನ ಪ್ರೈಮ್ ಸೇವೆಗಳಲ್ಲಿ ಕನ್ನಡ ಸಿನಿಮಾಗಳಿಗಾಗಿ ಪ್ರತ್ಯೇಕ ವಿಭಾಗ ಆರಂಭಿಸಿದ್ದು ಉಲ್ಲೇಖಾರ್ಹ ಬೆಳವಣಿಗೆ.
ಪ್ರೈಮ್ ವಿಭಾಗದಲ್ಲಿ ಬೇರೆ ಭಾಷೆಗಳ ಸಿನಿಮಾಗಳು, ವೆಬ್ ಧಾರಾವಾಹಿಗಳು ಅದಾಗಲೇ ಇದ್ದವು. ಕನ್ನಡಕ್ಕಾಗಿ ಪ್ರತ್ಯೇಕ ವಿಭಾಗ ಆರಂಭಿಸಿದ್ದು ಕನ್ನಡ ಸಿನಿಮಾ ಮಾರುಕಟ್ಟೆಯ ವಿಸ್ತರಣೆ ಎಂದು ಹಲವು ಯುವ ನಿರ್ದೇಶಕರು, ಯುವ ನಿರ್ಮಾಪಕರು ವ್ಯಾಖ್ಯಾನಿಸಿದರು.
ವೆಬ್ ಸಿರೀಸ್
ಕನ್ನಡದಲ್ಲಿ ತುಸು ನಿಧಾನವಾಗಿ ಸಾಗಿರುವ ವೆಬ್ ಸಿರೀಸ್ ನಿರ್ಮಾಣ ಯೋಜನೆಗಳಿಗೆ ಒಂದು ಬಲ ಸಿಕ್ಕಿತು ಈ ವರ್ಷದಲ್ಲಿ.
‘ಜಟ್ಟ’ ಚಿತ್ರದ ನಿರ್ದೇಶಕ ಬಿ.ಎಂ. ಗಿರಿರಾಜ್ ‘ರಕ್ತಚಂದನ’ ಎನ್ನುವ ವೆಬ್ ಸರಣಿ ನಿರ್ದೇಶಿಸಿದರು. ಅಲ್ಲದೆ, ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಸಖತ್ ಸ್ಟುಡಿಯೊ ಸಂಸ್ಥೆ ಜೊತೆ ಕೈಜೋಡಿಸಿ, ‘ಹೇಟ್ ಯೂ ರೋಮಿಯೊ’ ಎಂಬ ವೆಬ್ ಸರಣಿಗೆ ಹಣ ಹೂಡಿದರು.
ಚಿತ್ರಮಂದಿರಗಳಿಗೆ ಏಟು
ಏಕಪರದೆಯ ಚಿತ್ರಮಂದಿರಗಳನ್ನು ಒಡೆದು, ಅಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಿಸಲು ಅಡಿಗಲ್ಲು ಹಾಕಿದ ವಿದ್ಯಮಾನಗಳು ಬಹಳಷ್ಟು ಇವೆ ಎನ್ನುತ್ತವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೂಲಗಳು.
‘2017–18 ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 400 ಚಿತ್ರಮಂದಿರಗಳು ಮುಚ್ಚಿವೆ. ಯುಎಫ್‌ಒ ಮತ್ತು ಕ್ಯೂಬ್‌ನ ಹೊಡೆತ, ಜಿಎಸ್‌ಟಿ ವ್ಯವಸ್ಥೆಯ ಏಟು ತಾಳಲಾರದೆ ಚಿತ್ರಮಂದಿರಗಳು ಸೊರಗಿವೆ. ಡಿಜಿಟಲ್ ವೇದಿಕೆಗಳಾದ ಅಮೆಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ನ ಪ್ರಭಾವದಿಂದಾಗಿಯೂ ಚಿತ್ರಮಂದಿರಗಳು ಒಂದಿಷ್ಟು ವಹಿವಾಟು ಕಳೆದುಕೊಂಡವು’ ಎನ್ನುತ್ತಾರೆ ಉಮೇಶ ಬಣಕಾರ.
ಮಕ್ಕಳ ಸಿನಿಮಾ
1) ಸಮ್ಮರ್ ಹಾಲಿಡೇಸ್
2) ಜೀರ್ಜಿಂಬೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.