ಬೆಂಗಳೂರು: ಉಸಿರು ಪೂರ್ತಿ ಹೋದರೂ ಹೆಸರು ಪೂರ್ತಿ ನೆನಪಿದೆ.. ನೀನು ಇರದೆ ಹೋದರೂ ನಿನ್ನ ನಗೆಯ ಬೆಳಕಿದೆ.. ಎಂದು ನಿರ್ದೇಶಕ ಯೋಗರಾಜ್ ಭಟ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಗೀತ ನಮನ ಸಲ್ಲಿಸಿದ್ದಾರೆ.
ಸದ್ಯ ಯುಟ್ಯೂಬ್‌ನಲ್ಲಿ ಹಂಚಿಕೊಂಡಿರುವ ಈ ಗೀತೆಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಗಾಯಕಿ ಪುನರ್ವಸು ಭಟ್ ಹಾಡಿದ್ದಾರೆ.
ದಶಕದ ಹಿಂದೆ ತೆರೆಕಂಡಿದ್ದ ಯೋಗರಾಜ್ ಭಟ್ ನಿರ್ದೇಶನದ ‘ಪರಮಾತ್ಮ’ ಚಿತ್ರ ಪುನೀತ್ ರಾಜ್‌ಕುಮಾರ್ ಅವರಿಗೆ ಹೊಸ ಅಭಿಮಾನಿ ಬಳಗವನ್ನೇ ಸೃಷ್ಟಿಸಿತ್ತು.
ಪುನೀತ್ ಅವರನ್ನು ನೆನಪಿಸಿಕೊಂಡಿದ್ದ ಯೋಗರಾಜ್ ಭಟ್ ಅವರು ಫೇಸ್‌ಬುಕ್‌ನಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದು, ‘ಜೊತೆಗಿರದ ಜೀವ ಎಂದೆಂದಿಗೂ ಜೀವಂತ’ ಎಂದು ಬರೆದುಕೊಂಡಿದ್ದರು.
ಇದೀಗ ಪುನೀತ್ ಅವರಿಗಾಗಿ ಹಾಡುವೊಂದನ್ನು ರಚಿಸಿದ್ದು, ಗೀತ ನಮನ ಸಲ್ಲಿಸಿದ್ದಾರೆ.
ಅ.29ರಂದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಪುನೀತ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ರಮಣಶ್ರೀ ಕ್ಲಿನಿಕ್‌ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೃದಯಾಘಾತಕ್ಕೆ ಒಳಗಾಗಿದ್ದ ಪುನೀತ್‌ರನ್ನು ತಕ್ಷಣವೇ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು.
ಎರಡು ದಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಅನೇಕ ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದರು. ಇಂದು ಬೆಳಿಗ್ಗೆ ಕಂಠೀರವ ಸ್ಟುಡಿಯೊದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.