ADVERTISEMENT

ಒಂದೇ ದಿನ ನಾಲ್ಕು ಸಿನಿಮಾ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:30 IST
Last Updated 1 ಅಕ್ಟೋಬರ್ 2019, 19:30 IST
ಯೋಗಿ ಬಾಬು
ಯೋಗಿ ಬಾಬು   

ಬ್ಯುಸಿ ಸ್ಟಾರ್‌ ಎಂದೇ ಕರೆಸಿಕೊಳ್ಳುವ, ಕಮಿಡಿಯನ್‌ ಯೋಗಿ ಬಾಬು ಅವರ ನಾಲ್ಕು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಲಿದ್ದು, ಕಾಲಿವುಡ್‌ನಲ್ಲಿ ಅಚ್ಚರಿ ಮೂಡಿಸಿದೆ.

ಅಕ್ಟೋಬರ್‌ 11ರಂದು ನಾಲ್ಕೂ ಸಿನಿಮಾಗಳು ಒಟ್ಟಿಗೆ ತೆರೆಕಾಣಲಿವೆ. ಸಿ.ಸುಂದರ್ ಅಭಿನಯದ ‘ಇರುಟ್ಟು’, ವರುಣ್‌ ಮತ್ತು ಸಂಯುಕ್ತಾ ಹೆಗಡೆ ಅಭಿನಯದ ‘ಪಪ್ಪಿ’, ತಮನ್ನಾ ಭಾಟಿಯಾ ಅವರ ‘ಪೆಟ್ರೋಮ್ಯಾಕ್ಸ್‌’, ಯೋಗಿ ಬಾಬು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ಬಟ್ಲರ್‌ ಬಾಲು’ ಒಂದೇ ದಿನ ತೆರೆಕಾಣುವ ಸಿನಿಮಾಗಳಾಗಿವೆ.

‘ಇರುಟ್ಟು’ ಸಿನಿಮಾದಲ್ಲಿ ಅವರು ನಗಿಸುವ ದೃಶ್ಯಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ‘ಬಟ್ಲರ್ ಬಾಲು’ದಲ್ಲಿ ಬಟ್ಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕಾಗಿ ಗಣೇಶ್‌ ರಾಘವೇಂದ್ರ ಅವರು ವಿಶೇಷವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಮನ್ನಣೆ ನೀಡಲಾಗಿದೆ. ರೋಬೊ ಶಂಕರ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ADVERTISEMENT

‘ನನ್ನ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕೆಲವೇ ನಿಮಿಷದ ಪಾತ್ರವಾದರೂ ಸರಿ ಮಾಡಬೇಕು ಎಂದು ಬಹುತೇಕ ನಿರ್ದೇಶಕರು ಕೇಳುತ್ತಾರೆ. ನಾನು ಯಾರಿಗೂ ಇಲ್ಲ ಎಂದಿಲ್ಲ. ಸಮಯ ಮಾಡಿಕೊಂಡು ಚಿಕ್ಕ ಚಿಕ್ಕ ತಮಾಷೆಯ ಪಾತ್ರಗಳನ್ನು ಮಾಡುತ್ತಿರುತ್ತೇನೆ. ದೊಡ್ಡ ಸಂಭಾಷಣೆ, ಗಂಟೆಗಟ್ಟಲೆ ಅಭಿನಯದ ಅವಕಾಶ ಇದ್ದರೆ ಹಿಂದೇಟು ಹಾಕುತ್ತೇನೆ’ ಎಂದು ಯೋಗಿ ಬಾಬು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ನಾಲ್ಕು ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗುತ್ತಿವೆ. ಈ ವಾರ ಬಿಡುಗಡೆಯಾಗುವ ಐದಾರು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಯಾವುದೇ ಸಿನಿಮಾಗೆ ಹೋದರೂ ನನ್ನ ಅಭಿನಯ ನೋಡುತ್ತಾರೆ’ ಎಂದು ಅವರು ಖುಷಿ ವ್ಯಕ್ತಪಡಿಸಿದ್ದಾರೆ.

‘ನಾನು ಆಯ್ಕೆ ಮಾಡುವ ಸಿನಿಮಾಗಳಲ್ಲಿ ಸಣ್ಣ ಪಾತ್ರ ಇದ್ದರೂ, ಅಭಿನಯಕ್ಕೆ ಸಾಕಷ್ಟು ಒತ್ತು ನೀಡಿರುತ್ತಾರೆ. ಆದ್ದರಿಂದ ಹಲವು ತಿಂಗಳಿನಿಂದ ಬಿಡುವಿಲ್ಲದೇ ಕೆಲಸ ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.