ADVERTISEMENT

ಚಿಕ್ಕಮಗಳೂರು: ವಿಕ್ರಾಂತ್‌ ರೋಣ ವೀಕ್ಷಣೆ ವೇಳೆ ಥಿಯೇಟರ್‌ನಲ್ಲಿ ಭೀಕರ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 13:08 IST
Last Updated 28 ಜುಲೈ 2022, 13:08 IST
 ವಿಕ್ರಾಂತ್‌ ರೋಣ
ವಿಕ್ರಾಂತ್‌ ರೋಣ    

ಚಿಕ್ಕಮಗಳೂರು: ನಗರದ ಮಿಲನ ಚಿತ್ರಮಂದಿರದಲ್ಲಿ 'ವಿಕ್ರಾಂತ ರೋಣ' ಸಿನಿಮಾ ವೀಕ್ಷಣೆ ವೇಳೆ ಕೆಲವರು ಹೊಡೆದಾಡಿಕೊಂಡಿದ್ದಾರೆ. ಭರತ್ ಎಂಬಾತನ ಬೆನ್ನು, ಹೊಟ್ಟೆ ಭಾಗಕ್ಕೆ ಕತ್ತಿಯಿಂದ ಚುಚ್ಚಿದ್ದಾರೆ.

ಗಾಯಾಳುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನಚಿಕಿತ್ಸೆಗೆ ಹಾಸನಕ್ಕೆ ಒಯ್ಯಲಾಗಿದೆ.

ಹಾಡಿನ ದೃಶ್ಯದ ಸಂದರ್ಭದಲ್ಲಿ ಕೆಲವರು ಪರದೆ ಮುಂದೆ ಕುಣಿಯಲು ಹೋದಾಗ ವಾಗ್ವಾದವಾಯಿತು. ನಂತರ ಚಿತ್ರಮಂದಿರದಿಂದ ಹೊರಕ್ಕೆ ಬಂದು ಆವರಣದಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ಸ್ಥಳದಲ್ಲಿದ್ದವರು 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ ‘ವಿಕ್ರಾಂತ್‌ ರೋಣ’ ಇಂದು (ಗುರುವಾರ) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ರಂಗಿತರಂಗ’ ಖ್ಯಾತಿಯ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ನಿರೂಪ್​ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್‌ ಫರ್ನಾಂಡಿಸ್‌ ಮೊದಲಾದವರು ನಟಿಸಿದ್ದಾರೆ.

‘ವಿಕ್ರಾಂತ್‌ ರೋಣ’ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಕೋವಿಡ್‌ ಕಾರಣದಿಂದ ಚಿತ್ರ ಬಿಡುಗಡೆಯನ್ನು ಹಲವು ತಿಂಗಳು ಮುಂದೂಡಲಾಗಿತ್ತು.

ಈ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿರುವ ಅಭಿಮಾನಿಗಳು ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾ ತಾಂತ್ರಿಕವಾಗಿ ಚೆನ್ನಾಗಿ ಮೂಡಿಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ‘ವಿಕ್ರಾಂತ್‌ ರೋಣ’ ಉತ್ತಮ ಆಕ್ಷನ್, ಹಾರರ್ ಥ್ರಿಲ್ಲರ್ ಸಿನಿಮಾ ಎಂದು ಹೇಳಿಕೊಂಡಿದ್ದಾರೆ.

ಉತ್ತಮ ತಾಂತ್ರಿಕ ಕೆಲಸಗಳೊಂದಿಗೆ ಆಸಕ್ತಿದಾಯಕ ಕಥೆಯನ್ನು ಆಕರ್ಷಕವಾಗಿ ಹೇಳಲಾಗಿದೆ. ಸುದೀಪ್ ಅದ್ಭುತವಾಗಿ ನಟಿಸಿದ್ದಾರೆ. ಕೆಲವು ದೃಶ್ಯಗಳನ್ನು ಕತ್ತರಿಸಬಹುದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನೋಡಿದ ಉತ್ತಮ ಸಿನಿಮಾಗಳಲ್ಲಿ ಒಂದಾಗಿದೆ ಎಂದು ವೆಂಕಿ ಎಂಬುವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.