ADVERTISEMENT

ಹೈಕೋರ್ಟ್‌ನಿಂದ ತಡೆ: Netflixನಲ್ಲಿ ಬಿಡುಗಡೆಯಾಗದ ಅಮೀರ್ ಖಾನ್ ಮಗನ ‘ಮಹಾರಾಜ್’

ಪಿಟಿಐ
Published 14 ಜೂನ್ 2024, 11:17 IST
Last Updated 14 ಜೂನ್ 2024, 11:17 IST
   

ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ಮಗ ಜುನೈದ್ ಖಾನ್ ನಟಿಸಿರುವ ‘ಮಹಾರಾಜ್‌’ ಚಿತ್ರ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ನಿಗದಿಯಂತೆ ಚಿತ್ರ ಇಂದು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿಲ್ಲ.

ಚಿತ್ರವು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಹಿಂದೂಪರ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ಚಿತ್ರಕ್ಕೆ ತಡೆ ನೀಡಿತ್ತು.

ಇದು ಜುನೈದ್ ಖಾನ್ ಅವರ ಮೊದಲ ಚಿತ್ರವಾಗಿದ್ದು, ಬುಧವಾರದಿಂದ ಚಿತ್ರದ ಬಹಿಷ್ಕಾರಕ್ಕೆ ಒತ್ತಾಯಿಸಿ ಸಾಮಾಜಿಕ ಮಾಧ್ಯಮದಲ್ಲಿ Boycott Netflix ಮತ್ತು Ban Maharaj Film ಎಂಬ ಹ್ಯಾಶ್‌ ಟ್ಯಾಗ್ ಟ್ರೆಂಡ್ ಆಗಿದ್ದವು.

ADVERTISEMENT

ಪುಷ್ಠಿಮಾರ್ಗ ಎಂಬ ವೈಷ್ಣವ ಪಂಥದ ಹಿಂದೂ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಗೀತಾ ವಿಶೇನ್ ಒಳಗೊಂಡ ಏಕಸದಸ್ಯ ಪೀಠವು, ಚಿತ್ರಕ್ಕೆ ತಡೆ ವಿಧಿಸಿತ್ತು. ಅಲ್ಲದೆ, ಕೇಂದ್ರ ಸರ್ಕಾರ, ನೆಟ್‌ಫ್ಲಿಕ್ಸ್ ಮತ್ತು ನಿರ್ಮಾಣ ಸಂಸ್ಥೆಗೆ ನೋಟಿಸ್ ಜಾರಿಮಾಡಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 18ಕ್ಕೆ ನಿಗದಿಪಡಿಸಲಾಗಿದೆ.

ಸಿದ್ದಾರ್ಥ್ ಪಿ ಮಲ್ಹೋತ್ರಾ ನಿರ್ದೆಶಿಸಿದ್ದು, ವೈಆರ್‌ಎಫ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ಆದಿತ್ಯ ಚೋಪ್ರಾ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಜೈದೀಪ್ ಅಹ್ಲವಾತ್ ಸಹ ಮುಖ್ಯಭೂಮಿಕೆಯಲ್ಲಿದ್ದಾರೆ.

ಪೋಸ್ಟರ್‌ನಲ್ಲಿ ಇಬ್ಬರೂ ನಟರು ಜೊತೆಯಲ್ಲಿ ನಿಂತಿರುವುದು ಕಂಡುಬಂದಿದೆ. ಜೈದೀಪ್ ಹಣೆಗೆ ತಿಲಕವಿಟ್ಟುಕೊಂಡಿದ್ದು, ಪತ್ರಕರ್ತನ ಪಾತ್ರ ನಿರ್ವಹಿಸಿರುವ ಜುನೈದ್ ಕೋಟ್ ಧರಿಸಿದ್ದಾರೆ.

‘ಮಹಾರಾಜ್ ಚಿತ್ರದ ಕುರಿತಂತೆ ವಿಚಾರಣೆ ನಡೆಯುತ್ತಿರುವುದರಿಂದ ಚಿತ್ರದ ಕುರಿತಾದ ವಿಮರ್ಶೆಯನ್ನು ಆನ್‌ಲೈನ್, ಮುದ್ರಣ ಮಾಧ್ಯಮ ಅಥವಾ ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸದಂತೆ ನಾವು ಈ ಮೂಲಕ ಮನವಿ ಮಾಡುತ್ತಿದ್ದೇವೆ’ ಎಂದು ವೈಆರ್‌ಎಫ್ ಮತ್ತು ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.