‘ಯುವ’ ಸಿನಿಮಾದ ಬಳಿಕ ನಟ ಯುವ ರಾಜ್ಕುಮಾರ್ ನಿರ್ದೇಶಕ ರೋಹಿತ್ ಪದಕಿ ಜೊತೆ ತಮ್ಮ ಮುಂದಿನ ಸಿನಿಮಾವನ್ನು ಕೆಲ ದಿನಗಳ ಹಿಂದಷ್ಟೇ ಘೋಷಿಸಿದ್ದರು. ಇದೀಗ ಚಿತ್ರದ ಶೀರ್ಷಿಕೆ ಘೋಷಣೆಯಾಗಿದ್ದು, ಫಸ್ಟ್ಲುಕ್ ಕೂಡ ಬಿಡುಗಡೆಗೊಂಡಿದೆ. ಈ ಚಿತ್ರಕ್ಕೆ ‘ಎಕ್ಕ’ ಎಂದು ಹೆಸರಿಡಲಾಗಿದೆ.
ಕಥೆಗಾರ ವಿಕ್ರಂ ಹತ್ವಾರ್ ಬರವಣಿಗೆ ಚಿತ್ರಕ್ಕಿದೆ. ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿರುವ ‘ಉತ್ತರಾಕಾಂಡ’ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ಆ ಸಿನಿಮಾ ಪೂರ್ಣಗೊಳ್ಳುವ ಮೊದಲೇ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿನಯ್ ರಾಜ್ಕುಮಾರ್ ಅವರ ‘ಪೆಪೆ’ ಚಿತ್ರ ತೆರೆಕಂಡಿತ್ತು. ‘ಎಕ್ಕ’ದ ಮೊದಲ ಪೋಸ್ಟರ್ ‘ಪೇಪೆ’ ಚಿತ್ರವನ್ನು ನೆನಪಿಸುವಂತಿದೆ. ಮಾಂಸದ ಮಾರುಕಟ್ಟೆಯಲ್ಲಿ ಮಾರಕಾಸ್ತ್ರ ಹಿಡಿದು, ಬಟ್ಟೆಯೆನ್ನೆಲ್ಲ ರಕ್ತಸಿಕ್ತಗೊಳಿಸಿಕೊಂಡಿರುವ ಯುವ ಮತ್ತೊಂದು ಮಾಸ್ ಆ್ಯಕ್ಷನ್ ಸಿನಿಮಾದೊಂದಿಗೆ ಬರಲು ಸಿದ್ಧರಾಗಿದ್ದಾರೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ.
ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್, ಜಯಣ್ಣ ಕಂಬೈನ್ಸ್, ಕೆ.ಆರ್.ಜಿ.ಸ್ಟೂಡಿಯೋಸ್ ಒಟ್ಟಾಗಿ ಚಿತ್ರವನ್ನು ನಿರ್ಮಿಸುತ್ತಿದೆ. ನವೆಂಬರ್ 28ಕ್ಕೆ ಚಿತ್ರೀಕರಣ ಆರಂಭವಾಗಲಿದ್ದು, 2025ಕ್ಕೆ ಚಿತ್ರ ತೆರೆ ಕಾಣಲಿದೆ. ತಾರಾಬಳಗವನ್ನು ಮುಂಬರುವ ದಿನಗಳಲ್ಲಿ ಪರಿಚಯಿಸುತ್ತೇವೆ’ ಎಂದು ಚಿತ್ರತಂಡ ಹೇಳಿದೆ.
ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದು, ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ದೀಪು ಎಸ್ ಕುಮಾರ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.