ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ‘ಪವರ್ ಸ್ಟಾರ್’ ಆಗಿ ಬೆಳೆದಿರುವ ಪುನೀತ್ ರಾಜ್‌ಕುಮಾರ್‌ಗೆ ಇದೇ 17ರಂದು ಹುಟ್ಟುಹಬ್ಬದ ಸಂಭ್ರಮ. ಈ ದಿನದ ಸಂಭ್ರಮ ದುಪ್ಪಟ್ಟುಗೊಳಿಸಲು ‘ಜೇಮ್ಸ್’ ಚಿತ್ರತಂಡವು ಅಣಿಯಾಗಿದೆ. ಹಾಗೆಯೇ ‘ಯುವರತ್ನ’ ಚಿತ್ರತಂಡವೂ ಅಣ್ಣಾವ್ರಕುಡಿ ‘ಅಪ್ಪು’ ಅಭಿಮಾನಿಗಳಿಗೆ ವಿಶೇಷ ಕೊಡುಗೆ ನೀಡಲು ಸನ್ನದ್ಧವಾಗಿದೆ. ಪುನೀತ್ ನಟನೆಯ ಬಹು ನಿರೀಕ್ಷೆಯ ಈ ಎರಡು ಚಿತ್ರಗಳು 2020ರಲ್ಲಿ ಅಭಿಮಾನಿಗಳ ಕುತೂಹಲ ಮತ್ತು ಕಾತರವನ್ನು ಹೆಚ್ಚಿಸಿವೆ.
ಪುನೀತ್ ಹುಟ್ಟುಹಬ್ಬಕ್ಕೆ‘ಯುವರತ್ನ’ ಚಿತ್ರತಂಡವು ಒಂದು ದಿನ ಮುಂಚಿತವಾಗಿ ಅಂದರೆ ಮಾ.16ರಂದು ಈ ಚಿತ್ರದ ಪವರ್‌ಫುಲ್ ಡೈಲಾಗ್ ಟೀಸರ್ ಬಿಡುಗಡೆ ಮಾಡಿದರೆ, ‘ಜೇಮ್ಸ್’ ಚಿತ್ರತಂಡವು ವಿಶೇಷವಾದ ಮೋಷನ್ ಪೋಸ್ಟರ್‌ವೊಂದನ್ನು ಪುನೀತ್ ಅಭಿಮಾನಿಗಳಿಗಾಗಿ ಅರ್ಪಣೆ ಮಾಡುತ್ತಿದೆ.‘ಯುವರತ್ನ’ ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಮತ್ತು ‘ಜೇಮ್ಸ್’ಗೆ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಜೇಮ್ಸ್ ಚಿತ್ರದಲ್ಲಿ ಪುನೀತ್‌ಗೆ ತೆಲುಗಿನ ನಟಿ ನಿಧಿ ಅಗರ್‌ವಾಲ್ ಅಥವಾ ಬಹುಭಾಷಾ ತಾರೆ, ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಬಹುದು ಎನ್ನುವ ಮಾತು ಚರ್ಚೆಯಲ್ಲಿದ್ದರೂ ನಿರ್ದೇಶಕರು ಮಾತ್ರ ಗುಟ್ಟು ಬಿಟ್ಟುಕೊಡುತ್ತಿಲ್ಲ. ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರು ಜೇಮ್ಸ್‌ಗೆ ಜೋಡಿಯಾಗಲಿದ್ದಾರೆ ಎನ್ನುವ ಮಾತನ್ನು ಮಾತ್ರ ಚಿತ್ರತಂಡ ದೃಢವಾಗಿ ಹೇಳುತ್ತಿದೆ. ಹಾಗೆಯೇ ಈ ಚಿತ್ರದಲ್ಲಿ ವಿಲನ್ ಆಗಿ ಘರ್ಜಿಸಲಿರುವ ನಟ ಯಾರೆನ್ನುವ ಕುತೂಹಲವನ್ನು ಚಿತ್ರತಂಡ ಕಾಯ್ದುಕೊಂಡಿದೆ.
ಐದು ವರ್ಷಗಳ ಹಿಂದೆಯೇ ಆಗಬೇಕಿತ್ತು:‘ಜೇಮ್ಸ್’ ಚಿತ್ರ ಐದು ವರ್ಷಗಳ ಹಿಂದೆಯೇ ಆಗಬೇಕಿತ್ತು. ‘ಬಹದ್ದೂರ್’ ಚಿತ್ರ ಮುಗಿದ ತಕ್ಷಣ ಕೈಗೆತ್ತಿಕೊಳ್ಳಬೇಕಿತ್ತು. ಪುನೀತ್ ಅವರದ್ದು ‘ದೊಡ್ಡಮನೆ ಹುಡುಗ’ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ನಾನು ಅಷ್ಟರಲ್ಲಿ ‘ಭರ್ಜರಿ’ ಸಿನಿಮಾ ಮಾಡಬೇಕಾಯಿತು. ನಂತರ‘ಭರಾಟೆ’ ಸಿನಿಮಾ ಕೈಗೆತ್ತಿಕೊಂಡೆ. ಈಗ ನಮಗೆ ‘ಜೇಮ್ಸ್’ ಪೂರ್ಣಗೊಳಿಸಲು ಸಮಯ ಸಿಕ್ಕಿದೆ ಎನ್ನುತ್ತಾರೆ ನಿರ್ದೇಶಕ ಚೇತನ್‌ಕುಮಾರ್.
‘ಪುನೀತ್ ಅವರನ್ನು ಅವರ ಅಭಿಮಾನಿಗಳು ಹೇಗೆಲ್ಲ ನೋಡಲು ಇಷ್ಟಪಡುತ್ತಾರೆ ಅಂತಹ ಚಹರೆಗಳು ಜೇಮ್ಸ್‌ನಲ್ಲಿರಲಿವೆ.ಪುನೀತ್ ಅವರ ಹಿಂದಿನ ಚಿತ್ರಗಳ ಚಹರೆಗಳು ಇದರಲ್ಲಿ ಇರುವುದಿಲ್ಲ.ಇದೊಂದು ಸಂಪೂರ್ಣ ಕೌಟುಂಬಿಕ ಮನರಂಜನೆಯ ಚಿತ್ರ. ಜತೆಗೆ ಕಂಟೆಂಟ್ ಓರಿಯಂಟೆಡ್ ಆಗಿದ್ದು, ಸಾಮಾಜಿಕ ಕಾಳಜಿಯ ಸಂದೇಶದ ಅಂಶವೂ ಇದರಲ್ಲಿರಲಿದೆ.ಕಥೆಗೆ ಬೇರೆಯ ಥೀಮ್ ಇದೆ. ನನ್ನ ಹಿಂದಿನ ಮೂರು ಸಿನಿಮಾಗಳನ್ನು ತೆಲುಗು ಮತ್ತು ಹಿಂದಿಯಲ್ಲಿರುವಂತೆ ಕಲರ್ ಪ್ಯಾಲೆಟ್‌ಮೇಲೆ ಮಾಡಿದ್ದೇನೆ. ಆದರೆ, ಇದು ನನಗೆ ಒಂದು ಹೊಸ ಜಾನರ್‌ನ ಸಿನಿಮಾ’ ಎನ್ನಲು ಅವರು ಮರೆಯಲಿಲ್ಲ.
ಮೊದಲ ಹಂತದ ಚಿತ್ರೀಕಣ ಪೂರ್ಣ
‘ಜೇಮ್ಸ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಇನ್ನು ಎರಡನೇ ಹಂತದ ಚಿತ್ರೀಕರಣಕ್ಕೂ ಸ್ಥಳಗಳನ್ನು ಗುರುತಿಸಲಾಗಿದೆ.ರಾಜ್ಯದೊಳಗೆ ಚಿತ್ರೀಕರಣ ನಡೆಯಲಿದೆ. ಛಾಯಾಗ್ರಹಣ ಶ್ರೀಶ ಕೂದುವಳ್ಳಿ, ಸಂಗೀತ ಚರಣ್ ರಾಜ್, ಕಲಾನಿರ್ದೇಶನ ರವಿ ಸಂತೆಹೈಕ್ಲು, ಕೊರಿಯೊಗ್ರಫಿ ಹರ್ಷ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಕಿಶೋರ್ ಪತ್ತಿಕೊಂಡಬಂಡವಾಳ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.