ಬೆಂಗಳೂರು: ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಎರಡನೇ ಚಿತ್ರ ‘ಯುವರತ್ನ’. ಈ ಚಿತ್ರದ ಮಾತಿನ ಭಾಗದ ಅಂತಿಮ ಹಂತದ ಚಿತ್ರೀಕರಣವು ಬೆಂಗಳೂರು ಸಮೀಪದ ನಂದಿಬೆಟ್ಟದಲ್ಲಿ ನಡೆಯುತ್ತಿದೆ.
ನಂದಿಬೆಟ್ಟದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಅಂತಿಮ ದೃಶ್ಯಗಳ ಚಿತ್ರೀಕರಣದಲ್ಲಿ ಮಗ್ನವಾಗಿದೆ. ಚಿತ್ರದ ನಾಯಕ ಪುನೀತ್‌ರಾಜ್‌ಕುಮಾರ್, ನಟರಾದ ಪ್ರಕಾಶ್ ರಾಜ್, ದಿಗಂತ್, ನಟಿ ಸೋನು ಗೌಡ ಸೇರಿದಂತೆ ಹಲವು ಕಲಾವಿದರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.
ಈ ನಡುವೆಯೇ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿಯೂ ತೊಡಗಿದೆ. ಮಾತಿನ ಭಾಗದ ಶೂಟಿಂಗ್ ಮುಗಿದ ಬಳಿಕ ಹಾಡುಗಳು ಚಿತ್ರೀಕರಣ ನಡೆಯಲಿದೆ. ಸಯೇಸಾ ಅವರು ಪುನೀತ್ ಅವರಿಗೆ ಜೋಡಿಯಾಗಿದ್ದಾರೆ. ‘ಡಾಲಿ’ ಖ್ಯಾತಿ ನಟ ಧನಂಜಯ್ ಅವರು ಪುನೀತ್ ವಿರುದ್ಧ ಚಿತ್ರದಲ್ಲಿ ತೊಡೆತಟ್ಟಿದ್ದಾರೆ. ಡಾಲಿ ಜೊತೆಗೆ ವಸಿಷ್ಠ ಸಿಂಹ ಕೂಡ ಅಬ್ಬರಿಸಿದ್ದಾರಂತೆ.
ಶಿಕ್ಷಣ ಮಾಫಿಯಾ ಸುತ್ತ ಈ ಸಿನಿಮಾದ ಕಥೆ ಹೊಸೆಯಲಾಗಿದೆ. ಮಾಫಿಯಾವು ಸಮಾಜದ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಮಕ್ಕಳ ಭವಿಷ್ಯ ಮಂಕಾಗುತ್ತಿದೆ ಎಂಬ ಸಂದೇಶ ಹೇಳಲಾಗಿದೆಯಂತೆ. ಎಸ್. ತಮನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೆಂಕಟೇಶ್ ಅಂಗುರಾಜ್ ಅವರದು.
ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ, ಹಾಡುಗಳ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ, 2020ಕ್ಕೆ ಸಿನಿಮಾ ತೆರೆ ಕಾಣುವ ನಿರೀಕ್ಷೆಯಿದೆ. ಹೊಂಬಾಳೆ ಫಿಲ್ಸ್ಮ್‌ನಡಿ ವಿಜಯ್ ಕಿರಗಂದೂರು ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.