ಚೆನ್ನೈ: ಆಸ್ಕರ್, ಗ್ರ್ಯಾಮಿ ಪ್ರಶಸ್ತಿ ವಿಜೇತ ಮತ್ತು ಭಾರತದ ಅಗ್ರ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಎ.ಆರ್. ರೆಹಮಾನ್ ಅವರು ತಮಿಳಿನ ಮಹತ್ವ ಮತ್ತು ತಮಿಳಿಗರಿಗೆ ಭಾಷೆ ಎಂಬುದು ಏನಾಗಿದೆ ಎಂಬುದರ ಅರ್ಥವನ್ನು ಎತ್ತಿ ತೋರಿಸುವ ಪೋಸ್ಟರ್ ಅನ್ನು ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ತಡರಾತ್ರಿ ರೆಹಮಾನ್ ಮಾಡಿರುವ ಟ್ವೀಟ್, ಗೃಹ ಸಚಿವ ಅಮಿತ್ ಶಾ ಅವರ ಇಂಗ್ಲಿಷ್‌ಗೆ ಹಿಂದಿ ಪರ್ಯಾಯವಾಗಿದೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆಯಾಗಿದೆ ಎನ್ನಲಾಗುತ್ತಿದೆ.
‘ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಬಳಸಬೇಕೇ ಹೊರತು ಸ್ಥಳೀಯ ಭಾಷೆಗಳನ್ನಲ್ಲ. ದೇಶದೆಲ್ಲೆಡೆ ಸಂಪರ್ಕ ಭಾಷೆಯಾಗಿ ದೇಶೀಯ ಭಾಷೆಯಾದ ಹಿಂದಿಯನ್ನು ಬಳಸಬೇಕು. ವಿದೇಶಿ ಭಾಷೆಯನ್ನಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಗೃಹ ಸಚಿವರ ಈ ಹೇಳಿಕೆಗೆ ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
ತಮಿಳಿನ 'ಳ' (ಝ) ಅಕ್ಷರವಿರುವ ತ್ರಿಶೂಲವನ್ನು ಹಿಡಿದಿರುವ ಮಹಿಳೆಯ ಪೋಸ್ಟರ್ ಅನ್ನು ರೆಹಮಾನ್ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟರ್‌ಗೆ 'ತಮಿಳನಂಗು' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಅಲ್ಲದೆ, ಕ್ರಾಂತಿಕಾರಿ ಕವಿ ಭಾರತಿದಾಸನ್ ಅವರ ಕವಿತೆಯ ಸಾಲುಗಳಿವೆ. 'ಇನ್ಬ ತಮಿಳ್ಎಂಗಳ್ ಉರಿಮೈ ಸೆಂಪಾಯಿರುಕ್ಕು ವೇರ್' (ಆಹ್ಲಾದಕರ ತಮಿಳು ನಮ್ಮ ಹಕ್ಕುಗಳ ಮೂಲವಾಗಿದೆ) ಎಂಬ ಸಾಲು ಇದಾಗಿದೆ.
ರೆಹಮಾನ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಲು ಹಲವಾರು ಪ್ರಮುಖ ಬರಹಗಾರರು, ನಟರು, ಪತ್ರಕರ್ತರು ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, ಈ ಪೋಸ್ಟ್ ಅನ್ನು ಸಾವಿರಾರು ಜನರು ಇಷ್ಟಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.