ADVERTISEMENT

ಡ್ರಗ್ಸ್: ಆರ್ಯನ್ ಇನ್ನೂ ಮಗು, ಅವನಿಗೆ ಉಸಿರಾಡಿಸಲು ಬಿಡಿ– ನಟ ಸುನೀಲ್ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2021, 9:38 IST
Last Updated 3 ಅಕ್ಟೋಬರ್ 2021, 9:38 IST
ಸುನೀಲ್ ಶೆಟ್ಟಿ ಹಾಗೂ ಆರ್ಯನ್ ಖಾನ್
ಸುನೀಲ್ ಶೆಟ್ಟಿ ಹಾಗೂ ಆರ್ಯನ್ ಖಾನ್   

ಮುಂಬೈ: ಮುಂಬೈನ ತೀರ ಪ್ರದೇಶದ ಐಷಾರಾಮಿ ‘ಕ್ರೂಸ್’ಹಡಗಿನಲ್ಲಿ ನಡೆದಿದ್ದ ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇತರ ಏಳು ಜನರನ್ನುರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಭಾನುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ವಿಚಾರ ಇಂದು ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಹುಟ್ಟಿಹಾಕಿದೆ. ಆರ್ಯನ್ ವಿಚಾರವಾಗಿ ನೇರವಾಗಿ ಅವರ ತಂದೆ ಶಾರುಖ್ ಖಾನ್ ಅವರನ್ನು ಎಳೆ ತಂದಿರುವ ಅನೇಕ ನೆಟ್ಟಿಗರು, ಮಗನನ್ನು ಬೆಳೆಸಿರುವ ರೀತಿ ಇದೇನಾ? ಎಂದು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ, ‘ಎನ್‌ಸಿಬಿ ಯಾವುದೇ ಸ್ಥಳದಲ್ಲಿ ದಾಳಿ ಮಾಡಿದಾಗ ಮೊದಲು ಕೂಲಂಕುಷವಿಚಾರಣೆ ಮಾಡುತ್ತದೆ. ಅದೇ ರೀತಿ ಆರ್ಯನ್‌ನ್ನು ವಿಚಾರಣೆ ಮಾಡುತ್ತಿದ್ದಾರೆ. ಆರ್ಯನ್ ಇನ್ನು ಮಗು. ಅವನಿಗೆ ಉಸಿರಾಡಿಸಲು ಬಿಡಿ’ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ’ತನಿಖೆ ನಡೆದು ನಿಜವಾದ ವಿಚಾರ ಹೊರ ಬರಲಿ. ಅಲ್ಲಿವರೆಗೆ ಸಮಾಧಾನದಿಂದಿರಿ’ಎಂದು ಅವರು ಹೇಳಿದ್ದಾರೆ.

ADVERTISEMENT

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆಆರ್ಯನ್ ಖಾನ್, ಮುನ್‌ಮುನ್ ದಮೇಚಾ, ನೂಪೂರ್ ಸಾರಿಕಾ, ಇಸ್‌ಮಿತ್ ಸಿಂಗ್, ಮೋಹಕ್ ಜೆಸ್ವಾಲ್, ವಿಕ್ರಾಂತ್ ಚೊಕ್ಕರ್, ಗೋಮಿತ್ ಚೋಪ್ರಾ, ಅರ್ಬಾಜ್ ಮರ್ಚಂಟ್ ಎನ್ನುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.

ಹೆಚ್ಚಿನ ವಿಚಾರಣೆಗಾಗಿ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ.

ಹಡಗಿನ ಮೇಲೆ ದಾಳಿ ನಡೆದಿದ್ದಾಗ ಕೋಕೆನ್, ಚರಸ್, ಎಂಡಿಎಂ ಹಾಗೂ ಎಕ್‌ಸ್ಟಾಸಿ ಎಂಬ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.

ಪಾರ್ಟಿಯಲ್ಲಿ ಡ್ರಗ್ಸ್‌ ಬಳಕೆ ಮಾಡುತ್ತಿರುವ ಮಾಹಿತಿಯನ್ನು ಆಧರಿಸಿ ಶನಿವಾರ ರಾತ್ರಿ ಮಹಾರಾಷ್ಟ್ರದ ಎನ್‌ಸಿಬಿ ಅಧಿಕಾರಿಗಳು ಪ್ರಯಾಣಿಕರ ‘ಕ್ರೂಸ್‌‘ ಹಡಗಿನ ಮೇಲೆ ದಾಳಿ ನಡೆಸಿದ್ದರು.

ನೂರಾರು ಮಂದಿ ಪ್ರಯಾಣಿಕರಿದ್ದ ಹಡಗು ಗೋವಾ ಕಡೆಗೆ ಸಾಗುವುದಿತ್ತು. ಹಡಗಿನಲ್ಲಿ ಪಾರ್ಟಿ ನಡೆಯುತ್ತಿರುವ ಮಾಹಿತಿಯನ್ನು ಆಧರಿಸಿಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡವು ಹಡಗಿನಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಹಡಗಿನಲ್ಲಿ ಆರ್ಯನ್ ಖಾನ್ ಕೂಡ ಪತ್ತೆಯಾಗಿದ್ದರು.

ಕೆಲವು ಪ್ರಯಾಣಿಕರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಯಾವುದೇ ಪ್ರಯಾಣಿಕರಿಗೆ ಹಡಗಿನಿಂದ ಹೊರಹೋಗಲು ಅವಕಾಶ ನೀಡಿಲ್ಲ, ಹಾಗೇ ಆರ್ಯನ್ ಖಾನ್ ಅವರನ್ನು ಕೂಡ ವಿಚಾರಣೆ ನಡೆಸಲಾಗಿದೆ. ಆದರೆ, ಅವರು ಡ್ರಗ್ಸ್ ಬಳಕೆ ಮಾಡಿದ್ದರೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.