ADVERTISEMENT

ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್​ಗೆ 55ನೇ ಹುಟ್ಟುಹಬ್ಬದ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2022, 5:29 IST
Last Updated 6 ಜನವರಿ 2022, 5:29 IST
ಎ. ಆರ್. ರೆಹಮಾನ್
ಎ. ಆರ್. ರೆಹಮಾನ್   

ಮುಂಬೈ: ಸಂಗೀತ ಸಂಯೋಜಕ, ಗಾಯಕ ಎ. ಆರ್. ರೆಹಮಾನ್ ಅವರಿಗೆ ಇಂದು (ಗುರುವಾರ) 55ನೇ ಹುಟ್ಟುಹಬ್ಬದ ಸಂಭ್ರಮ. ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಿಗೆ ಸಂಗೀತ ಸಂಯೋಜನೆ, ನಿರ್ದೇಶನದ ಜತೆಗೆ ಸಂಗೀತ ಸಾಹಿತ್ಯ ಕೂಡಾ ಬರೆದು ಸೈ ಎನಿಸಿಕೊಂಡಿದ್ದಾರೆ ರೆಹಮಾನ್.

ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿದ್ದ ಆರ್.ಕೆ.ಶೇಖರ್ ಅವರ ಪುತ್ರ ದಿಲೀಪ್ ಕುಮಾರ್, ರೆಹಮಾನ್ ಆಗಿ ಬೆಳೆದು ಸಂಗೀತ ಮಾಂತ್ರಿಕ ಎಂದು ಖ್ಯಾತಿ ಪಡೆದಿದ್ದಾರೆ.

ರೆಹಮಾನ್, ಮಾಸ್ಟರ್ ಧನರಾಜ್ ಅವರಿಂದ ಸಂಗೀತ ಶಿಕ್ಷಣ ಪಡೆದಿದ್ದಾರೆ. 11ನೇ ವಯಸ್ಸಿನಲ್ಲಿ ರೆಹಮಾನ್ ತನ್ನ ಬಾಲ್ಯದ ಸ್ನೇಹಿತ ಶಿವಮಣಿ ಅವರಿಂದ ಕೀಬೋರ್ಡ್ ನುಡಿಸುವುದನ್ನು ಕಲಿತುಕೊಂಡರು. ಲಂಡನ್‌ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನಿಂದ ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ. ಬಳಿಕ ಅವರು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಪಡೆದಿದ್ದಾರೆ.

ADVERTISEMENT

1992ರಲ್ಲಿ ನಿರ್ದೇಶಕ ಮಣಿರತ್ನಂ ಅವರು ‘ರೋಜಾ’ ಚಿತ್ರಕ್ಕೆ ಸಂಗೀತ ಸಂಯೋಜಿಸಲು ರೆಹಮಾನ್ ಅವರನ್ನು ಆಹ್ವಾನಿಸಿದ್ದರು. ಈ ಚಿತ್ರ ಮ್ಯೂಸಿಕಲ್ ಹಿಟ್ ಆಗಿತ್ತು. ಅಲ್ಲದೆ ಈ ಚಿತ್ರದಿಂದಲ್ಲೇ ರೆಹಮಾನ್‌ಗೆ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿತ್ತು.

1997ರಲ್ಲಿ ದೇಶದ 50ನೇ ಸ್ವಾತಂತ್ರ್ಯೋತ್ಸವದಂದು ‘ವಂದೇ ಮಾತರಂ’ ಆಲ್ಬಂ ಅನ್ನು ತಯಾರಿಸಿದ್ದರು. ಅದು ಅದ್ಭುತ ಯಶಸ್ಸನ್ನು ಕಂಡಿತು. ರೆಹಮಾನ್‌ ಅವರಿಗೆ ಈವರೆಗೆ ಹಲವು ಫಿಲ್ಮ್‌ಫೇರ್, ಆರು ರಾಷ್ಟ್ರೀಯ, ಎರಡು ಅಕಾಡೆಮಿ, ಒಂದು ಗೋಲ್ಡನ್ ಗ್ಲೋಬ್ ಹಾಗೂ ಎರಡು ಗ್ರ್ಯಾಮಿ ಪ್ರಶಸ್ತಿಗಳು ಸಂದಿವೆ.

ರೆಹಮಾನ್ ಅವರಿಗೆ 2000ರಲ್ಲಿ ಪದ್ಮಶ್ರೀ ಮತ್ತು 2010ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.