ಬೆಂಗಳೂರು: ಕಿರುತೆರೆಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಚಂದು–ಚಿನ್ನು ಜೋಡಿ, ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡೇ ಹಸೆಮಣೆ ಏರಿದ್ದಾರೆ.
ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಘೋಷಿಸಿದ್ದು, ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಷರತ್ತುಬದ್ಧ ಅನುಮತಿ ನೀಡಿದೆ. ಇದನ್ನೆಲ್ಲ ಅನುಸರಿಸಿಯೇ,ಸಹಕಾರ ನಗರದಲ್ಲಿರುವ ಚಂದನ್ ಅವರ ಮನೆಯಲ್ಲೇ ಸರಳವಾಗಿ ಮದುವೆ ನಡೆದಿದೆ. ಮಾಸ್ಕ್ ಧರಿಸಿಕೊಂಡೇ ಚಂದನ್ ಕವಿತಾಗೆ ತಾಳಿ ಕಟ್ಟಿದ್ದಾರೆ. ಕವಿತಾ ಅವರೂ ಮಾಸ್ಕ್ ಧರಿಸಿದ್ದರೂ ಅವರ ಭಾವನೆಯನ್ನು ಕಣ್ಣಿನಲ್ಲೇ ವ್ಯಕ್ತಪಡಿಸಿದ್ದಾರೆ. ಈ ಫೊಟೊವನ್ನು ಚಂದನ್ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ‘ಮನೆ ಮದುವೆ, ಮದುವೆ ಮನೆ. ಅದ್ಧೂರಿಯಾಗಿಲ್ಲ ಆದರೆ ಬಹಳ ಪ್ರೀತಿ ಹಾಗೂ ಸಂತೋಷದ ಗಳಿಗೆ ಇದು’ ಎಂದು ಚಂದನ್ ಬರೆದಿದ್ದಾರೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿ ಹಿಟ್ ಆದ ಬಳಿಕ ಚಂದನವನಕ್ಕೆ ಕಾಲಿಟ್ಟ ಚಂದನ್, ಪರಿಣಯ, ಲವ್ ಯೂ ಆಲಿಯಾ, ಪ್ರೇಮ ಬರಹ ಚಿತ್ರಗಳಲ್ಲಿ ನಟಿಸಿದ್ದರು. ಕವಿತಾ ಅವರೂ ಶ್ರೀನಿವಾಸ ಕಲ್ಯಾಣ ಚಿತ್ರದ ಮುಖಾಂತರ ಚಂದನವನಕ್ಕೆ ಕಾಲಿಟ್ಟು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರ್‌ಬಲ್ ಚಿತ್ರಗಳಲ್ಲಿ ನಟಿಸಿದ್ದರು. ಧಾರಾವಾಹಿಯಲ್ಲಿ ಪತಿ–ಪತ್ನಿಯಾಗಿ ನಟಿಸಿದ್ದ ಈ ಜೋಡಿ ಇಂದು ನಿಜಜೀವನದಲ್ಲೂ ಸತಿಪತಿಯಾಗಿದ್ದಾರೆ. ಕಳೆದ ಏಪ್ರಿಲ್ 1ರಂದು ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಆದರೆ ಮದುವೆ ದಿನಾಂಕದ ಬಗ್ಗೆ ಅವರು ಅಧಿಕೃತ ಘೋಷಣೆ ಮಾಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.