ವಾರದ ಹಿಂದೆಯಷ್ಟೇ ಅಮೆಜಾನ್ ಪ್ರೈಂ ತನ್ನ ಅತ್ಯಂತ ಯಶಸ್ವಿ ವೆಬ್‌ಸರಣಿ ರಾಜ್ ಮತ್ತು ಡಿ.ಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್’ ಎರಡನೇ ಭಾಗದ ಟ್ರೇಲರ್ ಬಿಡುಗಡೆಗೊಳಿಸಿತು. ಈ ಟ್ರೇಲರ್ ಬಿಡುಗಡೆಯಾದ ನಾಲ್ಕೇ ದಿನಕ್ಕೆ ಯೂಟ್ಯೂಬ್‌ನಲ್ಲಿ 4 ಕೋಟಿ ವ್ಯೂವ್ಸ್ ಪಡೆದಿತ್ತು. ಜೂನ್ 4ರಂದು ಬಿಡುಗಡೆಯಾಗಲಿರುವ ಈ ವೆಬ್‌ಸರಣಿಗೆ ಜನ ಎಷ್ಟರ ಮಟ್ಟಿಗೆ ಕಾಯುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು. ಇಷ್ಟೊಂದು ನಿರೀಕ್ಷೆಯ ಮನೋಜ್ ಬಾಜಪೇಯಿ, ಪ್ರಿಯಾಮಣಿ ಹಾಗೂ ಸಮಂತಾ ಅಭಿನಯದ ಈ ವೆಬ್‌ಸರಣಿಗೆ ಇದೀಗ ನಿಷೇಧದ ಭೀತಿ ಎದುರಾಗಿದೆ.
‘ದಿ ಫ್ಯಾಮಿಲಿ ಮ್ಯಾನ್’ 2ನೇ ಭಾಗದ ವೆಬ್‌ಸರಣಿಯಲ್ಲಿ ಈಲಂ ತಮಿಳರನ್ನು ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ಬಿಂಬಿಸಲಾಗಿದೆ. ಈ ಕಾರಣದಿಂದ ಈ ವೆಬ್‌ಸರಣಿಯ ಬಿಡುಗಡೆಯನ್ನು ತಕ್ಷಣವೇ ತಡೆಯಬೇಕು ಅಥವಾ ನಿಷೇಧಿಸಬೇಕು’ ಎಂದು ಕೋರಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಜೊತೆಗೆ ತಮಿಳುನಾಡಿನ ಹಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಈ ವೆಬ್‌ಸರಣಿಯನ್ನು ವಿರೋಧಿಸಿವೆ.
‘ಈ ವೆಬ್‌ಸರಣಿಯಲ್ಲಿ ಖಂಡನಾರ್ಹ, ಅಸಂಬದ್ಧ ಹಾಗೂ ದ್ವೇಷಪೂರ್ಣವಾದ ವಿಷಯಗಳಿದ್ದು, ಶ್ರೀಲಂಕಾದಲ್ಲಿ ಈಲಂ ತಮಿಳರ ಐತಿಹಾಸಿಕ ಸಂಘರ್ಷಕ್ಕೆ ಕಳಂಕ ತರುವ ಹಾಗೂ ಅದನ್ನು ತಿರುಚುವ ಗುರಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಟ್ರೇಲರ್ ಬಿಡುಗಡೆಗೊಳಿಸಲಾಗಿದೆ’ ಎಂದು ತಮಿಳುನಾಡು ಐ.ಟಿ ಸಚಿವ ಟಿ.ಮನೋ ತಂಗರಾಜ್ ಹೇಳಿದ್ದಾರೆ.
‘ಈ ಸರಣಿಯು ಈಲಂ ತಮಿಳರ ಭಾವನೆಗಳಿಗೆ ಧಕ್ಕೆ ತಂದಿರುವುದಲ್ಲದೆ ತಮಿಳುನಾಡು ಜನತೆಯ ಭಾವನೆಗಳನ್ನೂ ನೋಯಿಸಿದೆ. ಈ ಸರಣಿಯ ಪ್ರಸಾರಕ್ಕೆ ಅವಕಾಶ ನೀಡಿದರೆ, ರಾಜ್ಯದಲ್ಲಿನ ಸಾಮರಸ್ಯಕ್ಕೆ ಘಾತಕವಾಗಲಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿರುವ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರು, ‘ಟ್ರೇಲರ್‌ನಲ್ಲಿರುವ ಕೆಲ ದೃಶ್ಯಗಳನ್ನಷ್ಟೇ ಆಧಾರವಾಗಿರಿಸಿಕೊಂಡು ಕೆಲ ಊಹೆ ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸಲಾಗಿದೆ. ಈ ಸರಣಿಯಲ್ಲಿನ ಬಹುತೇಕ ಪ್ರಮುಖ ಕಲಾವಿದರು ಹಾಗೂ ಕ್ರಿಯೇಟಿವ್ ಮತ್ತು ಚಿತ್ರಕತೆ ತಂಡದಲ್ಲಿ ಇರುವವರು ತಮಿಳುನಾಡಿನವರು. ತಮಿಳು ಭಾಷಿಗರ ಭಾವನೆ ಹಾಗೂ ಅಲ್ಲಿನ ಸಂಸ್ಕೃತಿಯ ಬಗ್ಗೆ ನಮಗೆ ಅರಿವಿದೆ. ಜೊತೆಗೆ ತಮಿಳುನಾಡಿನ ಜನರ ಬಗ್ಗೆ ಅಪಾರ ಗೌರವವಿದೆ. ಈ ಸರಣಿಗಾಗಿ ಹಲವು ವರ್ಷಗಳ ಶ್ರಮವನ್ನು ಹಾಕಿದ್ದೇವೆ. ಈ ಚಿತ್ರಕತೆಯನ್ನು ವೆಬ್‌ಸರಣಿಯಾಗಿ ಪ್ರೇಕ್ಷಕರ ಮುಂದೆ ತರಲು ಹಲವು ಸಂಕಷ್ಟಗಳನ್ನು ಎದುರಿಸಿದ್ದೇವೆ. ಈ ವೆಬ್‌ಸರಣಿ ಬಿಡುಗಡೆಗೆ ಕಾಯಿರಿ ಹಾಗೂ ಅದನ್ನು ವೀಕ್ಷಿಸಿ. ಇದನ್ನು ವೀಕ್ಷಿಸಿದ ಬಳಿಕ ಖಂಡಿತವಾಗಿಯೂ ಮೆಚ್ಚಿಕೊಳ್ಳುತ್ತೀರಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.