ಬೆಂಗಳೂರು: 'ವಿಂಡ್ಸ್ ಆಫ್ ಸಂಸಾರ'ದ ಸಂಗೀತ ಸುಧೆ ಕೇಳುಗರ ಕಲ್ಪನೆಗಳಲ್ಲಿ ಹಲವು ಕಥೆಗಳನ್ನು ತೆರೆದಿಟ್ಟಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ರಿಕಿ ಕೇಜ್ ಸಂಯೋಜನೆಯ ಆ ಆಲ್ಬಂಗೆ 2015ರಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಇದೀಗ ಮತ್ತೊಮ್ಮೆ ರಿಕಿ ಗ್ರ್ಯಾಮಿ ಅಂಗಳದಲ್ಲಿ ನಗೆ ಬೀರಿದ್ದಾರೆ. ಅವರ 'ಡಿವೈನ್ ಟೈಡ್ಸ್' ಆಲ್ಬಂಗೆ 64ನೇ ಗ್ರ್ಯಾಮಿ ಪ್ರಶಸ್ತಿ ಸಂದಿದೆ.
ಖ್ಯಾತ ರಾಕ್ ಸಂಗೀತಗಾರ ಸ್ಟೂವರ್ಟ್ ಕೋಪ್‌ಲ್ಯಾಂಡ್ ಅವರೊಂದಿಗೆ ರಿಕಿ ಕೇಜ್ ರೂಪಿಸಿರುವ ಸಂಗೀತ ಸಂಚಯ ಡಿವೈನ್ ಟೈಡ್ಸ್‌ನಲ್ಲಿ 9 ಹಾಡುಗಳಿವೆ. ಈ ಹಾಡುಗಳ ಪೈಕಿ ಸುಮಾರು ನಾಲ್ಕು ಹಾಡುಗಳಲ್ಲಿ ಕರ್ನಾಟಕದ ಹಲವು ಪ್ರತಿಭೆಗಳು ಕೆಲಸ ಮಾಡಿದ್ದಾರೆ. ಬೆಂಗಳೂರಿನ ವಾರಿಜಾಶ್ರೀ ಅವರ ಕೊಳಲು ಮತ್ತು ಗಾನ ಎರಡನ್ನೂ ಈ ಆಲ್ಬಂನಲ್ಲಿ ಆಲಿಸಬಹುದಾಗಿದೆ.
'ಬೆಸ್ಟ್ ನ್ಯೂ ಏಜ್ ಆಲ್ಬಂ' ವಿಭಾಗದಲ್ಲಿ ರಿಕಿ ಮತ್ತು ಸ್ಟೂವರ್ಟ್ ಗ್ರ್ಯಾಮಿ ಪ್ರಶಸ್ತಿಯ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ರಿಕಿ ಸಭಿಕರಿಗೆ 'ನಮಸ್ತೆ' ಮಾಡುವ ಮೂಲಕ ವಂದನೆ ಸಲ್ಲಿಸಿದರು. ಅವರು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಎರಡನೇ ಗ್ರ್ಯಾಮಿ ಪ್ರಶಸ್ತಿಯ ಕುರಿತು ಹಂಚಿಕೊಂಡಿದ್ದಾರೆ.
'ನಮ್ಮ ಡಿವೈನ್ ಟೈಡ್ಸ್ ಆಲ್ಬಂಗೆ ಇಂದು ಗ್ರ್ಯಾಮಿ ಪ್ರಶಸ್ತಿ ಸಂದಿದೆ. ಕೃತಜ್ಞತೆಯು ಮನ ತುಂಬಿದೆ ಮತ್ತು ನನ್ನ ಪಕ್ಕದಲ್ಲೇ ನಿಂತಿರುವ ಜೀವಂತ ದಂತಕಥೆ ಸ್ಟೂವರ್ಟ್ ಕೋಪ್‌ಲ್ಯಾಂಡ್ ಮೇಲೆ ಅಪಾರ ಪ್ರೀತಿ ಇದೆ. ಇದು ನನಗೆ ಎರಡನೇ ಗ್ಯಾಮಿ ಪ್ರಶಸ್ತಿಯಾದರೆ, ಸ್ಟೂವರ್ಟ್‌ಗೆ 6ನೇ ಪ್ರಶಸ್ತಿಯಾಗಿದೆ. ನನ್ನೊಂದಿಗೆ ಸಹಭಾಗಿತ್ವ ವಹಿಸಿದವರು, ನನ್ನನ್ನು ಸಂಗೀತದ ಕೆಲಸಗಳಲ್ಲಿ ತೊಡಗಿಸಿಕೊಂಡವರು ಹಾಗೂ ನನ್ನ ಸಂಗೀತದ ಕೇಳುಗರಿಗೆ ಅಂತರಾಳದಿಂದ ಧನ್ಯವಾದಗಳು. ನಿಮ್ಮಿಂದಾಗಿಯೇ ನನ್ನ ಅಸ್ತಿತ್ವವೂ.... ' ಎಂದು ರಿಕಿ ಕೇಜ್ ಹಂಚಿಕೊಂಡಿದ್ದಾರೆ.
ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನವಾದಾಗಲೇ ನ್ಯೂಯಾರ್ಕ್ ಸಿಟಿಯಲ್ಲಿ ಭಾರತದ ಕಾನ್ಸುಲೇಟ್ ಮತ್ತು 'ಏಷಿಯಾ ಇನಿಶಿಯೇಟಿವ್ಸ್'ನಲ್ಲಿನ ರಿಕಿ ಅವರ ಸ್ನೇಹಿತರು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಡಿವೈನ್ ಟೈಡ್ಸ್ ನಾಮನಿರ್ದೇಶನ ಮತ್ತು ಭಾರತದ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಕಾರ್ಯಕ್ರಮ ನಡೆದಿತ್ತು. ವಿಶ್ವಸಂಸ್ಥೆಯ ಪ್ರತಿನಿಧಿಗಳು, ಎನ್‌ಜಿಒಗಳು, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಸಂಗೀತ ಕ್ಷೇತ್ರದ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ಮಾರ್ಚ್ 22ರಂದು ರಿಕಿ ಹಂಚಿಕೊಂಡಿದ್ದರು.
ಸುಮಾರು 20 ರಾಷ್ಟ್ರಗಳಲ್ಲಿ ರಿಕಿ ಕೇಜ್ ನೂರಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿಶ್ವಸಂಸ್ಥೆಯ ಗ್ಲೋಬಲ್ ಹ್ಯುಮ್ಯಾನಿಟೇರಿಯನ್ ಆರ್ಟಿಸ್ಟ್ ಪ್ರಶಸ್ತಿಯೂ ಅವರಿಗೆ ಸಂದಿದ್ದು, ಅವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಗಳಲ್ಲಿಯೂ ಸಕ್ರಿಯರಾಗಿದ್ದಾರೆ.
ಸ್ಟೂವರ್ಟ್ ಅವರು ಬ್ರಿಟಿಷ್ ರಾಕ್ ಬ್ಯಾಂಡ್ 'ದಿ ಪೊಲೀಸ್' ಸಂಸ್ಥಾಪಕರು ಮತ್ತು ಡ್ರಮ್ಮರ್ ಆಗಿದ್ದಾರೆ. ಲಹರಿ ಮ್ಯೂಸಿಕ್ ಕಂಪನಿಯು ಡಿವೈನ್ ಟೈಡ್ಸ್ ಆಲ್ಬಂ ಹೊರ ತಂದಿದೆ. ಅದರಲ್ಲಿ 9 ಹಾಡುಗಳು ಮತ್ತು 8 ಮ್ಯೂಸಿಕ್ ವಿಡಿಯೊಗಳಿವೆ. ಭಾರತದ ಹಿಮಾಲಯ ಪ್ರದೇಶಗಳಿಂದ ಹಿಡಿದು ಸ್ಪೇನ್‌ನ ಅರಣ್ಯಗಳ ವರೆಗೂ ಹಲವು ಭಾಗಗಳಲ್ಲಿ ಮ್ಯೂಸಿಕ್ ವಿಡಿಯೊಗಾಗಿ ಚಿತ್ರೀಕರಣ ನಡೆಸಲಾಗಿದೆ.
ರಿಕಿ ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೂ ಸಂಗೀತ ಸಂಯೋಜನೆಗೆ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಿದ್ದಾರೆ.
ಲಾಸ್ ವೆಗಾಸ್‌ನಲ್ಲಿ ಆಯೋಜಿಸಲಾದ ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ ಎ.ಆರ್.ರಹಮಾನ್ ಸಹ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.