ADVERTISEMENT

‘ಐಸಿ–814–ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ:ಕಾರ್ಯಕ್ರಮ ಮುಖ್ಯಸ್ಥರಿಗೆ ಸಮನ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಂಡಿರುವ ಐಸಿ–814–ದಿ–ಕಂದಹಾರ್‌ ಹೈಜಾಕ್‌ ವೆಬ್‌ಸರಣಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:49 IST
Last Updated 2 ಸೆಪ್ಟೆಂಬರ್ 2024, 15:49 IST
ಐಸಿ–814– ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ
ಐಸಿ–814– ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ   

ನವದೆಹಲಿ: ಒಟಿಟಿ ಫ್ಲಾಟ್‌ಫಾರ್ಮ್‌ ‘ನೆಟ್‌ಫ್ಲಿಕ್ಸ್‌’ನಲ್ಲಿ ಪ‍್ರಸಾರವಾಗುತ್ತಿರುವ ‘ಐಸಿ–814– ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿಯಲ್ಲಿ ಅಪಹರಣಕಾರರನ್ನು ಬಿಂಬಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು(ಐ.ಬಿ) ಕಾರ್ಯಕ್ರಮ ಮುಖ್ಯಸ್ಥರಿಗೆ ಸಮನ್ಸ್‌ ನೀಡಿದೆ.

ಮೂಲಗಳ ಪ್ರಕಾರ, ‘ಕೆಲವೊಂದು ವಿವಾದಾಸ್ಪದ ವಿಷಯಗಳ ಕುರಿತಂತೆ ವಿವರಣೆ ನೀಡುವಂತೆ ಕೋರಿ ನೆಟ್‌ಫ್ಲಿಕ್ಸ್‌ನ ಅಧಿಕಾರಿಗಳಿಗೆ ಸಚಿವಾಲಯವು ಸೂಚನೆ ನೀಡಿದೆ’ ಎಂದು ತಿಳಿದುಬಂದಿದೆ.

ಕಾಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನವನ್ನು ಅಪಹರಣಕಾರರು ‘ಮಾನವೀಯ’ ದೃಷ್ಟಿಯಿಂದ ಅಪಹರಿಸಿದ್ದರು ಎಂದು ವೆಬ್‌ಸರಣಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿದೆ.

ADVERTISEMENT

‘ವಿಮಾನ ಅಪಹರಿಸಿದವರೆಲ್ಲರೂ ಭಯೋತ್ಪಾದಕರಾಗಿದ್ದರು. ಹೀಗಿದ್ದರೂ, ಕೂಡ ವೆಬ್‌ಸರಣಿಯಲ್ಲಿ ಅಪಹರಣಕಾರರು ‘ಮುಸಲ್ಮಾನರು’ ಎಂಬ ಗುರುತನ್ನು ಮರೆಮಾಚಲಾಗಿದೆ. ಚಲನಚಿತ್ರ ನಿರ್ಮಾಪಕ ಅನುಭವ್‌ ಸಿನ್ಹಾ ಅವರು ಕಲಾವಿದರ ಪಾತ್ರಗಳಲ್ಲಿ ಮುಸ್ಲಿಮರೇತರ ಹೆಸರುಗಳನ್ನು ಹೆಚ್ಚಿಸಿ ಆ ಮೂಲಕ ಅವರ ಅಪರಾಧ ಕೃತ್ಯವನ್ನು ಮರೆಮಾಚಿದ್ದಾರೆ’ ಎಂದು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ‘ಎಕ್ಸ್‌’ ಮೂಲಕ ಪ್ರಶ್ನಿಸಿದ್ದಾರೆ.

‘ದಶಕದ ಬಳಿಕವೂ ಐಸಿ–814 ವಿಮಾನವನ್ನು ಹಿಂದೂಗಳೇ ಅಪಹರಿಸಿದ್ದರು ಎಂದು ಜನರು ಭಾವಿಸುತ್ತಾರೆ. ಪಾಕಿಸ್ತಾನದ ಮುಸ್ಲಿಂ ಭಯೋತ್ಪಾದಕರು ನಡೆಸಿದ ಎಲ್ಲ ಕೃತ್ಯಗಳನ್ನು ಎಡಪಂಥೀಯ ನಿಲುವುಗಳು ಸಂಪೂರ್ಣವಾಗಿ ಮುಚ್ಚಿಹಾಕಿದೆ’ ಎಂದು ಕಿಡಿಕಾರಿದ್ದಾರೆ.

‘ದೀರ್ಘಾವಧಿಯಲ್ಲಿ ಭಾರತದ ಭದ್ರತೆಯನ್ನು ದುರ್ಬಲಗೊಳಿಸಲಿದ್ದು, ಧಾರ್ಮಿಕ ಅಪರಾಧ ಕೃತ್ಯಗಳನ್ನು ಬೇರೆಡೆಗೆ ವರ್ಗಾಯಿಸುವ ಸಾಧ್ಯತೆಯಿದೆ’ ಎಂದಿದ್ದಾರೆ.

ಒಮರ್ ಅಬ್ದುಲ್ಲಾ ಕಿಡಿ: ಬಿಜೆಪಿಯ ನಿಲುವಿಗೆ ಕಿಡಿಕಾರಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ‘ಕಾಶ್ಮೀರ್‌ ಫೈಲ್ಸ್‌’ ಸಿನಿಮಾದಲ್ಲಿ ಸುಳ್ಳನ್ನೇ ಸತ್ಯವೆಂದು ಬಿಂಬಿಸಿದವರು,‘ಐಸಿ–814 ಕಂದಹಾರ್‌’ ನೆಟ್‌ಫ್ಲಿಕ್ಸ್‌ ಸರಣಿಯಲ್ಲಿ ನಡೆದ ಘಟನೆಗಳನ್ನು ಬಿಂಬಿಸಿರುವ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ. ಅವರೆಲ್ಲರೂ, ಈಗ ಏಕಾಏಕಿ ಸೂಕ್ಷ್ಮತೆ ಹಾಗೂ ಸತ್ಯಾಸತ್ಯತೆ ಬಯಸುತ್ತಿದ್ದಾರೆ’ ಎಂದಿದ್ದಾರೆ.

ವೆಬ್‌ ಸರಣಿಯಲ್ಲಿ ವಿಜಯ್‌  ವರ್ಮಾ, ಪಂಕಜ್‌ ಕುಮಾರ್‌, ದಿಯಾ ಮಿರ್ಜಾ, ನಾಸೀರುದ್ದೀನ್‌ ಶಾ, ಅರವಿಂದ್‌ ಸ್ವಾಮಿ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.