ನವದೆಹಲಿ: ಕನ್ನಡ, ಹಿಂದಿ ಸಹಿತ ವಿವಿಧ ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಹಾಡಿರುವ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (53) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಕುಮಾರ್ ಕುನ್ನತ್ ಅವರು ಕೋಲ್ಕತ್ತದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಹಾಡಿದ್ದರು. ಆದರೆ, ಹೋಟೆಲ್ ತಲುಪಿದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಕೆಕೆ’ ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನ ನೋವುಂಟು ಮಾಡಿದೆ.ಎಲ್ಲ ವಯಸ್ಸಿನವರಭಾವನೆಗಳಿಗೆ ಮುಟ್ಟುವಂತಹ ಹಾಡುಗಳನ್ನು ಹಾಡಿದ್ದಾರೆ.ಕೆಕೆ ಅವರನ್ನು ಹಾಡುಗಳ ಮೂಲಕ ನಾವು ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ಕೆಕೆ’ ಬಹಳ ಪ್ರತಿಭಾವಂತ ಮತ್ತು ಬಹುಮುಖ ಗಾಯಕರಾಗಿದ್ದರು. ಅವರ ಅಕಾಲಿಕ ನಿಧನವು ಅತ್ಯಂತ ದುಃಖಕರ ಮತ್ತು ಭಾರತೀಯ ಸಂಗೀತಕ್ಕೆ ಅಪಾರ ನಷ್ಟವಾಗಿದೆ. ತಮ್ಮ ಪ್ರತಿಭಾನ್ವಿತ ಕಂಠದಿಂದ ಅವರು ಅಸಂಖ್ಯಾತ ಸಂಗೀತ ಪ್ರಿಯರ ಮನಸ್ಸಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಶಾಂತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
‘ಕೆಕೆ’ ಅವರ ನಿಧನದ ಬಗ್ಗೆ ತಿಳಿದು ಅತ್ಯಂತ ದುಃಖ ಮತ್ತು ಆಘಾತವಾಗಿದೆ. ಎಂತಹ ನಷ್ಟ! ಓಂ ಶಾಂತಿ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
‘ಕೋಲ್ಕತ್ತಾದಲ್ಲಿ ಪ್ರದರ್ಶನ ನೀಡುತ್ತಿರುವಾಗ ಅನಾರೋಗ್ಯಕ್ಕೆ ಒಳಗಾದ ಕೆಕೆ ನಿಧನರಾದ ಬಗ್ಗೆ ಕೇಳುತ್ತಿರುವುದುದುರಂತದ ಸಂಗತಿಯಾಗಿದೆ. ಜೀವನವು ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಕೃಷ್ಣಕುಮಾರ್ ಕುನ್ನತ್ ಅವರು ತಮಿಳು, ತೆಲುಗು, ಮಲಯಾಳ, ಮರಾಠಿ, ಬೆಂಗಾಲಿ ಭಾಷೆಗಳಲ್ಲೂ ಹಾಡಿದ್ದಾರೆ. ಅವರು ‘ಕೆಕೆ’ ಎಂದೇ ಖ್ಯಾತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.