ADVERTISEMENT

ಇತಿಹಾಸ ಹೇಳುವ ನವರಂಗ್ ಚಿತ್ರಮಂದಿರ ನವೀಕರಣ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 19:45 IST
Last Updated 9 ಸೆಪ್ಟೆಂಬರ್ 2019, 19:45 IST
ಡಾ. ರಾಜ್‌ಕುಮಾರ್‌ ಅವರು ‘ಡಿಗ್ನಿಟರಿ ಶೋ’ ನೋಡಲು ನವರಂಗ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಕ್ಷಣ
ಡಾ. ರಾಜ್‌ಕುಮಾರ್‌ ಅವರು ‘ಡಿಗ್ನಿಟರಿ ಶೋ’ ನೋಡಲು ನವರಂಗ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಕ್ಷಣ   

ಎರಡನೆಯ ಇನ್ನಿಂಗ್ಸ್‌ಗಾಗಿ ಪ್ರದರ್ಶನ ಸ್ಥಗಿತಗೊಳಿಸಿದ ನವರಂಗ್!

ಹೌದು. ಬೆಂಗಳೂರಿನ ‘ಒಂಟಿ ಪರದೆ ಚಿತ್ರಮಂದಿರಗಳ’ ಕಿರೀಟದಂತೆ ದಶಕಗಳ ಕಾಲ ಮಿನುಗಿದ ರಾಜಾಜಿನಗರದ
ಡಾ. ರಾಜ್‌ಕುಮಾರ್ ರಸ್ತೆಯಲ್ಲಿನ ‘ನವರಂಗ್’ ಚಿತ್ರಮಂದಿರ ತನ್ನ ಮೊದಲನೆಯ ಇನ್ನಿಂಗ್ಸ್ ಮುಗಿಸಿದೆ.
ತನ್ನ 56 ವರ್ಷಗಳ ಸುದೀರ್ಘ ಪಯಣದಲ್ಲಿ ಹಲವಾರು ಕೌತುಕಭರಿತ ಸಂಗತಿಗಳನ್ನು ಅಡಗಿಸಿಕೊಂಡಿರುವ ಈ ಐತಿಹಾಸಿಕ ಸಿನೆಮಾ ಹಾಲ್ ಶೀಘ್ರದಲ್ಲಿಯೇ ಎಲ್ಲಾ ಸೌಲಭ್ಯವಿರುವ ‘ಮಲ್ಟಿಪ್ಲೆಕ್ಸ್’ ಎಂಬ ಹೊಸ ರೂಪದೊಂದಿಗೆತನ್ನ ಎರಡನೆಯ ಇನ್ನಿಂಗ್ಸ್‌ ಆರಂಭಿಸಲಿದೆ.

ದೊಡ್ಡಬಳ್ಳಾಪುರದ ಜವಳಿ ಉದ್ಯಮಿ ಕೆಸಿಎನ್ ಗೌಡ ಅವರು ಸಿಟಿ ಇಂಪ್ರೂವ್‍ಮೆಂಟ್ ಟ್ರಸ್ಟ್ ಬೋರ್ಡ್‌ನ 26 ಸಾವಿರ ಚದರ ಅಡಿಯ ಸಿವಿಕ್ ಅಮೆನಿಟಿಸ್ ನಿವೇಶನವನ್ನು (ಸೈಟ್‍) ಸಾರ್ವಜನಿಕ ಹರಾಜಿನಲ್ಲಿ 1960ರ ಆಸುಪಾಸು ಖರೀದಿಸಿದರು. ಅಂದು ಕನ್ನಡ ಚಿತ್ರರಂಗವನ್ನು ನಿಯಂತ್ರಿಸುತ್ತಿದ್ದ ಗುಜರಾತಿಗಳ ತಂಡವೊಂದು ನಿವೇಶನ ಖರೀದಿಸಿದ ರಾತ್ರಿಯೇ ಗೌಡ ಅವರಿಗೆ ₹1.30 ಲಕ್ಷ ನೀಡಿ ಆ ನಿವೇಶನ ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿತು. ಆದರೆ, ಗೌಡ ಅದಕ್ಕೆ ಒಪ್ಪಲಿಲ್ಲ.

ADVERTISEMENT

ಜೂನ್ 30, 1961ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಬಿ. ಡಿ. ಜತ್ತಿ ಚಿತ್ರಮಂದಿರದ ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು. ಆಗಸ್ಟ 22, 1963ರಂದು ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಚಿತ್ರರಂಗದ ಉದ್ಘಾಟನೆ ಮಾಡಿದರು. ಮಂತ್ರಿಯಾಗಿದ್ದ ಎಂ.ವಿ. ಕೃಷ್ಣಪ್ಪ ಪ್ರೊಜೆಕ್ಟರ್ ಗುಂಡಿ ಒತ್ತುವ ಮೂಲಕ ಮೊದಲ ಚಿತ್ರದ ಮೊದಲ ಆಟಕ್ಕೆ ಚಾಲನೆ ನೀಡಿದರು.
ಡಾ.ರಾಜ್‌ಕುಮಾರ್‌ ಅಭಿನಯದ ‘ವೀರಕೇಸರಿ’ ನವರಂಗ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ.

‘ಆಸ್ಟ್ರೇಲಿಯಾದ ವಾಸ್ತುಶಿಲ್ಪ ತಜ್ಞ ಐಸಾಕ್ ವಿನ್ಸೆಂಟ್ ಚಿತ್ರಮಂದಿರದ ಡಿಸೈನರ್. ಅದು ಕಪ್ಪು-ಬಿಳುಪು ಚಿತ್ರಗಳ ಕಾಲ. ನನ್ನ ತಂದೆ ಚಿತ್ರಮಂದಿರಕ್ಕೆ ಒಂಬತ್ತು ಬಣ್ಣಗಳನ್ನು ಹೊಂದಿರುವ ಹೆಸರು ಇಡಲು ಬಯಸಿದ್ದರು. ಹೀಗಾಗಿ ‘ನವರಂಗ್’ ಹೆಸರನ್ನು ಅಂತಿಮಗೊಳಿಸಿದರು’ ಎಂದು ಚಿತ್ರಮಂದಿರದ ಇಂದಿನ ಮಾಲೀಕರಾದ ಕೆಸಿಎನ್ ಮೋಹನ್ ‘ಮೆಟ್ರೊ’ಗೆ ತಿಳಿಸಿದರು.

‘ಆ ದಿನಗಳಲ್ಲಿ ಮೆಜೆಸ್ಟಿಕ್‍ನಿಂದ ರಾಜಾಜಿನಗರಕ್ಕೆ ಬಸ್ ಸೌಕರ್ಯ ಇರಲಿಲ್ಲ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಕಷ್ಟಪಡಬೇಕಿತ್ತು. ಇದನ್ನು ಮನಗಂಡ ನಮ್ಮ ತಂದೆ ಸರ್ಕಾರದೊಂದಿಗೆ ಮಾತನಾಡಿ ರಾಜಾಜಿನಗರಕ್ಕೆ ಬಸ್ ಸೌಲಭ್ಯ ಒದಗಿಸಿದರು. ನವರಂಗ್‍ನಿಂದಾಗಿ ರಾಜಾಜಿನಗರಕ್ಕೆ ಬಸ್ ಸೌಕರ್ಯ ಬಂದಿತು. ಆ ದಿನಗಳಲ್ಲಿ ತುಮಕೂರು ಕಡೆಯಿಂದ ಬರುವಾಗ ನವರಂಗ್ ತಲುಪಿದರೆ ಬೆಂಗಳೂರಿಗೆ ಬಂದು ಸೇರಿದೆವು ಎಂದೇ ಭಾವಿಸುತ್ತಿದ್ದರು’ ಎಂದು ಮೋಹನ್ ನೆನಪಿಸಿಕೊಳ್ಳುತ್ತಾರೆ.

ಆರಂಭದ ದಿನಗಳಲ್ಲಿ ನವರಂಗ್ ಚಿತ್ರಮಂದಿರದಲ್ಲಿ ತಮಿಳು ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇದನ್ನರಿತ ಗೌಡರು ಮೆಜೆಸ್ಟಿಕ್ ಪ್ರದೇಶದಲ್ಲಿದ್ದ ಗೀತಾ, ಸೂಪರ್ ಹಾಗೂ ಶೀ ಚಿತ್ರಮಂದಿರಗಳನ್ನು ಲೀಸ್‍ಗೆ ಪಡೆದರು. ಆ ಮೂರು ಚಿತ್ರಮಂದಿರಗಳು ನಿರಂತರವಾಗಿ ತಮಿಳು ಚಿತ್ರ ಪ್ರದರ್ಶಿಸುತ್ತಿದ್ದವು.ನಂತರ ಆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ತಮಿಳು ಚಿತ್ರಗಳನ್ನು ನವರಂಗ್‍ದಲ್ಲಿ ಪ್ರದರ್ಶಿಸುವ ಏರ್ಪಾಡು ಮಾಡಲಾಯಿತು. ಚಿತ್ರಮಂದಿರದ ಮುಂದಿನ ರಸ್ತೆಗೆ ‘ಡಾ. ರಾಜ್‌ಕುಮಾರ್ ರಸ್ತೆ’ ಎಂದು ನಾಮಕರಣವಾದ ನಂತರ ತಮಿಳು ಚಿತ್ರಗಳ ಪ್ರದರ್ಶನ ನಿಲ್ಲಿಸಲಾಯಿತು.

ಬಹುಬೇಡಿಕೆಯ ಚಿತ್ರಮಂದಿರ

‘ಯಾವುದೇ ಚಿತ್ರ ನೂರುದಿನ ಪ್ರದರ್ಶನ ಕಂಡ ನಂತರ ಅದನ್ನು ತೆಗೆಯಲು ಒತ್ತಡಗಳಿರುತ್ತಿದ್ದವು. ಮಾಲೀಕರು ಬ್ಲಾಕ್‍ನಲ್ಲಿ ಟಿಕೆಟ್ ಮಾರಿ ಹಣಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಇದ್ದವು. ಉಪೇಂದ್ರ ಅವರ ಚಿತ್ರಪ್ರದರ್ಶನದ ಸಲುವಾಗಿ ಉತ್ತಮವಾಗಿ ಓಡುತಿದ್ದ ವಿಷ್ಣುವರ್ಧನ್‌ ನಟನೆಯ ‘ಆಪ್ತಮಿತ್ರ’ (2004) ಚಿತ್ರವನ್ನು ತೆಗೆದಾಗ ನಿರ್ಮಾಪಕ ದ್ವಾರಕೀಶ್ ನಮ್ಮ ವಿರುದ್ಧ ಪೋಲಿಸ್‌ಗೆ ದೂರು ನೀಡಿದ್ದೂ ಉಂಟು. ಹೀಗಾಗಿ ಅನಿವಾರ್ಯವಾಗಿ ಬಾಲ್ಕನಿಯ 180 ಆಸನಗಳ ಸಂಖ್ಯೆಯನ್ನು 360ಕ್ಕೆ ಹೆಚ್ಚಿಸಲಾಯಿತು’ ಎಂದು ಮೋಹನ್ ಹೇಳುತ್ತಾರೆ.

ಮಲ್ಟಿಪ್ಲೆಕ್ಸ್ ಹಾವಳಿ, ಆದಾಯದಲ್ಲಿ ಇಳಿಕೆ ಹಾಗೂ ಪ್ರೇಕ್ಷಕರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ‘ನವರಂಗ್’ ಚಿತ್ರಮಂದಿರವನ್ನು ಮಲ್ಟಿಪ್ಲೆಕ್ಸ್ ರೀತಿಯಲ್ಲಿ ಪುನರ್‌ನಿರ್ಮಾಣಗೊಳಿಸಲಾಗುತ್ತಿದೆ.

‘ಚಿತ್ರಮಂದಿರ ಕೆಡವಿ ಶಾಪಿಂಗ್ ಮಾಲ್ ಕಟ್ಟುವಂತೆ ಅನೇಕರಿಂದ ಒತ್ತಡ ಇತ್ತು. ‘ನವರಂಗ್’ ನಮ್ಮ ತಂದೆಯ ಕನಸು. ಹೀಗಾಗಿ ಇದನ್ನು ಕೆಡವದೆ ಪುನರ್‌ ನಿರ್ಮಾಣಗೊಳಿಸಲು ನಿರ್ಧರಿಸಲಾಗಿದೆ’ ಎನ್ನುತ್ತಾರೆ ಮೋಹನ್. ಇದಕ್ಕಾಗಿ ಮೋಹನ್ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚಮಾಡುತ್ತಿದ್ದಾರೆ.

ಹೆಮ್ಮೆಯ ಹೆಜ್ಜೆ ಗುರುತು

* ನವರಂಗ್ ಪ್ರದರ್ಶಿಸಿದ ಮೊದಲ 70ಎಂಎಂ ಚಿತ್ರ ಶಮ್ಮಿ ಕಪೂರ್‌ ಅಭಿನಯದ ‘ಕಾಶ್ಮೀರ್ ಕಿ ಕಲೀ’ (1964)

*ಮೊದಲ ಸಿನಿಮಾಸ್ಕೋಪ್ ಚಿತ್ರ ವಿಷ್ಣುವರ್ಧನ್‌ ಅಭಿನಯದ ‘ಬಿಳಿಗಿರಿಯ ಬನದಲ್ಲಿ’ (1980)

*ಮೊದಲು ಪ್ರದರ್ಶನಗೊಂಡ 3ಡಿ (ತ್ರೀ ಡಿ) ಚಿತ್ರ ಇಂಗ್ಲಿಷ್ ಭಾಷೆಯ ಟ್ರಾನ್ಸ್‌ಫಾರ್ಮರ್ಸ್‌ (ಜೂನ್ 30, 2011). ಇದಕ್ಕಾಗಿ ಕ್ರಿಸ್ಟಿ ಪ್ರೊಜೆಕ್ಟರ್ ಅಳವಡಿಕೆ.

*ಜೂನ್ 1, 2004ರಂದು ಕರ್ನಾಟಕದಲ್ಲಿಯೇ ಜಪಾನ್ ದೇಶದ ಲೇಸರ್ ಪ್ರೊಜೆಕ್ಷನ್ ಹೊಂದಿದ ಮೊದಲ ಚಿತ್ರಮಂದಿರ ಎಂಬ ಖ್ಯಾತಿ.

*ಜೂನ್ 8, 2009ರಂದು ಡಿಟಿಎಸ್ ಸೌಲಭ್ಯ.

ಹೆಚ್ಚು ಆದಾಯ ತಂದು ಕೊಟ್ಟ ಚಿತ್ರ

ಯೋಗರಾಜ್ ಭಟ್ ನಿರ್ದೇಶನದ, ‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿನಯದ ‘ಮುಂಗಾರುಮಳೆ’ (2006) ಅತ್ಯಂತ ಹೆಚ್ಚು ಆದಾಯ ತಂದು ಕೊಟ್ಟ ಚಿತ್ರ. ತನ್ನ ಶೇರ್‌ಗಳನ್ನು ಹೊರತುಪಡಿಸಿ ನವರಂಗ್ ನಿರ್ಮಾಪಕರಿಗೆ₹50ಲಕ್ಷಗಳಿಗಿಂತಲೂ ಅಧಿಕ ಲಾಭ ತಂದು ಕೊಟ್ಟಿದೆ. ದಿನಕ್ಕೆ ಎರಡು ಪ್ರದರ್ಶನಗಳಂತೆ ಈ ಚಿತ್ರ ಸತತವಾಗಿ 25 ವಾರ ಪ್ರದರ್ಶನ ಕಂಡಿದೆ.

‘ಡಿಗ್ನಿಟರಿ ಶೋ’

ಇಡೀ ಕರ್ನಾಟಕದಲ್ಲಿ ಬಹುಶಃ ‘ನವರಂಗ್’ ಚಿತ್ರಮಂದಿರ, ಡಾ. ರಾಜ್‌ಕುಮಾರ್‌, ಅವರ ಮಕ್ಕಳಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್ ರಾಜ್‌ಕುಮಾರ್‌ ಅವರ ಎಲ್ಲಾ ಚಿತ್ರಗಳನ್ನು ಪ್ರದರ್ಶಿಸಿದ ಏಕೈಕ ಚಿತ್ರಮಂದಿರ.
ಡಾ. ರಾಜ್‌ಕುಮಾರ್‌ ಅವರ ಪ್ರತಿಯೊಂದು ಚಿತ್ರವೂ ಇಲ್ಲಿ ಶತದಿನ ಆಚರಿಸಿದೆ. ಹೀಗಾಗಿ ಅನೇಕ ವರ್ಷಗಳ ಕಾಲ ‘ನವರಂಗ್’ ಚಿತ್ರಮಂದಿರವು ಡಾ. ರಾಜ್‌ಕುಮಾರ್‌ ಕುಟುಂಬದ ಚಿತ್ರಮಂದಿರ ಎಂಬ ಭಾವನೆ ಜನರಲ್ಲಿತ್ತು. ಅಂದಿನ ದಿನಗಳಲ್ಲಿ ಮೊದಲ ದಿನ ಮೊದಲ ಪ್ರದರ್ಶನ ‘ಡಿಗ್ನಿಟರಿ ಶೋ’ ಆಗಿರುತಿತ್ತು. ಡಾ. ರಾಜ್‌ಕುಮಾರ್, ಕಲ್ಪನಾ ಅವರಂತಹ ಪ್ರಖ್ಯಾತರು ‘ನವರಂಗ್‍’ನಲ್ಲಿ ‘ಡಿಗ್ನಿಟರಿ ಶೋ’ ನೋಡುತ್ತಿದ್ದರು. ‘ಡಿಗ್ನಿಟರಿ ಶೋ’ಗೆ ಬರುವ ಎಲ್ಲ ಪ್ರೇಕ್ಷಕರಿಗೂ ಕಾಫಿ ಹಾಗೂ ಬಿಸ್ಕೆಟ್ ವಿತರಿಸಲಾಗುತ್ತಿತ್ತು.

ಪ್ರದರ್ಶನ ನಿಲ್ಲಿಸಿದ್ದ ನವರಂಗ್

ದಂತಚೋರ ವೀರಪ್ಪನ್ ತಂಡದಿಂದ ಡಾ ರಾಜ್‌ಕುಮಾರ್‌ ಅಪಹರಣಕ್ಕೊಳಗಾದ ಸಂದರ್ಭದಲ್ಲಿ ನವರಂಗ್ ಮೂರು ತಿಂಗಳುಗಳ ಕಾಲ ಪ್ರದರ್ಶನ ನಿಲ್ಲಿಸಿತ್ತು. ಪ್ರದರ್ಶನ ಕೊನೆಗೊಳ್ಳುವ ಮೊದಲು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ‘ಸ್ಪರ್ಶ’ (2000) ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಪುನರ್‌ನಿರ್ಮಾಣಗೊಳಿಸುವ ಸಲುವಾಗಿ ಪ್ರದರ್ಶನ ನಿಲ್ಲಿಸಿದಾಗ ಕೊನೆಯ ಬಾರಿಗೆ ಪ್ರದರ್ಶನಗೊಂಡಿದ್ದು ಅಂಬರೀಷ್ ಅವರ ಪುತ್ರ ಅಭಿಷೇಕ್ ಅಭಿನಯದ ‘ಅಮರ್’ ಚಿತ್ರ.

₹85 ಸಾವಿರಕ್ಕೆ ಖರೀದಿಸಿದ ನಿವೇಶನ

ಆರಂಭದಲ್ಲಿ ಕೆಳಗೆ 640 ಆಸನಗಳು, ಬಾಲ್ಕನಿಯಲ್ಲಿ 180 ಆಸನಗಳಿದ್ದವು. ನಂತರ ಆಸನಗಳ ಸಂಖ್ಯೆಯನ್ನು 1000ಕ್ಕೆ ಹೆಚ್ಚಿಸಲಾಯಿತು. ಅಂದು ಕೆಳಗಿನ ಆಸನದ ಒಂದು ಟಿಕೆಟ್ ₹ 2, ಬಾಲ್ಕನಿಯ ಒಂದು ಟಿಕೆಟ್ ₹3.

ಪುನರ್‌ನಿರ್ಮಾಣಕ್ಕೆ ಪ್ರದರ್ಶನ ಸ್ಥಗಿತಗೊಂಡಾಗ ಕೆಳಗಿನ ಆಸನದ ಒಂದು ಟಿಕೆಟ್ ₹ 80, ಬಾಲ್ಕನಿಯ ಒಂದು ಟಿಕೆಟ್ ₹100. ಮುಂದೆ ಟಿಕೆಟ್ ಬೆಲೆಗಳು₹120 ಹಾಗೂ ₹150 ಆಗಲಿವೆ.

27 ಅಡಿ X54 ಅಡಿ ಅಗಲದ ಪರದೆ ಇನ್ನು ಮುಂದೆ 30 ಅಡಿ X60 ಅಡಿಗಳಷ್ಟಾಗಲಿದೆ. ಎರಡು ಚಿತ್ರಮಂದಿರಕ್ಕಾಗಿ ಮೋಹನ್ ಅರ್ಜಿ ಸಲ್ಲಿಸಿದ್ದಾರೆ. ಅನುಮತಿ ಸಿಕ್ಕ ನಂತರ ಬಾಲ್ಕನಿಯಲ್ಲಿ ಸುಮಾರು 500 ಆಸನಗಳ ಪ್ರತ್ಯೇಕ ಚಿತ್ರಮಂದಿರ ನಿರ್ಮಾಣವಾಗಲಿದೆ. ಒಟ್ಟಾರೆ ಆಸನಗಳ ಸಂಖ್ಯೆ 800 ಇರಲಿದೆ.

ಕೇವಲ ₹85 ಸಾವಿರಕ್ಕೆ ಖರೀದಿಸಿದ ನಿವೇಶನ ಇಂದು ಸುಮಾರು ₹60 ಕೋಟಿ ಬೆಲೆಬಾಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.