ನವದೆಹಲಿ: ಒಟಿಟಿ ಮತ್ತು ಇತರ ಆನ್‌ಲೈನ್ ವೇದಿಕೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ವಿಡಿಯೊಗಳ ನಿಯಂತ್ರಣಕ್ಕೆ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
‘ಚಲನಚಿತ್ರಗಳ ಪ್ರಸಾರದ ಕುರಿತು ನಿರ್ಧಾರ ತೆಗೆದುಕೊಳ್ಳಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಇದೆ. ಒಟಿಟಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಪ್ರಮಾಣಪತ್ರ ನೀಡಲು ಅಂತಹ ಯಾವುದೇ ಪ್ರಾಧಿಕಾರ ಇಲ್ಲ. ಆದ್ದರಿಂದ ಒಟಿಟಿಯಲ್ಲಿ ವಿವಾದಾತ್ಮಕ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತೋರಿಸಲಾಗುತ್ತಿದೆ’ ಎಂದು ವಕೀಲರಾದ ಶಶಾಂಕ್ ಶೇಖರ್ ಮತ್ತು ಅಪೂರ್ವ ಅರ್ಹತಿಯಾ ಸಲ್ಲಿಸಿರುವ ಪಿಐಎಲ್‌ನಲ್ಲಿ ಹೇಳಿದ್ದಾರೆ.
‘ಭಾರತದಲ್ಲಿ ಆನ್‌ಲೈನ್ ವೇದಿಕೆಗಳಲ್ಲಿ ವೀಕ್ಷಿಸಲು ಲಭ್ಯವಿರುವ ವಿಡಿಯೊಗಳನ್ನು ಪರಿಶೀಲಿಸಲು ಮತ್ತು ಒಟಿಟಿಯಲ್ಲಿ ಏನು ಪ್ರಸಾರ ಮಾಡಬೇಕು, ಮಾಡಬಾರದು ಎಂಬುದನ್ನು ನಿರ್ಧರಿಸಲು ‘ಸೆಂಟ್ರಲ್ ಬೋರ್ಡ್ ಫಾರ್ ರೆಗ್ಯುಲೇಷನ್ ಆ್ಯಂಡ್ ಮಾನಿಟರಿಂಗ್ ಆಫ್ ಆನ್‌ಲೈನ್ ವಿಡಿಯೊ ಕಂಟೆಂಟ್ಸ್’ ಹೆಸರಿನ ಮಂಡಳಿ ಸ್ಥಾಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.
ಒಟಿಟಿ ಪ್ಲಾಟ್‌ಫಾರ್ಮ್ ‘ನೆಟ್‌ಫ್ಲಿಕ್ಸ್’ನಲ್ಲಿ ಪ‍್ರಸಾರವಾಗುತ್ತಿರುವ ‘ಐಸಿ–814– ದಿ ಕಂದಹಾರ್ ಹೈಜಾಕ್’ ವೆಬ್‌ಸರಣಿಗೆ ಸಂಬಂಧಿಸಿದಂತೆ ಎದ್ದ ವಿವಾದದ ಬಗ್ಗೆಯೂ ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.
‘ವಿಮಾನದ ಅಪಹರಣಕಾರರ ಕೃತ್ಯವನ್ನು ಮರೆಮಾಚಲು ಮತ್ತು ಹಿಂದೂ ಸಮುದಾಯವನ್ನು ದೂಷಿಸಲು ವೆಬ್ ಸರಣಿಯಲ್ಲಿ ಪ್ರಯತ್ನಿಸಲಾಗಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.