ADVERTISEMENT

ಮುಖದ ಪಾರ್ಶ್ವವಾಯುವಿಗೆ ತುತ್ತಾದ ಪಾಪ್ ಸಿಂಗರ್ ಜಸ್ಟಿನ್ ಬೀಬರ್‌!

ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಕೆನಡಿಯನ್ ಗಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2022, 10:11 IST
Last Updated 12 ಜೂನ್ 2022, 10:11 IST
ಜಸ್ಟಿನ್ ಬೀಬರ್, ಚಿತ್ರ ಕೃಪೆ–ಇನ್‌ಸ್ಟಾಗ್ರಾಂ
ಜಸ್ಟಿನ್ ಬೀಬರ್, ಚಿತ್ರ ಕೃಪೆ–ಇನ್‌ಸ್ಟಾಗ್ರಾಂ   

ಬೆಂಗಳೂರು: ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಅವರು ಅಭಿಮಾನಿಗಳಿಗೆ ಹಾಗೂ ಸಂಗೀತ ಲೋಕಕ್ಕೆ ಶಾಕಿಂಗ್ ಸುದ್ದಿ ನೀಡಿದ್ದಾರೆ. ಹೌದು 28ವರ್ಷದ ಈ ಕೆನಡಿಯನ್ ಗಾಯಕ ಬೀಬರ್ ಮುಖದ ಪಾರ್ಶ್ವವಾಯುವಿಗೆ (ಪ್ಯಾರಾಲಿಸೀಸ್) ತುತ್ತಾಗಿದ್ದಾರೆ.

ಸ್ವತಃ ಜಸ್ಟಿನ್ ಬೀಬರ್ ಅವರೇ ಈ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದು, ಸದ್ಯ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

‘ನನಗೆ ರಾಮ್‌ಸೆ ಹಂಟ್ ಸಿಂಡ್ರೋಮ್‌ (Ramsay Hunt syndrome) ವೈರಸ್ ಸೋಂಕು ತಗುಲಿದ್ದು, ಇದರಿಂದ ನನ್ನ ಮುಖದ ಬಲಭಾಗ ಪಾರ್ಶ್ವವಾಯುವಿಗೆ ತುತ್ತಾಗಿದೆ. ಈ ವೈರಸ್ ಮುಖದ ಹಾಗೂ ಕಿವಿಯ ನರಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ನೀವು ನೋಡುವಂತೆ ದೈಹಿಕವಾಗಿ ನಾನು ಮುಂದಿನ ಕೆಲ ಶೋಗಳನ್ನು ನಡೆಸಲು ಆಗುವುದಿಲ್ಲ. ನಿಸ್ಸಂಶಯವಾಗಿ ನೀವು ನೋಡುವಂತೆ ಇದು ಬಹಳ ಗಂಭೀರವಾಗಿದೆ. ನನಗಾಗಿ ಪ್ರಾರ್ಥಿಸಿ ಸ್ನೇಹಿತರೇ, ಐ ಲವ್ ಯು’ ಎಂದು ಬೀಬರ್ ಹೇಳಿದ್ದಾರೆ.

ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ 4.50 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಬೀಬರ್ ಬೇಗ ಹುಶಾರಾಗಿ ಬಾ ಎಂದು ಪ್ರಾರ್ಥಿಸಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 24 ಕೋಟಿ ಜನ ಅನುಯಾಯಿಗಳಿದ್ದಾರೆ.

ಬೀಬರ್ ಮುಖದ ಪಾರ್ಶ್ವವಾಯುವಿಗೆ ತುತ್ತಾಗಿರುವುದರಿಂದ ಅವರ ಮುಖದ ಬಲಭಾಗದ ಚಲನವಲನಗಳು ನಡೆಯುತ್ತಿಲ್ಲ. ಕಣ್ಣು ಮಿಟುಕಿಸುತ್ತಿಲ್ಲ, ಬಲ ನಾಸಿಕ ಹೊರಳುತ್ತಿಲ್ಲ. ಇದರಿಂದ ಜಸ್ಟಿನ್ ಬೀಬರ್ ಅಭಿಮಾನಿಗಳು ತೀವ್ರ ಶಾಕ್‌ಗೆ ಒಳಗಾಗಿದ್ದಾರೆ.

ಮುಂಬರುವ ವಾರಗಳಲ್ಲಿ ಟೊರಂಟೊ, ವಾಷಿಂಗ್ಟನ್ ಹಾಗೂ ನ್ಯೂಯಾರ್ಕ್‌ನಲ್ಲಿ ಅವರ ಸಂಗೀತ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಸದ್ಯ ಅವು ಮುಂದಕ್ಕೆ ಹೋದಂತಾಗಿವೆ. ‘ನಾನು ಖಂಡಿತವಾಗಿ ಇದರಿಂದ ಗುಣಮುಖನಾಗಿ ಹೊರ ಬರಲಿದ್ದೇನೆ. ಆದರೆ, ಯಾವಾಗ ಎಂಬುದು ಗೊತ್ತಿಲ್ಲ’ ಎಂದು ಬೀಬರ್ ಹೇಳಿದ್ದಾರೆ.

ರಾಮ್‌ಸೆ ಹಂಟ್ ಸಿಂಡ್ರೋಮ್‌ ತಗುಲಿದ ವ್ಯಕ್ತಿಯ ಮುಖದ ಒಂದು ಭಾಗ ಹಾಗೂ ಆ ಭಾಗದ ಕಿವಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಮುಖದ ಪಾರ್ಶ್ವವಾಯು ಸಂಭವಿಸುತ್ತದೆ. ಈ ರೋಗ ಬಹುಪಾಲು ಪ್ರಕರಣಗಳಲ್ಲಿ ಗುಣಪಡಿಸಬಹುದಾಗಿದೆ. ಆದರೆ ಕೆಲ ವಿರಳ ಪ್ರಕರಣಗಳಲ್ಲಿ ವ್ಯಕ್ತಿ ಸಾಯುವವರೆಗೂ ಶಾಶ್ವತವಾಗಿ ಉಳಿದುಬಿಡಬಹುದು.

ಸಾಮಾನ್ಯವಾಗಿ ಈ ರೋಗ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಜಸ್ಟಿನ್ ಬಿಬಿರ್‌ಗೆ ಕಂಡು ಬಂದಿರುವ ಮುಖದ ಪಾರ್ಶ್ವವಾಯುವನ್ನು ಬೇಗನೇ ಗುಣಪಡಿಸಬಹುದಾಗಿದೆ ಎಂದು ಕೆಲ ವೈದ್ಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.