ಕೋಲ್ಕತ್ತ: ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (53) ಅವರು ಮಂಗಳವಾರ ರಾತ್ರಿ ಕೋಲ್ಕತ್ತದಲ್ಲಿ ನಿಧನರಾಗಿದ್ದಾರೆ.
ಕಾರ್ಯಕ್ರಮ ನೀಡುತ್ತಲೇ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಅದನ್ನು ಲೆಕ್ಕಿಸದೆ ಕೊನೆಯ ಶೋ ಪೂರ್ತಿಗೊಳಿಸಿದ್ದಾರೆ.
ನಂತರ ಅವರು ಹೋಟೆಲ್ ರೂಮ್‌ಗೆ ತೆರಳಿದ್ದು, ಅಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದರೆ, ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಗಾಯನ ಕ್ಷೇತ್ರದಲ್ಲಿ ‘ಕೆಕೆ’ ಎಂದೇ ಜನಪ್ರಿಯರಾಗಿದ್ದ ಅವರ ಕೊನೆಯ ಲೈವ್ ಶೋ ವಿಡಿಯೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮ ನೀಡುತ್ತಿರುವಾಗಲೇ ಅವರು ಉಸಿರಾಟದ ಸಮಸ್ಯೆ ಎದುರಿಸಿದ್ದರು. ಜತೆಗೆ ಸ್ಪಾಟ್‌ಲೈಟ್‌ಗಳನ್ನು ಆಫ್ ಮಾಡುವಂತೆ ಮತ್ತು ಸ್ಮೋಕ್ ನಿಲ್ಲಿಸುವಂತೆ ಕೇಳಿಕೊಂಡಿದ್ದರು. ಅಲ್ಲದೆ ಬ್ರೇಕ್ ಅವಧಿಯಲ್ಲಿ ವೇದಿಕೆ ಹಿಂಭಾಗಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಕಾರ್ಯಕ್ರಮದ ಸಂಯೋಜಕರು ಒಬ್ಬರು ತಿಳಿಸಿದ್ದಾರೆ.
ಆದರೆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲು ಕೆಕೆ ಒಪ್ಪಲಿಲ್ಲ. ಕಷ್ಟವಾದರೂ ಶೋ ಮುಂದುವರಿಸುತ್ತೇನೆ ಎಂದು ಹೇಳಿ ಅದರಂತೆ ನಡೆದುಕೊಂಡರು. ಗಾಯನ ಅವರ ಉಸಿರಾಗಿತ್ತು. ಕೊನೆಯವರೆಗೂ ಹಾಡು ಹಾಡುತ್ತಲೇ ಇಹಲೋಕ ತ್ಯಜಿಸಿದರು ಎಂದು ಕೆಕೆ ಅವರ ಮ್ಯಾನೇಜರ್ ರಿತೇಶ್ ಭಟ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.