ಕೋಲ್ಕತ್ತ: ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (53) ಅವರ ನಿಧನಕ್ಕೆ ಸಂಬಂಧಿಸಿ ಕೋಲ್ಕತ್ತದ ನ್ಯೂ ಮಾರ್ಕೆಟ್ ಪೊಲೀಸರುಸ್ವಯಂ ಪ್ರೇರಿತವಾಗಿಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕುಟುಂಬಸ್ಥರ ಒಪ್ಪಿಗೆ ದೊರೆತ ಬಳಿಕ ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ಟ್ವೀಟ್ ಮಾಡಿದೆ.
ಕುಟುಂಬಸ್ಥರು ಈಗಾಗಲೇ ಆಸ್ಪತ್ರೆಗೆ ತಲುಪಿದ್ದಾರೆ. ಇತ್ತ ಕೋಲ್ಕತ್ತದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೋಲ್ಕತ್ತದ ಜಂಟಿ ಪೊಲೀಸ್ ಕಮಿಷನರ್ (ಅಪರಾಧ ವಿಭಾಗ) ಮುರಳೀಧರ್ ಶರ್ಮಾ ನೇತೃತ್ವದ ಅಧಿಕಾರಿಗಳ ತಂಡ ಕೃಷ್ಣಕುಮಾರ್ ಕುನ್ನತ್ ತಂಗಿದ್ದ ಹೋಟೆಲ್ ಒಬೆರಾಯ್ ಗ್ರ್ಯಾಂಡ್‌ಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
‘ಕೃಷ್ಣಕುಮಾರ್ ಕುನ್ನತ್ ಅವರು ಕೋಲ್ಕತ್ತದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಹಾಡಿದ್ದರು. ಆದರೆ, ಹೋಟೆಲ್ ತಲುಪಿದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೃಷ್ಣಕುಮಾರ್ ಕುನ್ನತ್ ಅವರು ಕನ್ನಡ, ತಮಿಳು, ತೆಲುಗು, ಮಲಯಾಳ, ಮರಾಠಿ, ಬೆಂಗಾಲಿ ಭಾಷೆಗಳಲ್ಲೂ ಹಾಡಿದ್ದಾರೆ. ಅವರು ‘ಕೆಕೆ’ ಎಂದೇ ಖ್ಯಾತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.