ADVERTISEMENT

ದೇಗುಲದ ಆವರಣದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ನ ಇಬ್ಬರ ವಿರುದ್ಧ ಎಫ್‌ಐಆರ್‌

ರಾಯಿಟರ್ಸ್
Published 23 ನವೆಂಬರ್ 2020, 14:41 IST
Last Updated 23 ನವೆಂಬರ್ 2020, 14:41 IST
'ಎ ಸೂಟಬಲ್‌ ಬಾಯ್‌' ವೆಬ್‌ ಸರಣಿಯ ಸನ್ನಿವೇಶ
'ಎ ಸೂಟಬಲ್‌ ಬಾಯ್‌' ವೆಬ್‌ ಸರಣಿಯ ಸನ್ನಿವೇಶ    

ಭೋಪಾಲ: ದೇವಾಲಯದ ಆವರಣದಲ್ಲಿ ಪ್ರೇಮಿಗಳಿಬ್ಬರು ಚುಂಬಿಸಿಸುವ ದೃಶ್ಯವಿರುವ ' ಎ ಸೂಟಬಲ್‌ ಬಾಯ್‌' ಎಂಬ ಹೆಸರಿನ ವೆಬ್‌ ಸರಣಿ ಪ್ರಸಾರ ಮಾಡಿದ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ, ಧಾರ್ಮಿಕ ಭಾವನೆಗಳಿಗೆ ಭಂಗ ತಂದ ಆರೋಪದ ಅಡಿಯಲ್ಲಿ ಸೋಮವಾರ ಮಧ್ಯಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಎಫ್‌ಐಆರ್ನಲ್ಲಿ ನೆಟ್‌ಫ್ಲಿಕ್ಸ್‌ನ ಉಪಾಧ್ಯಕ್ಷೆ ಮೋನಿಕಾ ಶೆರ್ಗಿಲ್ ಮತ್ತು ಸಾರ್ವಜನಿಕ ನೀತಿಗಳ ನಿರ್ದೇಶಕಿ ಅಂಬಿಕಾ ಖುರಾನಾ ಅವರನ್ನು ಹೆಸರಿಸಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

ADVERTISEMENT

'ಈ ಮಧ್ಯೆ, ವಿವಾದಾತ್ಮಕ ಚುಂಬನ ದೃಶ್ಯಗಳನ್ನು ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪಟ್ಟಣದ ದೇವಾಲಯದೊಳಗೆ ಚಿತ್ರೀಕರಿಸಿದಂತೆ ಕಾಣುತ್ತಿಲ್ಲ,' ಎಂದು ಜಿಲ್ಲಾಧಿಕಾರಿ ಅನುಗ್ರಹ್‌ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಏನಿದು ವಿವಾದ?

ಹಿಂದೂ ದೇಗುಲದ ಹಿನ್ನೆಲೆ ಇರುವ ಸನ್ನಿವೇಶವೊಂದರಲ್ಲಿ ಮುಸ್ಲಿಂ ಯುವಕನನ್ನು ಹಿಂದೂ ಯುವತಿಯೊಬ್ಬಳು ಚುಂಬಿಸುವ ದೃಶ್ಯವಿರುವ 'ಎ ಸೂಟಬಲ್‌ ಬಾಯ್‌' ಎಂಬ ಹೆಸರಿನ ವೆಬ್‌ ಸರಣಿಯನ್ನು ನೆಟ್‌ಫ್ಲಿಕ್ಸ್‌ ಪ್ರಸಾರ ಮಾಡುತ್ತಿದೆ.

ಈ ಸರಣಿಯು ಭಾರತದ ಪ್ರಮುಖ ಬರಹಗಾರ ವಿಕ್ರಮ್ ಸೇಠ್ ಅವರ ಇಂಗ್ಲಿಷ್ ಕಾದಂಬರಿಯನ್ನು ಆಧರಿಸಿದ್ದಾಗಿದ್ದು, ಯುವತಿಯೊಬ್ಬಳು ತನ್ನಿಷ್ಟದ ಪತಿಯನ್ನು ಅನ್ವೇಷಿಸುವುದು ಸರಣಿಯ ಕಥಾ ಹಂದರ. ಇದನ್ನು ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ನಿರ್ದೇಶಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ಯುವ ಮೋರ್ಚ ಸಿಡಿದೆದ್ದಿತ್ತು.

'ಮಧ್ಯಪ್ರದೇಶದ ನರ್ಮದಾ ದಡದಲ್ಲಿರುವ ಐತಿಹಾಸಿಕ ಪಟ್ಟಣ ಮಹೇಶ್ವರ ದೇವಾಲಯದೊಳಗೆ ಚುಂಬನ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ. ಇದು 'ಲವ್ ಜಿಹಾದ್' ಅನ್ನು ಸಹ ಪ್ರೋತ್ಸಾಹಿಸುತ್ತಿದೆ' ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರ ಘಟಕದ ಕಾರ್ಯದರ್ಶಿ ಗೌರವ್‌ ತಿವಾರಿ ಹೇಳಿದ್ದರು. ಅಲ್ಲದೆ, ರೇವಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದ ಅವರು, ನೆಟ್‌ಫ್ಲಿಕ್ಸ್‌ ಮತ್ತು ಸರಣಿಯ ನಿರ್ಮಾಪಕರು ಕ್ಷಮೆಯಾಚಿಸಬೇಕು. 'ಎ ಸೂಟಬಲ್ ಬಾಯ್' ನಿಂದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಬೇಕೆಂದು ಆಗ್ರಹಿಸಿದ್ದರು.

ಇದೇ ಹಿನ್ನೆಲೆಯಲ್ಲಿ ಇಂದು ನೆಟ್‌ಫ್ಲಿಕ್ಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.